ಶಾರ್ಜಾ (ಅ. 23): 13ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಿಂದೆಂದೂ ನೀಡದ ಕಳಪೆ ಪ್ರದರ್ಶನ ನೀಡುತ್ತಿದೆ. ಅದು ಇಂದಿನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮುಂದುವರೆದಿದೆ. ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 41ನೇ ಪಂದ್ಯದಲ್ಲಿ ಮುಂಬೈ ಬೌಲರ್ಗಳ ಮಾರಕ ದಾಳಿಗೆ ತ್ತರಿಸಿದ ಚೆನ್ನೈ ಕೇವಲ 114 ರನ್ ಗಳಿಸಿದೆಯಷ್ಟೆ. ಈ ಹಿಂದೆ ಚೆನ್ನೈ ಇದಕ್ಕಿಂತ ಕಡಿಮೆ ಮೊತ್ತ ಕಲೆಹಾಕಿತ್ತಾದರೂ ಈ ಬಾರಿ ಅನುಭವಿಗಳಿಂದ ಕೂಡಿರುವ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಈರೀತಿ ಪ್ರದರ್ಶನ ನೀಡಿರುವುದು ಇದೇ ಮೊದಲು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಎಂದಿನಂತೆ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಟೂರ್ನಿಯಲ್ಲಿ 2ನೇ ಬಾರಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳದೆ ಮೊದಲ ಓವರ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. 2ನೇ ಓವರ್ನಲ್ಲಿ ಅಂಬಟಿ ರಾಯುಡು 2 ರನ್ಗೆ ಬುಮ್ರಾ ಬೌಲಿಂಗ್ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ಎನ್. ಜಗದೀಶನ್ ಸ್ಪಿಪ್ನಲ್ಲಿದ್ದ ಸೂರ್ಯಕುಮಾರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ನಾಯಕ ಎಂಎಸ್ ಧೋನಿ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಫಾಫ್ ಡುಪ್ಲೆಸಿಸ್ ಯೋಚನೆ ಫಲಿಸಲಿಲ್ಲ. ಬೌಲ್ಟ್ ಸ್ವಿಂಗ್ ಬೌಲಿಂಗ್ಗೆ ಡುಪ್ಲೆಸಿಸ್(1) ಶರಣಾದರು. ರವೀಂದ್ರ ಜಡೇಜಾ ಆಟ 7 ರನ್ಗೆ ಅಂತ್ಯವಾಯಿತು. ಧೋನಿ ಒಂದು ಸಿಕ್ಸ್ ಸಿಡಿಸಿ 16 ರನ್ಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. 50 ರನ್ಗೂ ಮೊದಲೇ 7 ವಿಕೆಟ್ ಕಳೆದುಕೊಂಡಿತು.
ಬಳಿಕ ಸ್ಯಾಮ್ ಕುರ್ರನ್ ಜೊತೆಯಾದ ದೀಪಕ್ ಚಹಾರ್(11) ಹಾಗೂ ಇಮ್ರಾನ್ ತಾಹಿರ್(13) ತಂಡದ ಖಾತೆಗೆ ಒಂದಿಷ್ಟು ರನ್ ಸೇರಿಸಿದರು. ಅದರಲ್ಲೂ ಕುರ್ರನ್ ತಂಡದ ರನ್ಗತಿಗೆ ಹೋರಾಡಿ ಅಂತಿಮ ಹಂತದವರೆಗೆ ಕ್ರೀಸ್ನಲ್ಲಿದ್ದರು. 47 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 52 ರನ್ ಚಚ್ಚಿದರು.
ಅಂತಿಮವಾಗಿ ಸಿಎಸ್ಕೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ತಲಾ 2 ಮತ್ತು ನಥನ್ ಕಲ್ಟರ್ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಮುಂಬೈ ಪರ ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದು, ಇವರ ಸ್ಥಾನದಲ್ಲಿ ಸೌರಭ್ ತಿವಾರಿ ಕಣಕ್ಕಿಳಿದಿದ್ದಾರೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್(ವಿ.ಕೀ), ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್ (ನಾಯಕ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ನಥನ್ ಕಲ್ಟರ್ ನೈಲ್.
ಚೆನ್ನೈ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕೇದರ್ ಜಾಧವ್, ಶೇನ್ ವಾಟ್ಸನ್ ಹಾಗೂ ಪಿಯೂಷ್ ಚಾವ್ಲಾ ತಂಡದಿಂದ ಹೊರಗುಳಿದಿದ್ದಾರೆ. ಇವರ ಬದಲು ಇಮ್ರಾನ್ ತಾಹಿರ್, ಎನ್. ಜಗದೀಶನ್ ಮತ್ತು ರುತುರಾಜ್ ಗಾಯಕ್ವಾಡ್ ಆಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್, ಇಮ್ರಾನ್ ತಾಹಿರ್.