news18-kannada Updated:October 10, 2020, 8:32 PM IST
ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ ಏಳು ಪಂದ್ಯಗಳಲ್ಲಿ ಬರೋಬ್ಬರಿ ಆರು ಸೋಲುಕಂಡಿದೆ. ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಇದೇ ಮೊದಲ ಬಾರಿ ಕ್ಯಾಪ್ಟನ್ ಕ್ಯಾಪ್ ತೊಟ್ಟ ಕೆ ಎಲ್ ರಾಹುಲ್ಗೆ ದೊಡ್ಡ ಹಿನ್ನಡೆಯಾಗಿದೆ.
ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ರನ್ಗಳ ರೋಚಕ ಗೆಲುವು ಸಾಧಿಸಿತು. ಸುಲಭ ಜಯ ಸಾಧಿಸಬಹುದಾಗಿದ್ದ ಪಂದ್ಯದಲ್ಲಿ ರಾಹುಲ್ ಪಡೆ ಕೊನೆಯ ಎಸೆತದವರೆಗೂ ಪರದಾಡಿತು. ಆದರೂ ಗೆಲುವು ಕಾಣಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ.
ಕೆಕೆಆರ್ ನೀಡಿದ್ದ 165 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಂಜಾಬ್ 115 ರನ್ಗಳವರೆಗೆ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಓಪನರ್ಗಳಾದ ನಾಯಕ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿ ತಂಡದ ಗೆಲುವನ್ನು ಖಚಿತ ಪಡಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ನಡೆದಿದ್ದೇ ಬೇರೆ.
ಮಯಾಂಕ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಿಡಿಸಿ 56 ರನ್ ಗಳಿಸಿ ಔಟ್ ಆದರೆ, ನಿಕೋಲಸ್ ಪೂರನ್ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿ 16 ರನ್ಗೆ ನಿರ್ಗಮಿಸಿದರು. ಈ ಸಂದರ್ಭ ಪಂಜಾಬ್ ಗೆಲುವಿಗೆ 16 ಎಸೆತಗಳಲ್ಲಿ 21 ರನ್ಗಳ ಅವಶ್ಯಕತೆಯಿತ್ತು.
IPL 2020 LIVE Score, CSK vs RCB
ಈವೇಳೆ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು 19ನೇ ಓವರ್ ಮಾಡಿದ ಪ್ರಸಿದ್ಧ್ ಕೃಷ್ಣ. ಹೌದು, ಕರ್ನಾಟಕದ ಈ ಬೌಲರ್ ಮಿನಿ ಕರ್ನಾಟಕವಾಗಿದ್ದ ಪಂಜಾಬ್ಗೆ ಕಂಟಕವಾಗಿ ಪರಿಣಮಿಸಿದರು. ತನ್ನ 6 ಎಸೆತಗಳಲ್ಲಿ ಪ್ರಸಿದ್ಧ್ ನೀಡಿದ್ದು ಕೇವಲ 6 ರನ್ ಜೊತೆಗೆ 2 ಪ್ರಮುಖ ವಿಕೆಟ್ ಕಿತ್ತರು.
ತನ್ನ 4ನೇ ಎಸೆತದಲ್ಲಿ ಸಿಮ್ರನ್ ಸಿಂಗ್(4) ಅವರನ್ನು ಔಟ್ ಮಾಡಿದರೆ, ಕೊನೆಯ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್ಮನ್ ಕೆ. ಎಲ್ ರಾಹುಲ್(74) ಅವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ಗೆ ಅಟ್ಟಿದರು. ಹೀಗೆ ಪ್ರಸಿದ್ಧ್ ಕೃಷ್ಣ ಪಂದ್ಯದ ಗತಿಯನ್ನೇ ಬದಲಾಯಿಸಿದ ಕಾರಣ ಪಂಜಾಬ್ಗೆ ಕೊನೆಯ ಓವರ್ನಲ್ಲಿ ಗೆಲ್ಲಲು 14 ರನ್ಗಳು ಬೇಕಾಯಿತು.
ಕ್ರೀಸ್ನಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮಂದೀಪ್ ಸಿಂಗ್ ಗೆಲುವಿಗೆ ಹೋರಾಟ ನಡೆಸಿದರಾದರೂ ಸುನೀಲ್ ನರೈಸ್ ಸ್ಪಿನ್ ಜಾದುವಿನ ಎದುರು ಗೆಲುವು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ಆದರೆ, ಮ್ಯಾಕ್ಸ್ವೆಲ್ ಬೌಂಡರಿ ಬಾರಿಸಲಷ್ಟೇ ಶಕ್ತರಾದರು.
ಸದ್ಯ ಪಂಜಾಬ್ ಆಡಿದ ಏಳು ಪಂದ್ಯಗಳಲ್ಲಿ ಬರೋಬ್ಬರಿ ಆರು ಸೋಲುಕಂಡಿದೆ. ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಇದೇ ಮೊದಲ ಬಾರಿ ಕ್ಯಾಪ್ಟನ್ ಕ್ಯಾಪ್ ತೊಟ್ಟ ರಾಹುಲ್ಗೆ ದೊಡ್ಡ ಹಿನ್ನಡೆಯಾಗಿದೆ.
Published by:
Vinay Bhat
First published:
October 10, 2020, 8:32 PM IST