IPL 2020, DC vs SRH: ಡೆಲ್ಲಿ ಕ್ಯಾಪಿಟಲ್ಸ್ 163 ರನ್ಗಳ ಗುರಿ ನೀಡಿದ ಸನ್ರೈಸರ್ಸ್ ಹೈದರಾಬಾದ್
Dream11 IPL 2020: ಉಭಯ ತಂಡಗಳು 15 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ವಿರುದ್ಧ ಹೈದರಾಬಾದ್ 9 ಬಾರಿ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿರುವುದು 6 ಬಾರಿ ಮಾತ್ರ.
ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಇಂದು ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಆರು ಓವರ್ಗಳಲ್ಲಿ ಮೂಡಿ ಬಂದಿದ್ದು ಕೇವಲ 38 ರನ್ಗಳು ಮಾತ್ರ.
ಪವರ್ ಪ್ಲೇ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಡೇವಿಡ್ ವಾರ್ನರ್ ಸಿಕ್ಸ್-ಫೋರ್ಗಳ ಮೂಲಕ ರನ್ ವೇಗವನ್ನು ಹೆಚ್ಚಿಸಿದರು. ಈ ಮೂಲಕ ಮುಂದಿನ ಮೂರು ಓವರ್ಗಳಲ್ಲಿ 35 ರನ್ ಕಲೆಹಾಕಿದರು. ಅಲ್ಲದೆ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲೆತ್ನಿಸಿದ ವಾರ್ನರ್ (45) ಕೀಪರ್ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ(3) ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.
ಈ ಬಳಿಕ ಜಾನಿ ಬೈರ್ಸ್ಟೋವ್ ಜೊತೆಗೂಡಿದ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 17 ಎಸೆತಗಳಲ್ಲಿ 28 ರನ್ ಬಾರಿಸಿದ ಕೇನ್ 16 ಓವರ್ ಅಂತ್ಯಕ್ಕೆ ತಂಡದ ಮೊತ್ತವನ್ನು 128ಕ್ಕೆ ತಂದು ನಿಲ್ಲಿಸಿದರು. ಕೊನೆಯ ನಾಲ್ಕು ಓವರ್ಗಳಿರುವಾಗ ಬಿರುಸಿ ಆಟಕ್ಕೆ ಮುಂದಾದ ಸನ್ರೈಸರ್ಸ್ ಬ್ಯಾಟ್ಸ್ಮನ್ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿದರು. ಅದರಂತೆ 17ನೇ ಓವರ್ನಲ್ಲಿ 12 ರನ್ ಬಾರಿಸಿದ್ದರು. ಇದರ ಬೆನ್ನಲ್ಲೇ 44 ಎಸೆತಗಳಲ್ಲಿ ಜಾನಿ ಬೈರ್ಸ್ಟೋವ್ ತಮ್ಮ ಅರ್ಧಶತಕ ಪೂರೈಸಿದರು.
ಹಾಫ್ ಸೆಂಚುರಿಯ ಬೆನ್ನಲ್ಲೇ ರಬಾಡ ಎಸೆತದಲ್ಲಿ ಕ್ಯಾಚ್ ನೀಡಿ ಜಾನಿ ಬೈರ್ಸ್ಟೋವ್(53) ಹೊರ ನಡೆದರು. ಈ ವೇಳೆ ಕ್ರೀಸ್ಗೆ ಆಗಮಿಸಿದ್ದು ಜಮ್ಮು-ಕಾಶ್ಮೀರದ ಯುವ ಪ್ರತಿಭೆ ಅಬ್ದುಲ್ ಸಮದ್. ತಾನು ಎದುರಿಸಿದ ಮೊದಲ ಎಸೆತದಲ್ಲೇ 1 ರನ್ ಕಲೆಹಾಕುವ ಮೂಲಕ ಐಪಿಎಲ್ನಲ್ಲಿ ರನ್ ಖಾತೆ ತೆರೆದರು. ಅಲ್ಲದೆ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ನಾರ್ಟ್ಜೆ ಅವರ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಖಾತೆಯನ್ನು ಸಮದ್ ತೆರೆದರು.
ಅಂತಿಮ ಓವರ್ನ 3ನೇ ಎಸೆತದಲ್ಲಿ ಕ್ಯಚ್ ನೀಡುವ ಮೂಲಕ ಕೇನ್ ವಿಲಿಯಮ್ಸನ್ (41) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಕೊನೆಯ ಓವರ್ನಲ್ಲಿ ಕೇವಲ 4 ರನ್ ನೀಡಿದ ಕಗಿಸೋ ರಬಾಡ ಸನ್ರೈಸರ್ಸ್ ಮೊತ್ತವನ್ನು 162 ರನ್ಗೆ ನಿಯಂತ್ರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ 4 ಓವರ್ ಎಸೆದ ರಬಾಡ 21 ರನ್ ನೀಡಿ 2 ವಿಕೆಟ್ ಉರುಳಿಸಿದರು.
Young Abdul Samad is all set to make his debut for @SunRisers.
ಆಡಿದ ಎರಡು ಪಂದ್ಯಗಳನ್ನು ಗೆದ್ದು ಹ್ಯಾಟಿಕ್ ಜಯದ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಒಂದೆಡೆಯಾದರೆ, ಸತತ ಸೋಲಿಂದ ಹೈರಾಣರಾಗಿರುವ ಸನ್ರೈಸರ್ಸ್ ಮತ್ತೊಂದಡೆ. ಹೀಗಾಗಿ ಇಂದಿನ ಪಂದ್ಯವು ಸೋಲು-ಗೆಲುವಿನ ಲಯದಲ್ಲಿರುವ ಎರಡು ತಂಡಗಳ ಮೇಲಾಟವಾಗಿ ಪರಿಣಮಿಸಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಜಯ ಸಾಧಿಸಿದ ಶ್ರೇಯಸ್ ಪಡೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 44 ರನ್ಗಳ ಸೂಪರ್ ಡೂಪರ್ ಗೆಲುವು ತನ್ನದಾಗಿಸಿಕೊಂಡಿತ್ತು. ಈ ಭರ್ಜರಿ ಗೆಲುವಿನ ಆತ್ಮ ವಿಶ್ವಾಸದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಟ್ಟಿಹಾಕುವುದು ಸನ್ರೈಸರ್ಸ್ ಹೈದರಾಬಾದ್ಗೆ ಅಂದುಕೊಂಡಷ್ಟು ಸುಲಭವಲ್ಲ.
ಹಾಗೆಯೇ ಆರ್ಸಿಬಿ ಹಾಗೂ ಕೆಕೆಆರ್ ವಿರುದ್ಧದ ಸತತ ಸೋಲಿನಿಂದ ಕಂಗೆಟ್ಟಿರುವ ಡೇವಿಡ್ ವಾರ್ನರ್ ಬಳಗ, ಐಪಿಎಲ್ 2020 ಟೂರ್ನಿಯ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ತಂಡದ ಬ್ಯಾಟಿಂಗ್ ಕ್ರಮಾಂಕವು ಕೈಕೊಡುತ್ತಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡ ಚಿಂತಾ ವಿಷಯವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಅದರಂತೆ ಮೊಹಮ್ಮದ್ ನಬಿ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ವೃದ್ಧಿಮಾನ್ ಸಾಹ ಸ್ಥಾನದಲ್ಲಿ ಜಮ್ಮು-ಕಾಶ್ಮೀರದ ಯುವ ಬ್ಯಾಟ್ಸ್ಮನ್ ಅಬ್ದುಲ್ ಸಮದ್ ಪಾದರ್ಪಣೆ ಮಾಡುತ್ತಿದ್ದಾರೆ.