DC vs RR: ಬೌಲರುಗಳ ಪರಾಕ್ರಮ: ರಾಜಸ್ಥಾನ್ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

IPL 2020, Delhi Capitals vs Rajasthan Royals : ಉಭಯ ತಂಡಗಳು ಇದುವರೆಗೆ 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ರಾಜಸ್ಥಾನ್ ರಾಯಲ್ಸ್​ 11 ಬಾರಿ ಗೆದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 10 ಸಲ ವಿಜಯ ತನ್ನದಾಗಿಸಿಕೊಂಡಿದೆ.

ರಾಜಸ್ಥಾನ್

ರಾಜಸ್ಥಾನ್

  • Share this:
    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 30ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ 13 ರನ್​ಗಳ ರೋಚಕ ಜಯ ಸಾಧಿಸಿದೆ. ಅಂತಿಮ ಐದು ಓವರ್​ಗಳಲ್ಲಿ ಸಂಘಟಿತ ದಾಳಿ ನಡೆಸಿದ ಡೆಲ್ಲಿ ಬೌಲರುಗಳು  ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್​ಮನ್​ಗಳನ್ನು 148ಕ್ಕೆ ನಿಯಂತ್ರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 162 ರನ್​ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ 3 ಓವರ್​ನಲ್ಲೇ ತಂಡದ ಮೊತ್ತವನ್ನು 30 ರ ಗಡಿದಾಟಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ಅನ್ರಿಕ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಬಟ್ಲರ್ (22) ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ಆರ್​. ಅಶ್ವಿನ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಮತ್ತೊಂದು ಆಘಾತ ನೀಡಿದರು.

    ಆದರೆ ಮತ್ತೊಂದಡೆ ಎಚ್ಚರಿಕೆಯ ಆಟದೊಂದಿಗೆ ರನ್ ಕದಿಯುತ್ತಾ ಸಾಗಿದ ಬೆನ್ ಸ್ಟೋಕ್ಸ್ ಪವರ್ ಪ್ಲೇ ಮುಕ್ತಾಯದ ವೇಳೆ ತಂಡದ ಸ್ಕೋರ್​ನ್ನು 50 ಕ್ಕೆ ತಂದು ನಿಲ್ಲಿಸಿದರು. ಪವರ್ ಪ್ಲೇ ಬಳಿಕ ಸಂಜು ಸ್ಯಾಮ್ಸನ್ ಜೊತೆಗೂಡಿ ಬಿರುಸಿನ ಆಟ ಪ್ರದರ್ಶಿಸಿದ ಸ್ಟೋಕ್ಸ್ 41 ರನ್​ಗಳಿಸಿದ್ದ ವೇಳೆ ತುಷಾರ್ ಎಸೆತದಲ್ಲಿ ಕ್ಯಾಚ್ ನೀಡಿದರು.

    ತಂಡದ ಮೊತ್ತ 97 ಆಗಿದ್ದ ವೇಳೆ ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಮತ್ತೊಮ್ಮೆ ಸಂಜು ಸ್ಯಾಮ್ಸನ್ (25) ನಿರಾಸೆ ಮೂಡಿಸಿದರು. ಬಳಿಕ ಬಂದ ರಿಯಾನ್ ಪರಾಗ್ (1) ರನೌಟ್ ಆಗುವ ಮೂಲಕ ಹೊರ ನಡೆದರು. ಇನ್ನೊಂದೆಡೆ ಎಚ್ಚರಿಕೆಯ ಆಟಕ್ಕೆ ರಾಬಿನ್ ಉತ್ತಪ್ಪ ಒತ್ತು ನೀಡಿದರು. ರಾಜಸ್ಥಾನ್ ರಾಯಲ್ಸ್​ಗೆ 16 ಎಸೆತಗಳಲ್ಲಿ 27 ರನ್ ಬೇಕಿದ್ದ ವೇಳೆ ಅನ್ರಿಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ರಾಬಿನ್ ಉತ್ತಪ್ಪ (32) ಪೆವಿಲಿಯನ್ ಕಡೆ ಮುಖ ಮಾಡಿದರು.

    ಕೊನೆಯ 2 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 25 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ಕಗಿಸೋ ರಬಾಡ ಕೇವಲ 4 ರನ್ ನೀಡಿ ಜೋಫ್ರಾ ವಿಕೆಟ್ ಪಡೆದರು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್​ಗೆ 22 ರನ್​ಗಳು ಬೇಕಿತ್ತು. ಈ ವೇಳೆ ಬೌಂಡರಿ ಲೈನ್​ನಲ್ಲಿ ರಹಾನೆ ಮಾಡಿದ ಅದ್ಬುತ ಫೀಲ್ಡಿಂಗ್ 5 ರನ್​ಗಳನ್ನು ಸೇವ್ ಮಾಡಿತು. ಅಲ್ಲದೆ ಯುವ ವೇಗಿ ಅಂತಿಮ ಓವರ್​ನಲ್ಲಿ ಕೇವಲ 8 ರನ್ ನೀಡಿ ಶ್ರೇಯಸ್ ಗೋಪಾಲ್ ವಿಕೆಟ್ ಪಡೆದರು. ಈ ಮೂಲಕ ತಂಡಕ್ಕೆ 13 ರನ್​ಗಳ ಜಯ ತಂದುಕೊಟ್ಟರು.

    ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಆರ್​ಆರ್ ಪಾಲಿನ ಫಿನಿಶರ್ ಎನಿಸಿಕೊಂಡಿದ್ದ ರಾಹುಲ್ ತೆವಾಠಿಯಾ  18 ಎಸೆತಗಳನ್ನು ಎದುರಿಸಿ ಕೇವಲ 14 ರನ್​​ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಕಗಿಸೋ ಅನ್ರಿಕ್ ನಾರ್ಟ್ಜೆ 4 ಓವರ್​ನಲ್ಲಿ 33 ರನ್ ನೀಡಿ 2 ವಿಕೆಟ್ ಉರುಳಿಸಿದರು. ರಬಾಡ, ಅಶ್ವಿನ್ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.

    ರಾಜಸ್ಥಾನ್ ರಾಯಲ್ಸ್ ಸ್ಕೋರ್: 148/8 (20)

    ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಡೆಲ್ಲಿಯ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾರನ್ನು ಮೊದಲ ಓವರ್​ನ ಮೊದಲ ಎಸೆತದಲ್ಲೇ ಜೋಫ್ರಾ ಆರ್ಚರ್ ಕ್ಲೀನ್ ಬೌಲ್ಡ್ ಮಾಡಿ ಶಾಕ್ ನೀಡಿದರು.

    3ನೇ ಓವರ್​ನಲ್ಲಿ ಅಜಿಂಕ್ಯ ರಹಾನೆ (2) ಯನ್ನು ಪೆವಿಲಿಯನ್​ಗೆ ಕಳುಹಿಸುವ ಮೂಲಕ ಆರ್ಚರ್ ರಾಜಸ್ಥಾನ್ ರಾಯಲ್ಸ್​ಗೆ 2ನೇ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಅದರೊಂದಿಗೆ ಉತ್ತಮ ಎಸೆತಗಳನ್ನು ಬೌಂಡರಿಗಟ್ಟಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಮೊತ್ತ 47 ಕ್ಕೆ ತಲುಪಿತು.

    ಪವರ್ ಪ್ಲೇ ಬಳಿಕ ರನ್ ವೇಗ ಹೆಚ್ಚಿಸಿದ ಶಿಖರ್ ಧವನ್ 30 ಎಸೆತಗಳಲ್ಲಿ ತಮ್ಮ 39ನೇ ಐಪಿಎಲ್ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ಸಿಕ್ಸರ್ ಸಿಡಿಸಿ ಅಬ್ಬರಿಸಿದರೂ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕ್ಯಾಚ್ ನೀಡಿ 57 ರನ್​ಗಳೊಂದಿಗೆ ಹೊರ ನಡೆದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಲ್ಲುತ್ತಿದ್ದಂತೆ ಬಿರುಸಿನ ಆಟಕ್ಕೆ ಮುಂದಾದ ಶ್ರೇಯಸ್ ಅಯ್ಯರ್ 2 ಸಿಕ್ಸರ್, 3 ಬೌಂಡರಿಯೊಂದಿಗೆ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

    ಕಾರ್ತಿಕ್ ತ್ಯಾಗಿ ಎಸೆದ 16ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಶ್ರೇಯಸ್ ಅಯ್ಯರ್ (53) ಜೋಫ್ರಾ ಆರ್ಚರ್ ಹಿಡಿದ ಉತ್ತಮ ಕ್ಯಾಚ್​ಗೆ ಬಲಿಯಾದರು. ಕೊನೆಯ ಮೂರು ಓವರ್​ಗಳಲ್ಲಿ ಮಾರಕ ದಾಳಿ ಸಂಘಟಿಸಿದ ರಾಜಸ್ಥಾನ್ ಬೌಲರುಗಳು ಸ್ಟೋಯಿನಿಸ್ ಹಾಗೂ ಅಲೆಕ್ಸ್ ಕ್ಯಾರಿ ರನ್​ಗಾಗಿ ಪರದಾಡುವಂತೆ ಮಾಡಿದರು. ಪರಿಣಾಮ ಒಂದು ಹಂತದಲ್ಲಿ 180 ರ ಗಡಿದಾಟಬೇಕಿದ್ದ ಡೆಲ್ಲಿ ಮೊತ್ತವು ನಿಗದಿತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ  161 ಕ್ಕೆ ಬಂದು ನಿಂತಿತು. ರಾಜಸ್ಥಾನ್ ರಾಯಲ್ಸ್ ಪರ ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ಜೋಫ್ರಾ ಆರ್ಚರ್ 4 ಓವರ್​ನಲ್ಲಿ 19 ರನ್ ನೀಡಿ 3 ವಿಕೆಟ್ ಉರುಳಿಸಿದರು.

    13 ರನ್​ಗಳ ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.



    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
    Published by:zahir
    First published: