RCB vs SRH: ಆರ್​ಸಿಬಿ ಪಾಲಿಗೆ ಸನ್​ರೈಸರ್ಸ್​ ದೊಡ್ಡ ಸವಾಲೇ ಸರಿ, ಏಕೆ ಗೊತ್ತಾ?

ಡೇವಿಡ್ ವಾರ್ನರ್ ಪಡೆ ಕೊನೆಯ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಕಂಬ್ಯಾಕ್ ಮಾಡಿರುವುದು ಇದಕ್ಕೆ ಸಾಕ್ಷಿ. ಅದು ಕೂಡ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಮಣಿಸಿ ಅರ್ಹತೆಗಿಟ್ಟಿಸಿಕೊಂಡಿರುವುದು ವಿಶೇಷ.

ಕೊಹ್ಲಿ-ವಾರ್ನರ್

ಕೊಹ್ಲಿ-ವಾರ್ನರ್

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಹಂತ ತಲುಪಿದೆ. ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಸೆಣಸಲಿದ್ದು, ಇದರಲ್ಲಿ ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಆದರೆ ಎಲಿಮಿನೇಟರ್ ರೌಂಡ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಸವಾಲೊಡ್ಡಲಿದೆ. ಇದರಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಮುಂದಿನ ಪಂದ್ಯ ದೊಡ್ಡ ಸವಾಲೇ ಸರಿ. 3 ವರ್ಷಗಳ ಬಳಿಕ ಪ್ಲೇ ಆಫ್ ಪ್ರವೇಶಿಸಿರುವ ಕೊಹ್ಲಿ ಪಡೆ 4 ವರ್ಷಗಳ ಬಳಿಕ ಫೈನಲ್​ಗೆ ಲಗ್ಗೆಯಿಡುವ ತವಕದಲ್ಲಿದೆ. ಆದರೆ ನಿರ್ಣಾಯಕ ಹಂತದಲ್ಲಿ ಸನ್​ರೈಸರ್ಸ್​ ತಂಡವನ್ನು ಮಣಿಸುವುದು ಅಷ್ಟೊಂದು ಸುಲಭವಲ್ಲ.

  ಏಕೆಂದರೆ ಟೂರ್ನಿಯಲ್ಲಿ ಸತತ ಸೋಲುಗಳ ಮೂಲಕ ಪ್ಲೇ ಆಫ್ ಅವಕಾಶ ಪಡೆಯುವುದು ಡೌಟ್ ಎನ್ನಲಾಗಿದ್ದ ಡೇವಿಡ್ ವಾರ್ನರ್ ಪಡೆ ಕೊನೆಯ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಕಂಬ್ಯಾಕ್ ಮಾಡಿರುವುದು ಇದಕ್ಕೆ ಸಾಕ್ಷಿ. ಅದು ಕೂಡ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಮಣಿಸಿ ಅರ್ಹತೆಗಿಟ್ಟಿಸಿಕೊಂಡಿರುವುದು ವಿಶೇಷ.

  ಇನ್ನು ಆರ್​ಸಿಬಿ ಹಾಗೂ ಸನ್​ರೈಸರ್ಸ್​ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದ್ರೂ, ಈಗಲೂ ಹೈದರಾಬಾದ್ ತಂಡವೇ ಮೇಲುಗೈ ಸಾಧಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿ ವಿರುದ್ದ ವಾರ್ನರ್ ಪಡೆ ಒಂದು ಗೆಲುವು ಸಾಧಿಸಿತ್ತು. ಆದರೆ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ಸನ್​ರೈಸರ್ಸ್​ ವಿರುದ್ಧ ಗೆದ್ದಿದ್ದು ಕೇವಲ 10 ರನ್​ಗಳ ಅಂತರದಲ್ಲಿ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

  ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 17 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎಸ್​ಆರ್​ಹೆಚ್ 9 ಬಾರಿ ಗೆಲುವು ಸಾಧಿಸಿದೆ. ಹಾಗೆಯೇ ಆರ್​ಸಿಬಿ 7 ಬಾರಿ ಜಯ ತನ್ನದಾಗಿಸಿಕೊಂಡಿದೆ. ಇನ್ನು ಕೊನೆಯ ಐದು ಪಂದ್ಯಗಳ ಫಲಿತಾಂಶಗಳನ್ನು ತೆಗೆದುಕೊಂಡರೆ ವಾರ್ನರ್ ಪಡೆ 5 ರಲ್ಲಿ 4 ವಿಜಯ ಪಾತಕೆಯನ್ನು ಹಾರಿಸಿದೆ. ಆದರೆ ಸತತ 4 ಸೋಲುಗಳ ಮೂಲಕ ಕೊಹ್ಲಿ ಪಡೆ ನೆಟ್ ರನ್​ ರೇಟ್​ನಲ್ಲಿ ಪ್ಲೇ ಆಫ್​ಗೆ ಅರ್ಹತೆಗಿಟ್ಟಿಸಿಕೊಂಡಿದೆ.

  ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ ಇತಿಹಾಸ ಕೂಡ ಸನ್​ರೈಸರ್ಸ್ ಹೈದರಾಬಾದ್ ಹೆಸರಿನಲ್ಲಿದೆ. ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯಲು ಡೇವಿಡ್ ವಾರ್ನರ್ ಬಳಗ ಸಕಲ ತಯಾರಿಯಲ್ಲಿದೆ.

  ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳಿದ್ದರೂ, ಸನ್​ರೈಸರ್ಸ್ ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಶಕ್ತಿಯುತವಾಗಿದೆ ಎನ್ನಬಹುದು. ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯ ಹೊರತಾಗಿಯೂ ರಶೀದ್ ಖಾನ್, ನಟರಾಜನ್ , ಸಂದೀಪ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್​ ತಂಡವನ್ನು ನಿರ್ಣಾಯಕ ಪಂದ್ಯದಲ್ಲಿ ಕೇವಲ 149 ರನ್​ಗಳಿಗೆ ನಿಯಂತ್ರಿಸಿರುವುದು.

  ಹಾಗೆಯೇ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹ ಯಶಸ್ವಿಯಾಗಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ ಕೂಡ ಫಾರ್ಮ್​ನಲ್ಲಿದ್ದು, ಇವರಿಬ್ಬರನ್ನೂ ಕಟ್ಟಿ ಹಾಕುವುದು ಕೂಡ ಸುಲಭವಲ್ಲ. ಇನ್ನು ಪ್ರಿಯಂ ಗರ್ಗ್ ಹಾಗೂ ಜೇಸನ್ ಹೋಲ್ಡರ್ ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.

  ಇತ್ತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಡುವಲ್ಲಿ ಓಪನರ್​ಗಳು ವಿಫಲರಾಗುತ್ತಿದ್ದಾರೆ. ಹಾಗೆಯೇ ಎಬಿ ಡಿವಿಲಿಯರ್ಸ್ ಅಬ್ಬರವಿದ್ದರೂ, ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಅದರಲ್ಲೂ ಸನ್​ರೈಸರ್ಸ್​ ವಿರುದ್ಧದ ಕೊನೆಯ ಪಂದ್ಯದಲ್ಲಿ ರನ್​ಗಳಿಸಲು ಪರದಾಡಿದ ಆರ್​ಸಿಬಿ ಕಲೆಹಾಕಿದ್ದು ಕೇವಲ 120 ರನ್​ಗಳು ಮಾತ್ರ. ಅಷ್ಟೇ ಅಲ್ಲದೆ ಡೆಲ್ಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ 152 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ ಕಳೆದ ಪಂದ್ಯಗಳಿಂದ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ದೊಡ್ಡ ಮೊತ್ತ ಪೇರಿಸುವಲ್ಲಿ ಎಡವುತ್ತಿರುವುದು ಸ್ಷಷ್ಟ.

  ಇದಾಗ್ಯೂ ಆರ್​ಸಿಬಿ ಬೌಲರುಗಳ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಉತ್ತಮ ಸ್ಪಿನ್ ದಾಳಿ ನಡೆಸುತ್ತಿದ್ದರೆ, ಮೊಹಮ್ಮದ್ ಸಿರಾಜ್ ವೇಗದ ಮೂಲಕ ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಹಾಗೆಯೇ ಕ್ರಿಸ್ ಮೋರಿಸ್ ಆರ್​​ಸಿಬಿ ಆರಂಭಿಕ ಯಶಸ್ಸು ತಂದುಕೊಡುವಲ್ಲಿ ಸಫಲರಾಗುತ್ತಿದ್ದಾರೆ. ಆದರೆ ದೊಡ್ಡ ಮೊತ್ತದ ಕೊರತೆಯೇ ಆರ್​ಸಿಬಿ ವೇಗಿಗಳ ಪಾಲಿಗೆ ಮುಳುವಾಗುತ್ತಿದೆ. ಸ್ಪೋಟಕ ಆರಂಭ, ದೊಡ್ಡ ಮೊತ್ತದ ಟಾರ್ಗೆಟ್ ಹೊರತು ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಕಷ್ಟಸಾಧ್ಯ ಎಂಬುದಕ್ಕೆ ಕಳೆದ 4 ಪಂದ್ಯಗಳ ಫಲಿತಾಂಶವೇ ಸಾಕ್ಷಿ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
  Published by:zahir
  First published: