CSK vs KXIP: ವಾಟ್ಸನ್-ಡುಪ್ಲೆಸಿಸ್ ಜುಗಲ್ ಬಂದಿ: ಚೆನ್ನೈ ಕಿಂಗ್ಸ್​ ಮುಂದೆ ಮಂಡಿಯೂರಿದ ಪಂಜಾಬ್ ಕಿಂಗ್ಸ್

IPL 2020, CSK vs KXIP: ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ 12 ಬಾರಿ ವಿಜಯ ಸಾಧಿಸಿದ್ರೆ 9 ಸಲ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ತನ್ನದಾಗಿಸಿದೆ.

csk

csk

 • Share this:
  ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 18ನೇ ಪಂದ್ಯದಲ್ಲಿ  ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 10 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಪಂಜಾಬ್ ನೀಡಿದ 179 ರನ್​ಗಳನ್ನು ಬೆನ್ನತ್ತಿದ ಸಿಎಸ್​ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ (87) ಶೇನ್ ವಾಟ್ಸನ್ (83)  ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಗುರಿ ಮುಟ್ಟಿತು. ಇದಕ್ಕೂ ಮುನ್ನ  ಬೃಹತ್ ಮೊತ್ತವನ್ನು ಬೆನ್ನತಿದ ಸಿಎಸ್​ಕೆಗೆ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಉತ್ತಮ ಆರಂಭ ಒದಗಿಸಿದರು. ಮೊದಲ 3 ಓವರ್​ನಲ್ಲಿ 25 ರನ್ ಪೇರಿಸಿದ ಓಪನಿಂಗ್ ಜೋಡಿ ಪವರ್ ಪ್ಲೇ ಅಂತ್ಯಕ್ಕೆ ತಂಡದ ಮೊತ್ತವನ್ನು 60 ರನ್​ಗೆ ತಂದು ನಿಲ್ಲಿಸಿದರು.

  ಪವರ್ ಪ್ಲೇ ಮುಕ್ತಾಯದ ಬೆನ್ನಲ್ಲೇ ಆರ್ಭಟಿಸಲು ಆರಂಭಿಸಿದ ಡುಪ್ಲೆಸಿಸ್-ವಾಟ್ಸನ್ 10ನೇ ಓವರ್ ಮುಕ್ತಾಯಕ್ಕೆ ತಂಡದ ಸ್ಕೋರ್​ನ್ನು 100ರ ಗಡಿದಾಟಿಸಿದರು. ಇದರ ಬೆನ್ನಲ್ಲೇ ವಾಟ್ಸನ್ 31 ಎಸೆತಗಳಲ್ಲಿ ತಮ್ಮ 27ನೇ ಐಪಿಎಲ್ ಹಾಫ್ ಸೆಂಚುರಿಯನ್ನು ಪೂರೈಸಿದರು. ಇದರೊಂದಿಗೆ 33 ಎಸೆತಗಳನ್ನು ಎದುರಿಸಿದ ಡು ಪ್ಲೆಸಿಸ್ ಕೂಡ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು.

  ಎಲ್ಲಾ ಹಂತದಲ್ಲೂ ಪಂಜಾಬ್ ಬೌಲರುಗಳ ವಿರುದ್ಧ ಪರಾಕ್ರಮ ಮೆರೆದ ಸಿಎಸ್​ಕೆ ಆರಂಭಿಕ ಬ್ಯಾಟ್ಸ್​ಮನ್​ಗಳು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಅತ್ತ ಯಾವುದೇ ವಿಕೆಟ್ ಪಡೆಯಲಾಗದೇ ಪರದಾಡಿದ ಪಂಜಾಬ್ ಬೌಲರುಗಳು ಸಂಪೂರ್ಣ ಹಳಿ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಅನುಭವಿ ವಾಟ್ಸನ್​-ಡುಪ್ಲೆಸಿಸ್ ಅಬ್ಬರಿಸಿದರು. ಪರಿಣಾಮ 17.4 ಓವರ್​ನಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ 181 ರನ್ ಬಾರಿಸಿ ಗುರಿ ಮುಟ್ಟಿತು.

  53 ಎಸೆತಗಳನ್ನು ಎದುರಿಸಿದ ಫಾಫ್ ಡುಪ್ಲೆಸಿಸ್ 11 ಬೌಂಡರಿ, 1 ಸಿಕ್ಸರ್​ನೊಂದಿಗೆ 87 ರನ್ ಬಾರಿಸಿದರೆ, ಶೇನ್ ವಾಟ್ಸನ್ 53 ಎಸೆತಗಳಿಂದ 83 ರನ್ ಕಲೆಹಾಕಿದರು. ಇದರಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳು ಮೂಡಿಬಂದಿದ್ದವು. ಪಂಜಾಬ್ ಪರ 3 ಓವರ್​ಗಳಲ್ಲಿ 42 ರನ್ ನೀಡಿ ದುಬಾರಿ ಎನಿಸಿಕೊಂಡರು.

   ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ನಾಯಕ ಕೆಎಲ್ ರಾಹುಲ್  ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ರಾಹುಲ್ ಉತ್ತಮ ಆರಂಭ ಒದಗಿಸಿದರು.

  ಮೊದಲ 3 ಮೂರು ಓವರ್​ಗಳಲ್ಲಿ 19 ರನ್​ ಕಲೆಹಾಕಿದ ಈ ಜೋಡಿ ಪವರ್ ಪ್ಲೇ ಮುಕ್ತಾಯದ ವೇಳೆ ತಂಡದ ಮೊತ್ತವನ್ನು 46 ಕ್ಕೆ ತಂದು ನಿಲ್ಲಿಸಿದರು. ಬಳಿಕ ವೇಗದ ಆಟಕ್ಕೆ ಒತ್ತು ನೀಡಿದರೂ, ಮಯಾಂಕ್ ಅಗರ್ವಾಲ್ (26) ಪಿಯೂಷ್ ಚಾವ್ಲಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದರು.

  ಬಳಿಕ ನಾಯಕನ ಜೊತೆಗೂಡಿದ ಮಂದೀಪ್ ಸಿಂಗ್ ಆರಂಭದಲ್ಲೇ ಸಿಎಸ್​ಕೆ ಬೌಲರುಗಳ ವಿರುದ್ಧ ತಿರುಗಿ ಬಿದ್ದರು. ಅದರಲ್ಲೂ 11ನೇ ಓವರ್​ನಲ್ಲಿ ಪಿಯೂಷ್ ಚಾವ್ಲಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ರವೀಂದ್ರ ಜಡೇಜಾ ಎಸೆತದಲ್ಲಿ ರಾಯುಡುಗೆ ಸುಲಭ ಕ್ಯಾಚ್ ನೀಡಿ 16 ಎಸೆತಗಳಲ್ಲಿ 27 ರನ್ ಬಾರಿಸಿ ನಿರ್ಗಮಿಸಿದರು.

  ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಕೆಎಲ್ ರಾಹುಲ್, 45 ಎಸೆತಗಳಲ್ಲಿ ಭರ್ಜರಿ ಸಿಕ್ಸರ್​ನೊಂದಿಗೆ ಅರ್ಧಶತಕ ಪೂರೈಸಿದರು. ಅಲ್ಲದೆ ಶಾರ್ದುಲ್ ಠಾಕೂರ್​ ಅವರ 15ನೇ ಓವರ್​ನಲ್ಲಿ 16 ರನ್ ಬಾಚಿಕೊಂಡರು. 15 ಓವರ್​ಗಳಲ್ಲಿ 130 ರನ್ ಪೇರಿಸಿದ ಪಂಜಾಬ್ ಬ್ಯಾಟ್ಸ್​ಮನ್​ಗಳು, ಕೊನೆಯ ಓವರ್​ಗಳಲ್ಲಿ ಅಬ್ಬರಿಸಲು ಪ್ರಾರಂಭಿಸಿದರು. ಪರಿಣಾಮ 17ನೇ ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 152 ಕ್ಕೆ ಬಂದು ನಿಂತಿತು.

  3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಪೂರನ್ ಬಿಗ್ ಹಿಟ್​ಗೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಧೋನಿಗೆ ಕ್ಯಾಚ್​ ನೀಡಿ ಕೆಎಲ್ ರಾಹುಲ್ (63) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. 18ನೇ ಓವರ್ ಎಸೆದ ಶಾರ್ದುಲ್ ಠಾಕೂರ್ 2 ವಿಕೆಟ್​ ಉರುಳಿಸಿ ನೀಡಿದ್ದು ಬರೀ 3 ರನ್ ಮಾತ್ರ.

  ಆದರೆ ಕೊನೆಯ ಎರಡು ಓವರ್​ಗಳಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಮ್ಯಾಕ್ಸ್​ವೆಲ್ ಹಾಗೂ ಸರ್ಫರಾಜ್ ಖಾನ್ ಜೋಡಿ 23 ರನ್​ ಕಲೆಹಾಕುವುದರೊಂದಿಗೆ ತಂಡದ ಮೊತ್ತವನ್ನು ನಿಗದಿತ 20 ಓವರ್​ನಲ್ಲಿ 178ಕ್ಕೆ ತಂದು ನಿಲ್ಲಿಸಿದರು. ಚೆನ್ನೈ ಸೂಪರ್ ಕಿಂಗ್ಸ್​ ಪರ ಶಾರ್ದುಲ್ ಠಾಕೂರ್ 4 ಓವರ್​ನಲ್ಲಿ 39 ರನ್ ನೀಡಿದ 2 ವಿಕೆಟ್ ಕಬಳಿಸಿದರು.

  179 ರನ್​ಗಳ ಗುರಿಯನ್ನು ಭರ್ಜರಿಯಾಗಿ ಬೆನ್ನತ್ತಿ 10 ವಿಕೆಟ್​ಗಳ ಸೂಪರ್ ಗೆಲುವು ದಾಖಲಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್​ ಅಂಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: Irfan Pathan: ವಯಸ್ಸು ಎನ್ನುವುದು ಕೆಲವರಿಗೆ ಸಂಖ್ಯೆ, ಉಳಿದವರಿಗೆ ತಂಡದಿಂದ ಕೈಬಿಡಲು ಕಾರಣ..!
  Published by:zahir
  First published: