ಅಬುಧಾಬಿ (ನ. 06): ಇಲ್ಲಿನ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಕಾದಾಟ ನಡೆಸುತ್ತಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಆರ್ಸಿಬಿ ಆರಂಭದಲ್ಲೇ ದೊಡ್ಡ ವಿಕೆಟ್ ಕಳೆದುಕೊಂಡಿತು. ಓಪನರ್ ಆಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಕೇವಲ 6 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ತಂಡಕ್ಕೆ ಆಸರೆಯಾಗುತ್ತಿದ್ದ ದೇವದತ್ ಪಡಿಕ್ಕಲ್ 1 ರನ್ಗೆ ನಿರ್ಗಮಿಸಿದರು.
ಈ ಸಂದರ್ಭ ಒಂದಾದ ಎಬಿ ಡಿವಿಲಿಯರ್ಸ್ ಹಾಗೂ ಆ್ಯರೋನ್ ಫಿಂಚ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿತು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾದ ಫಿಂಚ್ 30 ಎಸೆತಗಳಲ್ಲಿ 32 ರನ್ ಗಳಿಸಿ ಔಟ್ ಆದರು. ಇವರಿಬ್ಬರು 41 ರನ್ಗಳ ಜೊತೆಯಾಟ ಆಡಿದರು.
ಮೊಯೀನ್ ಅಲಿ ಬಂದ ಬೆನ್ನಲ್ಲೇ ರನೌಟ್ಗೆ ಬಲಿಯಾಗಿದ್ದು ತಂಡಕ್ಕೆ ಹೊಡೆತಬಿದ್ದಂತಾಗಿತು. ಎಬಿಡಿ ಇನ್ನಿಂಗ್ಸ್ ಕಟ್ಟಲು ಹೊರಟ ಶಿವಂ ದುಬೆ(8) ಕೂಡ ಬೇಗನೆ ಬ್ಯಾಟ್ ಕೆಳಗಿಟ್ಟರು. ವಾಷಿಂಗ್ಟನ್ ಸುಂದರ್ ಕೂಡ 5 ರನ್ಗೆ ಔಟ್ ಆದರು. ಈ ನಡುವೆ ಡಿವಿಲಿಯರ್ಸ್ ಆಕರ್ಷಕ ಅರ್ಧಶತಕ ಗಳಿಸಿದರು.
ಇಂದಿನ ಪಂದ್ಯಕ್ಕೆ ಹೈದರಾಬಾದ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಇಂಜುರಿಯಿಂದ ವೃದ್ದಿಮಾನ್ ಸಾಹ ಬದಲು ಶ್ರೀವತ್ಸ ಗೋಸ್ವಾಮಿ ಅವರು ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆರ್ಸಿಬಿ ತಂಡದಲ್ಲಿ 4 ಬದಲಾವಣೆ ಮಾಡಲಾಗಿದೆ. ಮೊರೀಸ್, ಉದಾನ, ಶಹ್ಬಾಜ್, ಫಿಲಿಪ್ ಬದಲು ಫಿಂಚ್, ಜಂಪಾ, ಮೊಯೀನ್ ಅಲಿ ಹಾಗೂ ಸೈನಿ ಕಮ್ಬ್ಯಾಕ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಮೊಯೀನ್ ಅಲಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ನವ್ದೀಪ್ ಸೈನಿ, ಆ್ಯಡಂ ಜಂಪಾ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶ್ರೀವತ್ಸ್ ಗೋಸ್ವಾಮಿ (ವಿ.ಕೀ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.
ಈ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ನಲ್ಲಿ ಡೆಲ್ಲಿ ವಿರುದ್ಧ ಸೆಣೆಸಾಡಲಿದೆ. ಸೋತ ತಂಡ ಸಂಪೂರ್ಣ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೆ ಇದು ಡು ಆರ್ ಡೈ ಆಗಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.
Big clash coming up!
🧡 or ❤️, which team are you backing in tonight's #Dream11IPL Eliminator❓
Comment below 👇#SRHvRCB pic.twitter.com/5RQFf1J8uH
— IndianPremierLeague (@IPL) November 6, 2020
ಆರ್ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ಓಪನರ್ಗಳು ಸಹಾಯ ಮಾಡುತ್ತಿಲ್ಲ. ದೇವದತ್ ಪಡಿಕ್ಕಲ್ ಉತ್ತಮ ಲಯದಲ್ಲಿದ್ದರೆ, ಜೋಶ್ ಫಿಲಿಪ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುತ್ತಿಲ್ಲ. ಇನ್ನೂ ಎಬಿಡಿ ನಿರ್ಗಮನದ ಬಳಿಕ ತಂಡದಲ್ಲಿ ದೊಡ್ಡ ರನ್ ಕಲೆಹಾಕುವ ಸಾಮರ್ಥ್ಯ ಯಾರಲ್ಲೂ ಇಲ್ಲ.
ಮೊಹಮ್ಮದ್ ಸಿರಾಜ್, ಇಸುರು ಉದಾನ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ. ನವ್ದೀಪ್ ಸೈನಿ ಕೂಡ ಇಂಜುರಿಯಿಂದ ಇನ್ನೂ ಸರಿಯಾಗಿ ಕಮ್ಬ್ಯಾಕ್ ಮಾಡಿಲ್ಲ.
ಇತ್ತ ಹೈದರಾಬಾದ್ಗೆ ಓಪನರ್ಗಳೇ ಇಡೀ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಕಳೆದ ಪಂದ್ಯದಲ್ಲೇ ಸಾಭೀತಾಗಿತ್ತು. ಆರ್ಸಿಬಿ ಗೆಲ್ಲಬೇಕಾದರೆ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ವಿಕೆಟ್ ಬೇಗನೆ ಮುಖ್ಯವಾಗಿ ಕೀಳಬೇಕಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ