ಅಬುಧಾಬಿ (ಅ. 24): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 42ನೇ ಪಂದ್ಯದಲ್ಲಿಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 59 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ನಿತೀಶ್ ರಾಣ ಹಾಗೂ ಸುಲೀನ್ ನರೈನ್ ಅವರ ಆಕರ್ಷಕದ ಅರ್ಧಶತಕದ ನೆರವಿನಿಂದ ಕೆಕೆಆರ್ ದೊಡ್ಡ ಮೊತ್ತ ಕಲೆಹಾಕಿದರೆ, ವರುಣ್ ಚಕ್ರವರ್ತಿ ಸ್ಪಿನ್ ಜಾದುವಿನ ಎದುರು ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದ ಡೆಲ್ಲಿ ಟೂರ್ನಿಯಲ್ಲಿ 4ನೇ ಸೋಲು ಕಂಡಿದೆ.
ಕೆಕೆಆರ್ ನೀಡಿದ್ದ 195 ರನ್ಗಳ ಕಠಿಣ ಸವಾಲು ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಅಜಿಂಕ್ಯಾ ರಹಾನೆ ಅವರು ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರೆ, ಹಿಂದಿನ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಶಿಖರ್ ಧವನ್ ಈ ಬಾರಿ ಕೇವಲ 6 ರನ್ಗೆ ಬ್ಯಾಟ್ ಕೆಳಗಿಟ್ಟರು.
ಈ ಸಂದರ್ಭ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 63 ರನ್ಗಳ ಕಾಣಿಕೆ ನೀಡಿತು. ಆದರೆ, ಈ 12ನೇ ಓವರ್ ಬೌಲಿಂಗ್ ಮಾಡಲು ಬಂದ ವರುಣ್ ಚಕ್ರವರ್ತಿ 33 ಎಸೆತಗಳಲ್ಲಿ 27 ರನ್ ಗಳಿಸಿದ್ದ ಪಂತ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು.
Varun Chakravarthy has FIVE! Axar goes for the big slog, misses it and is clean bowled!#Dream11IPL pic.twitter.com/MjrFmLmsHE
— IndianPremierLeague (@IPL) October 24, 2020
ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ 5 ವಿಕೆಟ್ ಕಿತ್ತು ದಾಖಲೆ ಬರೆದರೆ, ಪ್ಯಾಟ್ ಕಮಿನ್ಸ್ 3 ಹಾಗೂ ಲೂಕಿ ಫರ್ಗ್ಯೂಸನ್ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಶುಭ್ಮನ್ ಗಿಲ್ 9 ರನ್ಗೆ ಔಟ್ ಆದರೆ, ರಾಹುಲ್ ತ್ರಿಪಾಠಿ 13 ರನ್ ಗಳಿಸಿ ಅನ್ರಿಚ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ದಿನೇಶ್ ಕಾರ್ತಿಕ್ ಆಟ 3 ರನ್ಗೆ ಅಂತ್ಯವಾಯಿತು.
ಈ ಸಂದರ್ಭ ಒಂದಾದ ನಿತೀಶ್ ರಾಣ ಹಾಗೂ ಸುನೀಲ್ ನರೈನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಸ್ಫೋಟಕ ಆಟವಾಡಿದ ನರೈನ್ ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿದರು. ಈ ಜೋಡಿ ಶತಕದ ಜೊತೆಯಾಟ ಆಡಿ ಡೆಲ್ಲಿ ಬೌಲರ್ಗಳ ಬೆವರಿಳಿಸಿತು.
ರಾಣ 53 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್ ಬಾರಿಸಿ 81 ರನ್ ಚಚ್ಚಿದರೆ, ನರೈನ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿ 64 ರನ್ ಕಲೆಹಾಕಿದರು. ಇಯಾನ್ ಮಾರ್ಗನ್ 17 ರನ್ ಗಳಿಸಿದರು.
ಅಂತಿಮವಾಗಿ ಕೆಕೆಆರ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಡೆಲ್ಲಿ ಪರ ಆನ್ರಿಚ್, ರಬಾಡ ಹಾಗೂ ಮಾರ್ಕಸ್ ಸ್ಟಾಯಿನಿಸ್ ತಲಾ 2 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ