ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ನ 8ನೇ ಪಂದ್ಯವು ಸೋತವರ ಸೆಣಸು. ಹೌದು, ಇಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ರೈಡರ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಎಸ್ಹೆಚ್ಆರ್ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ನಾಯಕನ ಜೊತೆ ಕಣಕ್ಕಿಳಿದ ಜಾನಿ ಬೈರ್ಸ್ಟೋವ್ ಉತ್ತಮ ಆರಂಭ ಒದಗಿಸಿದರು.
ಆದರೆ ಪ್ಯಾಟ್ ಕಮಿನ್ಸ್ ಎಸೆದ ನಾಲ್ಕನೇ ಓವರ್ನ ಕೊನೆಯ ಬಾಲ್ನ್ನು ಗುರುತಿಸಲು ಎಡವಿದ ಬೈರ್ಸ್ಟೋವ್ (5) ಕ್ಲೀನ್ ಬೌಲ್ಡ್ ಆದರು. ಈ ಬಳಿಕ ಜೊತೆಗೂಡಿದ ವಾರ್ನರ್ -ಮನೀಷ್ ಪಾಂಡೆ ಜೋಡಿ 31 ರನ್ಗಳ ಜೊತೆಯಾಟದೊಂದಿಗೆ 9 ಓವರ್ಗಳಲ್ಲಿ ತಂಡದ ಮೊತ್ತವನ್ನು 59 ಕ್ಕೇರಿಸಿದರು. ಇದೇ ವೇಳೆ 10ನೇ ಓವರ್ನಲ್ಲಿ ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ವಾರ್ನರ್ (36) ನಿರ್ಗಮಿಸಿದರು.
ನಾಯಕ ನಿರ್ಗಮನದೊಂದಿಗೆ ಹೈದರಾಬಾದ್ ರನ್ ಗತಿಯು ನಿಧಾನಗೊಂಡಿತು. ಪರಿಣಾಮ 15 ಓವರ್ಗಳಲ್ಲಿ ಸನ್ರೈಸರ್ಸ್ ಗಳಿಸಿದ್ದು 99 ರನ್ಗಳು ಮಾತ್ರ. ಪಂದ್ಯ ಮೇಲೆ ಹಿಡಿತ ಸಾಧಿಸಿದ್ದ ಕೆಕೆಆರ್ ಬೌಲರುಗಳು ಮನೀಷ್ ಪಾಂಡೆ ಹಾಗೂ ವೃದ್ಧಿಮಾನ್ ಸಾಹ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಇತ್ತ ಪಾಂಡೆ ದೊಡ್ಡ ಹೊಡೆತಕ್ಕೆ ಮುಂದಾದರೂ ನಿರೀಕ್ಷಿತ ಫಲ ಸಿಗಲಿಲ್ಲ. ಹೀಗಾಗಿ 17 ಓವರ್ನಲ್ಲಿ ಎಸ್ಆರ್ಹೆಚ್ 118 ರನ್ ಮಾತ್ರ ಪೇರಿಸಲು ಸಾಧ್ಯವಾಯಿತು. ಇತ್ತ 36 ಎಸೆತಗಳಲ್ಲಿ ಮನೀಷ್ ಪಾಂಡೆ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ರಸೆಲ್ಗೆ ಕ್ಯಾಚ್ ನೀಡಿದ ಪಾಂಡೆ 51 ರನ್ನೊಂದಿಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಕೊನೆಯ ಎರಡು ಓವರ್ಗಳಿರುವಾಗ ಕ್ರೀಸ್ಗಿಳಿದ ಮೊಹಮ್ಮದ್ ನಬಿ ಬಿರುಸಿನ ಆಟಕ್ಕೆ ಮುಂದಾರೂ ಕೆಕೆಆರ್ ಬೌಲರುಗಳ ನಿಖರ ದಾಳಿ ಮುಂದೆ ಪರದಾಡಿದರು. ಹಾಗೆಯೇ 31 ಎಸೆತಗಳಲ್ಲಿ 30 ಬಾರಿಸಿದ ವೃದ್ಧಿಮಾನ್ ಸಾಹ ಕೊನೆಯ ಓವರ್ನಲ್ಲಿ ವಿನಾಕಾರಣ ರನೌಟ್ ಆಗಿ ಹೊರ ನಡೆದರು. ಅಂತಿಮವಾಗಿ ನಬಿ ಕೊನೆಯ ಓವರ್ ಫೋರ್ ಸಹಾಯದಿಂದ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 142 ರನ್ ಪೇರಿಸುವಂತಾಯಿತು.
ಕೆಕೆಆರ್ ಪರ ಉತ್ತಮ ದಾಳಿ ಸಂಘಟಿಸಿದ ವೇಗಿ ಪ್ಯಾಟ್ ಕಮಿನ್ಸ್ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಉರುಳಿಸಿ ಗಮನ ಸೆಳೆದರು.
ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಸೋಲುಂಡಿದ್ದು, ಹೀಗಾಗಿ ಎರಡನೇ ಪಂದ್ಯದ ಮೂಲಕ ಜಯದ ಖಾತೆ ತೆರೆಯುವ ತವಕದಲ್ಲಿದೆ. ಕೆಕೆಆರ್ ತಂಡವು ಮುಂಬೈ ಇಂಡಿಯನ್ ವಿರುದ್ಧ 49 ರನ್ಗಳ ಹೀನಾಯ ಸೋಲನುಭವಿಸಿದ್ರೆ, ಎಸ್ಆರ್ಹೆಚ್ ಆರ್ಸಿಬಿ ವಿರುದ್ಧ 10 ರನ್ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಎರಡು ತಂಡಗಳು ಇಂದು ಮೊದಲ ಜಯಕ್ಕಾಗಿ ಕಾದಾಟ ನಡೆಸಲಿದೆ.
ಎರಡು ತಂಡಗಳಲ್ಲೂ ವಿಶ್ವ ದರ್ಜೆಯ ಕ್ರಿಕೆಟಿಗರನ್ನು ಹೊಂದಿದ್ದು, ಕೆಕೆಆರ್ ಪರ ರಸೆಲ್, ಮಾರ್ಗನ್, ಕಮಿನ್ಸ್, ಸುನೀಲ್ ನರೈನ್ ಇದ್ದರೆ, ಸನ್ರೈಸರ್ಸ್ ಕಣದಲ್ಲಿ ಜಾನಿ ಬೈರ್ಸ್ಟೋ, ಡೇವಿಡ್ ವಾರ್ನರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್ ಇದ್ದಾರೆ.
ಆದರೆ ಕೆಕೆಆರ್ ತಂಡದ ಆಟಗಾರರಿಂದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ತಂಡದ ಬೆನ್ನೆಲುಬು ರಸೆಲ್ ಕೇವಲ 11 ರನ್ಗಳಿಸಿದ್ರೆ, ಬೌಲಿಂಗ್ ವಿಭಾಗದ ಹೊಸ ಅಸ್ತ್ರ ಎನ್ನಲಾಗಿದ್ದ ಪ್ಯಾಟ್ ಕಮಿನ್ಸ್ 3 ಓವರ್ಗಳಿಂದ 49 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಹಾಗೆಯೇ ಕೆಕೆಆರ್ ಪರ ಯಾವೊಬ್ಬ ಬ್ಯಾಟ್ಸ್ಮನ್ ಕೂಡ 35 ರನ್ ದಾಟಿರಲಿಲ್ಲ ಎಂಬುದು ಅಚ್ಚರಿ. ಹೀಗಾಗಿ ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಪಡೆ ಸಾಂಘಿಕ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ.
ಇನ್ನು ಆರ್ಸಿಬಿ ವಿರುದ್ಧ ಹೈದರಾಬಾದ್ ಸೋಲಿಗೆ ಕಾರಣವಾಗಿದ್ದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತ. ಅಂತಿಮ 5 ಓವರ್ಗಳಲ್ಲಿ ಕೇವಲ 43 ರನ್ ಬೇಕಿದ್ದ ವೇಳೆ ಎಸ್ಆರ್ಹೆಚ್ 32 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಹೀಗಾಗಿ ಡೇವಿಡ್ ವಾರ್ನರ್ ಬಳಗ ಮಿಡಲ್ ಆರ್ಡರ್ನತ್ತ ಹೆಚ್ಚಿನ ಗಮನ ಹರಿಸಲಿದೆ.
ಹಾಗೆಯೇ ಗಾಯಗೊಂಡಿರುವ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ವಿಂಡೀಸಿನ ಜೇಸನ್ ಹೋಲ್ಡರ್ ಆಯ್ಕೆಯಾಗಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಆಲ್ರೌಂಡರ್ ವಿಭಾಗದಲ್ಲಿ ಮೊಹಮ್ಮದ್ ನಬಿ ಅವಕಾಶ ಪಡೆದಿದ್ದಾರೆ. ಅಲ್ಲದೆ ಆರಂಭಿಕನಾಗಿ ಬೈರ್ಸ್ಟೋ ಮೊದಲ ಪಂದ್ಯದಲ್ಲೇ ಸಂಚಲನ ಸೃಷ್ಟಿಸಿದ್ದು, ಡೇವಿಡ್ ವಾರ್ನರ್ ಸಾಥ್ ನೀಡಿದ್ರೆ ಇಂದು ಸ್ಪೋಟಕ ಆರಂಭ ಪಡೆಯುವುದರಲ್ಲಿ ಡೌಟೇ ಇಲ್ಲ.
ಎರಡು ತಂಡಗಳಲ್ಲಿ ಸೇರಿ 5 ಬದಲಾವಣೆ ಮಾಡಲಾಗಿದ್ದು, ವಿಜಯ್ ಶಂಕರ್ ಜಾಗದಲ್ಲಿ ವೃದ್ಧಿಮಾನ್ ಸಾಹ , ಹಾಗೂ ಸಂದೀಪ್ ಶರ್ಮಾ ಜಾಗದಲ್ಲಿ ಖಲೀಲ್ ಅಹ್ಮದ್ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಕೆಕೆಆರ್ ತಂಡದಲ್ಲೂ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ನಿಖಿಲ್ , ಸಂದೀಪ್ ವಾರಿಯರ್ ಸ್ಥಾನದಲ್ಲಿ ಕಮಲೇಶ್ ನಾಗರ್ಕೋಟಿ ಹಾಗೂ ವರುಣ್ ಚಕ್ರವರ್ತಿ ಸ್ಥಾನ ಪಡೆದಿದ್ದಾರೆ.
ಉಭಯ ತಂಡಗಳು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಕೆಕೆಆರ್ 10 ರಲ್ಲಿ ಜಯ ಸಾಧಿಸಿದ್ರೆ, ಸನ್ರೈಸರ್ಸ್ 7 ಬಾರಿ ವಿಜಯದ ನಗೆ ಬೀರಿದೆ. ಆದರೆ ಕೊನೆಯ 5 ಮುಖಾಮುಖಿಯಲ್ಲಿ ಕೆಕೆಆರ್ ಕೇವಲ 2 ಬಾರಿ ಮಾತ್ರ ಜಯಗಳಿಸಿದೆ. ಅತ್ತ ಎಸ್ಆರ್ಹೆಚ್ ಕಳೆದ ಸೀಸನ್ನಲ್ಲಿನ ಕೊನೆ ಮುಖಾಮುಖಿಯಲ್ಲೂ ಜಯ ಸಾಧಿಸುವ ಮೂಲಕ 3 ಗೆಲುವು ತನ್ನದಾಗಿಸಿಕೊಂಡಿತು. ಈ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಎಸ್ಆರ್ಹೆಚ್ ಕೆಕೆಆರ್ ಗಿಂತಲೂ ಬಲಿಷ್ಠ ಎನ್ನಬಹುದು.
ಉಭಯ ತಂಡಗಳು ಇಂತಿವೆ:
SRH: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ , ರಶೀದ್ ಖಾನ್, ಭುವನೇಶ್ವರ್ ಕುಮಾರ್. ಟಿ ನಟರಾಜನ್, ಖಲೀಲ್ ಅಹ್ಮದ್
SRH: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ , ರಶೀದ್ ಖಾನ್, ಭುವನೇಶ್ವರ್ ಕುಮಾರ್. ಟಿ ನಟರಾಜನ್, ಖಲೀಲ್ ಅಹ್ಮದ್
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ