IPL 2020 LIVE Score, DC vs SRH: ಸನ್​ರೈಸರ್ಸ್ ಸೂಪರ್ ಆಟದ ಮುಂದೆ ಮಂಡಿಯೂರಿದ ಡೆಲ್ಲಿ ಕ್ಯಾಪಿಟಲ್ಸ್

Dream11 IPL 2020 Live Score: ಉಭಯ ತಂಡಗಳು 15 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ವಿರುದ್ಧ ಹೈದರಾಬಾದ್ 9 ಬಾರಿ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿರುವುದು 6 ಬಾರಿ ಮಾತ್ರ.

SRH vs DC

SRH vs DC

 • Share this:
  ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ಗೆ 15 ರನ್​ಗಳಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಡೇವಿಡ್ ವಾರ್ನರ್​ ಪಡೆ ಐಪಿಎಲ್​ 2020ನಲ್ಲಿ ತನ್ನ ಜಯದ ಖಾತೆ ತೆರೆಯಿತು. ಇದಕ್ಕೂ ಮುನ್ನ ಸನ್​ರೈಸರ್ಸ್​ ನೀಡಿದ  163 ರನ್​ಗಳ ಗುರಿ ಬೆನ್ನತ್ತಿದ್ದ ಡೆಲ್ಲಿಯ ಆರಂಭ ಉತ್ತಮವಾಗಿರಲಿಲ್ಲ.  2 ರನ್​ಗಳಿಸಿ ಮೊದಲ ಓವರ್​ನಲ್ಲಿ ಪೃಥ್ವಿ ಶಾ ಭುವನೇಶ್ವರ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.

  ಬಳಿಕ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಆರಂಭಿಕ ಶಿಖರ್ ಧವನ್ ನಿಧಾನಗತಿಯಲ್ಲಿ 40 ರನ್​ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ದಾಳಿಗಿಳಿದ ರಶೀದ್ ಖಾನ್ ಎಸೆತದಲ್ಲಿ ಅಯ್ಯರ್ (17) ಸಮದ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ನಂತರ ಬಂದ ರಿಷಭ್ ಪಂತ್ ಕೂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ 11 ಓವರ್ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಮೊತ್ತ ಕೇವಲ 60 ರನ್ ಮಾತ್ರ. ಮತ್ತೊಂದೆಡೆ ಕ್ರೀಸ್​ ಕಚ್ಚಿ ನಿಂತಿದ್ದ ಶಿಖರ್ ಧವನ್ (34) ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹೆಟ್ಮೆಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬಿಗ್ ಹಿಟ್​ಗೆ ಕೈ ಹಾಕಿ 12 ಎಸೆತಗಳಲ್ಲಿ 21 ರನ್​ಗಳೊಂದಿಗೆ ಕ್ಯಾಚ್ ನೀಡಿ ಹೊರ ನಡೆದರು.

  ಕೊನೆಯ 4 ಓವರ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 49 ರನ್​ಗಳ ಬೇಕಿತ್ತು. ಆದರೆ ಮತ್ತೊಮ್ಮೆ ಸನ್​ರೈಸರ್ಸ್ ಪಾಲಿಗೆ ಆಪತ್ಭಾಂಧವರಾದ ರಶೀದ್ ಖಾನ್ 17ನೇ ಓವರ್​ನಲ್ಲಿ ರಿಷಭ್ ಪಂತ್ (28) ವಿಕೆಟ್ ಪಡೆದರು. 18ನೇ ಓವರ್ ಎಸೆದ ನಟರಾಜನ್ ಕೇವಲ 87ರನ್ ಮಾತ್ರ ನೀಡಿ ಸ್ಟೊಯಿನಿಸ್ ವಿಕೆಟ್ ಪಡೆದರು. ಪರಿಣಾಮ ಕೊನೆಯ 2 ಓವರ್​ನಲ್ಲಿ ಗೆಲ್ಲಲು 37 ರನ್ ಗಳಿಸಬೇಕಿತ್ತು. ಆದರೆ 19ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ನೀಡಿದ್ದು ಕೇವಲ 9 ರನ್​ಗಳು.

  ಕೊನೆಯ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ 6 ಎಸೆತಗಳಲ್ಲಿ 28 ರನ್​ಗಳ ಅವಶ್ಯಕತೆಯಿತ್ತು. ಆದರೆ ಖಲೀಲ್ ಅಹ್ಮದ್ ಅವರ ಕರಾರುವಾಕ್ ದಾಳಿ ಮುಂದೆ ಡೆಲ್ಲಿ ಬೌಲರುಗಳು 12 ರನ್​ಗಳಷ್ಟೇ ಗಳಿಸಲು ಶಕ್ತರಾದರು. 15 ರನ್​ಗಳ ಈ ವಿಜಯದೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಐಪಿಎಲ್​ನ 13ನೇ ಆವೃತ್ತಿಯ ಮೊದಲ ಗೆಲುವು ದಾಖಲಿಸಿತು. ಸನ್​ರೈಸರ್ಸ್ ಪರ ಸ್ಪಿನ್ ಮೋಡಿ ತೋರಿಸಿದ ರಶೀದ್ ಖಾನ್, 4 ಓವರ್​ಗಳಲ್ಲಿ ಕೇವಲ 14 ರನ್​ ನೀಡಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.


  ಟಾಸ್ ಸೋತರೂ ಮೊದಲ ಇನಿಂಗ್ಸ್​ನಲ್ಲಿ   ಬ್ಯಾಟಿಂಗ್ ಅವಕಾಶ ಪಡೆದ ಸನ್​ರೈಸರ್ಸ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​ಸ್ಟೋವ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಆರು ಓವರ್​ಗಳಲ್ಲಿ ಮೂಡಿ ಬಂದಿದ್ದು ಕೇವಲ 38 ರನ್​ಗಳು ಮಾತ್ರ. 

  ಪವರ್ ಪ್ಲೇ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಡೇವಿಡ್ ವಾರ್ನರ್ ಸಿಕ್ಸ್​-ಫೋರ್​ಗಳ ಮೂಲಕ ರನ್​ ವೇಗವನ್ನು ಹೆಚ್ಚಿಸಿದರು. ಈ ಮೂಲಕ ಮುಂದಿನ ಮೂರು ಓವರ್​ಗಳಲ್ಲಿ 35 ರನ್​ ಕಲೆಹಾಕಿದರು. ಅಲ್ಲದೆ ಮೊದಲ ವಿಕೆಟ್​ಗೆ 78 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ ರಿವರ್ಸ್​ ಸ್ವೀಪ್ ಮಾಡಲೆತ್ನಿಸಿದ ವಾರ್ನರ್ (45) ಕೀಪರ್​ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ(3) ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.

  ಈ ಬಳಿಕ ಜಾನಿ ಬೈರ್​ಸ್ಟೋವ್ ಜೊತೆಗೂಡಿದ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 17 ಎಸೆತಗಳಲ್ಲಿ 28 ರನ್ ಬಾರಿಸಿದ ಕೇನ್ 16 ಓವರ್​ ಅಂತ್ಯಕ್ಕೆ ತಂಡದ ಮೊತ್ತವನ್ನು 128ಕ್ಕೆ ತಂದು ನಿಲ್ಲಿಸಿದರು. ಕೊನೆಯ ನಾಲ್ಕು ಓವರ್​ಗಳಿರುವಾಗ ಬಿರುಸಿ ಆಟಕ್ಕೆ ಮುಂದಾದ ಸನ್​ರೈಸರ್ಸ್​ ಬ್ಯಾಟ್ಸ್​ಮನ್ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿದರು. ಅದರಂತೆ 17ನೇ ಓವರ್​ನಲ್ಲಿ 12 ರನ್ ಬಾರಿಸಿದ್ದರು. ಇದರ ಬೆನ್ನಲ್ಲೇ 44 ಎಸೆತಗಳಲ್ಲಿ ಜಾನಿ ಬೈರ್​ಸ್ಟೋವ್ ತಮ್ಮ ಅರ್ಧಶತಕ ಪೂರೈಸಿದರು.

  ಹಾಫ್ ಸೆಂಚುರಿಯ ಬೆನ್ನಲ್ಲೇ ರಬಾಡ ಎಸೆತದಲ್ಲಿ ಕ್ಯಾಚ್ ನೀಡಿ ಜಾನಿ ಬೈರ್​ಸ್ಟೋವ್​(53) ಹೊರ ನಡೆದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ್ದು ಜಮ್ಮು-ಕಾಶ್ಮೀರದ ಯುವ ಪ್ರತಿಭೆ ಅಬ್ದುಲ್ ಸಮದ್. ತಾನು ಎದುರಿಸಿದ ಮೊದಲ ಎಸೆತದಲ್ಲೇ 1 ರನ್ ಕಲೆಹಾಕುವ ಮೂಲಕ ಐಪಿಎಲ್​ನಲ್ಲಿ ರನ್ ಖಾತೆ ತೆರೆದರು. ಅಲ್ಲದೆ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ನಾರ್ಟ್ಜೆ ಅವರ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಖಾತೆಯನ್ನು ಸಮದ್ ತೆರೆದರು.


  ಅಂತಿಮ  ಓವರ್​ನ 3ನೇ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಕೇನ್ ವಿಲಿಯಮ್ಸನ್ (41) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಕೊನೆಯ ಓವರ್​ನಲ್ಲಿ ಕೇವಲ 4 ರನ್ ನೀಡಿದ ಕಗಿಸೋ ರಬಾಡ ಸನ್​ರೈಸರ್ಸ್ ಮೊತ್ತವನ್ನು 162 ರನ್​ಗೆ ನಿಯಂತ್ರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ 4 ಓವರ್ ಎಸೆದ ರಬಾಡ 21 ರನ್ ನೀಡಿ 2 ವಿಕೆಟ್ ಉರುಳಿಸಿದರು.

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.

  ಉಭಯ ತಂಡಗಳು ಇಂತಿವೆ:

  ಸನ್‌ರೈಸರ್ಸ್ ಹೈದರಾಬಾದ್  ತಂಡ:- ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್,  ಅಬ್ದುಲ್ ಸಮದ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಖಲೀಲ್ ಅಹ್ಮದ್  ಡೆಲ್ಲಿ ಕ್ಯಾಪಿಟಲ್ಸ್  ತಂಡ:- ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಆಕ್ಸರ್ ಪಟೇಲ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
  Published by:zahir
  First published: