IPL 2020, KKR vs SRH: ಕೊಲ್ಕತ್ತಾ vs ಹೈದರಾಬಾದ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಕೆಕೆಆರ್​ ವಿರುದ್ಧ 19 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆದರೆ ಎಸ್​ಆರ್​ಹೆಚ್ ಪರ ಯಶಸ್ವಿಯಾದ ಬೌಲರ್ ಸದ್ಯ ಕೆಕೆಆರ್​ ತಂಡದಲ್ಲಿಲ್ಲ.

KKR vs SRH

KKR vs SRH

 • Share this:
  ಐಪಿಎಲ್ 2020ರ 8ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಮೊದಲ ಪಂದ್ಯವನ್ನು ಸೋತಿರುವ ಉಭಯ ತಂಡಗಳು ಇಂದಿನ ಪಂದ್ಯದ ಮೂಲಕ ಜಯದ ಖಾತೆ ತೆರೆಯುವ ತವಕದಲ್ಲಿದೆ. ಹೀಗಾಗಿ ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಇಂದು ರೋಚಕ ಕದನವನ್ನು ನಿರೀಕ್ಷಿಸಬಹುದು.

  RCB ವಿರುದ್ಧ ಮೊದಲ ಪಂದ್ಯದಲ್ಲಿ ರೋಚಕ ಹೋರಾಟ ನಡೆಸಿದರೂ ಎಸ್​ಆರ್​ಹೆಚ್​ ತಂಡವು ಕೇವಲ 10 ರನ್​ಗಳಿಂದ ಶರಣಾಯಿತು. ಹೀಗಾಗಿ ಕಳೆದ ಮಾಡಿದ ತಪ್ಪನ್ನು ಇಂದಿನ ಪಂದ್ಯದಲ್ಲಿ ಮರಕಳಿಸದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲೂ ಹೈದರಾಬಾದ್ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ಅನ್ನು ಬಲಪಡಿಸಬೇಕಾಗುತ್ತದೆ.

  ಈಗಾಗಲೇ ಗಾಯಗೊಂಡಿದ್ದ ಆಲ್​ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ವೆಸ್ಟ್ ಇಂಡೀಸ್ ಆಲ್​ರೌಂಡರ್ ಜೇಸನ್ ಹೋಲ್ಡರ್ ಎಂಟ್ರಿಯಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ವಿದೇಶಿ ಆಟಗಾರನ ಕೋಟಾದಲ್ಲಿ ಅಫ್ಘಾನಿಸ್ತಾನ್ ಆಟಗಾರ ಮೊಹಮ್ಮದ್ ನಬಿ ಸ್ಥಾನಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ. ನಬಿ ತಂಡದಲ್ಲಿ ಕಾಣಿಸಿಕೊಂಡರೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್​ಮನ್ ಕೊರತೆ ನೀಗಲಿದೆ. ಹಾಗೆಯೇ ಆರಂಭಿಕನಾಗಿ ಜಾನಿ ಬೈರ್​ಸ್ಟೋ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

  ಇನ್ನು ಬೌಲಿಂಗ್​​ನಲ್ಲಿ ಎಸ್​ಆರ್​ಹೆಚ್ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಬೆಂಗಳೂರು ವಿರುದ್ಧ ಉತ್ತಮ ದಾಳಿ ಸಂಘಟಿಸಿ ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ಮಿಂಚಿದ್ದರು. ಇವರಿಗೆ ಸಂದೀಪ್ ಶರ್ಮಾ ಹಾಗೂ ಟಿ ನಟರಾಜನ್ ತಕ್ಕಮಟ್ಟಿನ ಸಾಥ್ ಕೂಡ ನೀಡಿದ್ದರು. ಹೀಗಾಗಿ ನಾಯಕ ಡೇವಿಡ್ ವಾರ್ನರ್​ಗೆ ಬೌಲಿಂಗ್ ವಿಭಾಗದ ಚಿಂತೆ ಕಾಡುವುದಿಲ್ಲ.

  ಇತ್ತ ಕೆಕೆಆರ್​ ತಂಡವು ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 49 ರನ್​ಗಳ ಹೀನಾಯ ಸೋಲಿನ ಮೂಲಕ ಟೂರ್ನಿಯನ್ನು ಆರಂಭಿಸಿದೆ. ಸುನೀಲ್ ನರೈನ್ ಹಾಗೂ ರಸೆಲ್ ಹೊರತುಪಡಿಸಿ ನೈಟ್​ ರೈಡರ್ಸ್ ಬೌಲರುಗಳು ದುಬಾರಿ ಎನಿಸಿದ್ದರು. ಪರಿಣಾಮ ಮುಂಬೈ ಇಂಡಿಯನ್ಸ್ 195 ರನ್​ಗಳನ್ನು ಪೇರಿಸಿತ್ತು. ಬೃಹತ್ ಟಾರ್ಗೆಟ್ ಪಡೆದಿದ್ದ ಕೆಕೆಆರ್​ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಂದಿರಲಿಲ್ಲ. ಅದರಲ್ಲೂ ಆಂಡ್ರೆ ರಸೆಲ್ ಅವರ ಸಿಡಿಲಬ್ಬರ ಕಾಣಿಸಲಿಲ್ಲ. ಕೊನೆಯ ಬೌಲರ್ ಪ್ಯಾಟ್ ಕಮಿನ್ಸ್ ಗಳಿಸಿದ 33 ರನ್​ಗಳೇ ಕೆಕೆಆರ್​ ಪರ ಗರಿಷ್ಠ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್​ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಕಂಬ್ಯಾಕ್ ಮಾಡಬೇಕಿದೆ.

  ಇನ್ನು ಎರಡು ತಂಡಗಳ ಅಂಕಿ ಅಂಶಗಳನ್ನು ನೋಡುವುದಾದರೆ, ಉಭಯ ಟೀಮ್ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಕೆಕೆಆರ್ 10 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಕಂಡು ಬಂದರೂ ಕೊನೆಯ ಐದು ಪಂದ್ಯಗಳ ಫಲಿತಾಂಶ ಕೂಡ ಪ್ರಮುಖವಾಗಲಿದೆ.

  ಉಭಯ ತಂಡಗಳ ಕೊನೆಯ ಪಂದ್ಯಗಳ ಫಲಿತಾಂಶದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಮೇಲುಗೈ ಸಾಧಿಸಿದೆ. ಕೊನೆಯ 5 ಮುಖಾಮುಖಿಯಲ್ಲಿ ಕೆಕೆಆರ್ ಕೇವಲ 2 ಬಾರಿ ಮಾತ್ರ ಜಯಗಳಿಸಿದೆ. ಅತ್ತ ಎಸ್​ಆರ್​ಹೆಚ್​ ಕಳೆದ ಸೀಸನ್​ನಲ್ಲಿನ ಕೊನೆ ಮುಖಾಮುಖಿಯಲ್ಲೂ ಜಯ ಸಾಧಿಸುವ ಮೂಲಕ 3 ಗೆಲುವು ತನ್ನದಾಗಿಸಿಕೊಂಡಿತು. ಈ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಎಸ್​ಆರ್​ಹೆಚ್ ಕೆಕೆಆರ್​ ಗಿಂತಲೂ ಬಲಿಷ್ಠ ಎನ್ನಬಹುದು.

  ಇನ್ನು ಕೆಕೆಆರ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಒಂದು ಭರ್ಜರಿ ಶತಕದೊಂದಿಗೆ 533 ರನ್​ ಕಲೆಹಾಕಿದ್ದಾರೆ. ಇನ್ನು ಎಸ್​ಆರ್​ಹೆಚ್ ವಿರುದ್ಧ ಕೆಕೆಆರ್​ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ರಾಬಿನ್ ಉತ್ತಪ್ಪ. ಹೈದರಾಬಾದ್ ವಿರುದ್ಧದ ಪಂದ್ಯಗಳಿಂದ 426 ರನ್​ ಬಾರಿಸಿರುವ ಉತ್ತಪ್ಪ ಸದ್ಯ ಕೆಕೆಆರ್ ತಂಡದಲ್ಲಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

  ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಕೆಕೆಆರ್​ ವಿರುದ್ಧ 19 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆದರೆ ಎಸ್​ಆರ್​ಹೆಚ್ ಪರ ಯಶಸ್ವಿಯಾದ ಬೌಲರ್ ಸದ್ಯ ಕೆಕೆಆರ್​ ತಂಡದಲ್ಲಿಲ್ಲ. ಈ ಹಿಂದೆ ಕೊಲ್ಕತ್ತಾ ತಂಡವನ್ನು ಪ್ರತಿನಿಧಿಸಿದ್ದ ಉಮೇಶ್ ಯಾದವ್, ಸನ್​ರೈಸರ್ಸ್ ವಿರುದ್ಧ 11 ವಿಕೆಟ್ ಪಡೆದಿದ್ದರು.

  ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದರೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಬಲಿಷ್ಠ ಎನ್ನಬಹುದು. ಆದರೆ ಉಭಯ ತಂಡಗಳು ಇದೇ ಮೊದಲ ಬಾರಿ ಯುಎಇ ಪಿಚ್​​ನಲ್ಲಿ ಮುಖಾಮುಖಿಯಾಗುತ್ತಿದೆ ಎಂಬುದನ್ನು ಗಮನಿಸಬೇಕಿದೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
  Published by:zahir
  First published: