ಕೊರೋನಾ ವೈರಸ್ ಕಾರಣ ದೂರದ ಮರಳು ಗಾಡಿನ ಊರಿನಲ್ಲಿ ನಡೆದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸರಳ ತೆರೆ ಬಿದ್ದಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ರಚಿಸಿತು. ಈ ಮೂಲಕ ಐಪಿಎಲ್ ನಡೆಸಿಯೇ ತೀರುತ್ತೇವೆ ಎಂದು ಟೊಂಕಕಟ್ಟಿ ನಿಂತ ಬಿಸಿಸಿಐ ಕೊನೆಗೂ ಇದರಲ್ಲಿ ಯಶಸ್ವಿಯಾಗಿದೆ.
ಐಪಿಎಲ್ 2020ರ ಪ್ಲೇ ಆಫ್ಗೆ ಒಟ್ಟು ನಾಲ್ಕು ತಂಡಗಳು ಪ್ರವೇಶ ಮಾಡಿದ್ದವು. ಮುಂಬೈ ಮೊದಲನೆ ತಂಡವಾಗಿ ಲಗ್ಗೆಯಿಟ್ಟಿದ್ದರೆ, ನಂತರದಲ್ಲಿ ಡೆಲ್ಲಿ, ಆರ್ಸಿಬಿ ಹಾಗೂ ಹೈದರಾಬಾದ್ ಪ್ಲೇ ಆಫ್ ಪ್ರವೇಶ ಪಡೆದಿದ್ದವು. ಮೊದಲ ಕ್ವಾಲಿಫೈಯರ್ನಲ್ಲಿ ಡೆಲ್ಲಿ ವಿರುದ್ಧ ಮುಂಬೈ ಜಯ ಸಾಧಿಸಿ ನೇರವಾಗಿ ಫೈನಲ್ ಟಿಕೇಟ್ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದ ಎಸ್ಆರ್ಹೆಚ್, 2ನೇ ಕ್ವಾಲಿಫೈಯರ್ನಲ್ಲಿ ಸೋತ ಪರಿಣಾಮ ಡೆಲ್ಲಿ ಫೈನಲ್ಗೆ ಪ್ರವೇಶ ಪಡೆಯಿತು.
IPL 2020 Final, MI vs DC: 5ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ: ಚೊಚ್ಚಲ ಕಪ್ ಗೆಲ್ಲುವ ಡೆಲ್ಲಿ ಕನಸು ಭಗ್ನ
ಅಂತಿಮ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ನಾಯಕ ಶ್ರೇಯಸ್ ಅಯ್ಯರ್ (ಅಜೇಯ 65) ಹಾಗೂ ರಿಷಭ್ ಪಂತ್ (56) ಅವರ ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್ಗಳಲ್ಲಿ 156 ರನ್ ಗಳಿಸಿತು.
ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ, ನಾಯಕ ರೋಹಿತ್ ಶರ್ಮಾ ಅವರ 68 ಹಾಗೂ ಇಶಾನ್ ಕಿಶನ್ ಅವರ ಅಜೇಯ 33 ರನ್ಗಳ ನೆರವಿನಿಂದ 18.4 ಓವರ್ನಲ್ಲೇ ಗೆಲುವಿನ ನಗೆ ಬೀರಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿತು. ಜೊತೆಗೆ ಸತತ ಎರಡನೇ ಬಾರಿ ಕಪ್ ಗೆದ್ದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011 ರಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿತ್ತು.
Five time IPL CHAMPIONS @mipaltan 👏👏#Dream11IPL pic.twitter.com/tBI6xF1J2E
— IndianPremierLeague (@IPL) November 10, 2020
Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
2008ರಲ್ಲಿ ಡೆಕ್ಕನ್ ಚಾರ್ಜಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ರೋಹಿತ್, 2009ರಲ್ಲಿ ಆ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ನಂತರ 2011ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ರನ್ನು ಖರೀದಿಸಿತ್ತು. ರೋಹಿತ್ ಮುಂಬೈ ತಂಡದಲ್ಲಿ ನಾಯಕನಾಗಿ ಸದ್ಯ 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ತಾನಾಡಿದ 50ನೇ ಪಂದ್ಯ, 100ನೇ, 150ನೇ ಹಾಗೂ 200ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದರು.
ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಂಡ ಕೊರೋನಾ ವೈರಸ್ ನಡುವೆ ಐಪಿಎಲ್ ರದ್ದು ಮಾಡದೆ ದೂರದ ಯುಎಇನಲ್ಲಿ ಆಯೋಜಿಸಿ ಇದರಲ್ಲಿ ಯಶಸ್ವಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ