news18-kannada Updated:October 31, 2020, 6:25 PM IST
ಮುಂಬೈ ಇಂಡಿಯನ್ಸ್
ದುಬೈ(ಅ. 31): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ - ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಪೊಲಾರ್ಡ್ ಪಡೆ 9 ವಿಕೆಟ್ಗಳ ಅಮೋಘ ಜಯ ಕಂಡಿದೆ. ಇತ್ತ ಹೀನಾಯ ಸೋಲುಂಡಿರುವ ಡೆಲ್ಲಿ ಪ್ಲೇ ಆಫ್ ಹಂತಕ್ಕೇರಲು ಉಳಿದಿರುವ ಒಂದು ಪಂದ್ಯ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಡೆಲ್ಲಿ ನೀಡಿದ್ದ 111 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ಆಡಿದರು. ಡಿಕಾಕ್ 28 ಎಸೆತಗಳಲ್ಲಿ 26 ರನ್ ಗಳಿಸಿ ಔಟ್ ಆದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗಲಿಲ್ಲ.
ಕಿಶನ್ ಹಾಗೂ ಸೂರ್ಯಕುಮಾರ್ ಜೊತೆಗೂಡಿ 14.2 ಓವರ್ಗಳಲ್ಲೇ ತಂಡಕ್ಕೆ ಗೆಲುವು ತಂದಿಟ್ಟರು. ಕಿಶನ್ 47 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 73 ರನ್ ಬಾರಿಸಿದರೆ, ಸೂರ್ಯಕುಮಾರ್ ಅಜೇಯ 12 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ, ಕಮ್ಬ್ಯಾಕ್ ಮಾಡಲು ಮತ್ತೆ ಎಡವಿದ ಪೃಥ್ವಿ ಶಾ 10 ರನ್ಗೆ ಬ್ಯಾಟ್ ಕೆಳಗಿಟ್ಟರು.
ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜೊತೆಗೂಡಿ 35 ರನ್ಗಳ ಕಾಣಿಕೆ ನೀಡಿದರಷ್ಟೆ. ಅಯ್ಯರ್ 25 ರನ್ಗೆ ಔಟ್ ಆದರೆ, ಪಂತ್ 21 ರನ್ ಗಳಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟಾಯಿನಿಸ್ 2 ರನ್ಗೆ ಬ್ಯಾಟ್ ಕೆಳಗಿಟ್ಟರು. ಶಿಮ್ರೋನ್ ಹೆಟ್ಮೇರ್ 11 ಹಾಗೂ ಹರ್ಷಲ್ ಪಟೇಲ್ 5 ರನ್ ಗಳಿಸಿ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದರು.
ಬಳಿಕ ಬಂದ ಬ್ಯಟ್ಸ್ಮನ್ಗಳು ಯಾರು ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಲಿಲ್ಲ. ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತಷ್ಟೆ, ಮುಂಬೈ ಪರ ಬುಮ್ರಾ ಹಾಗೂ ಬೌಲ್ಟ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ನಥನ್ ಕಲ್ಟರ್ ಹಾಗೂ ರಾಹುಲ್ ಚಹಾರ್ 1 ವಿಕೆಟ್ ಪಡೆದರು.
Published by:
Vinay Bhat
First published:
October 31, 2020, 6:25 PM IST