ಅಬುಧಾಬಿ (ನ. 01): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್ಮನ್ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ದೀಪಕ್ ಹೂಡ ಅರ್ಧಶತಕದ ಪರಿಣಾಮ ಪಂಜಾಬ್ 20 ಓವರ್ಗಳಲ್ಲಿ 153 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ನಾಯಕ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 5 ಓವರ್ನಲ್ಲೇ 44 ರನ್ ಚಚ್ಚಿದರು.
ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಎನ್ಗಿಡಿ 15 ಎಸೆತಗಳಲ್ಲಿ 26 ರನ್ ಸಿಡಿಸಿದ್ದ ಮಯಾಂಕ್ರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ 29 ರನ್ ಗಳಿಸಿದ್ದ ರಾಹುಲ್ ಕೂಡ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ನಿಕೋಲಸ ಪೂರನ್ ಆಟ ಈ ಬಾರಿ ಕೇವಲ 2 ರನ್ಗೆ ಅಂತ್ಯವಾಯಿತು.
ಕ್ರಿಸ್ ಗೇಲ್ ಕೂಡ 12 ರನ್ ಗಳಿಸಿರುವಾಗ ತಾಹೀರ್ ಸ್ಪಿನ್ ಬಲೆಗೆ ಸಿಲುಕಿದರು. ಈ ಸಂದರ್ಭ ಮಂದೀಪ್ ಸಿಂಗ್ ಹಾಗೂ ದೀಪಕ್ ಹೂಡ ಒಂದಾಗ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 36 ರನ್ಗಳ ಜೊತೆಯಾಟ ಆಡಿದರು. ಮಂದೀಪ್ 15 ಎಸೆತಗಳಲ್ಲಿ 14 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಿದ ಹೂಡ ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದರು. ಹೂಡ 30 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ ಅಜೇಯ 62 ರನ್ ಗಳಿಸಿದರು.
ಅಂತಿಮವಾಗಿ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಚೆನ್ನೈ ಪರ ಲುಂಗಿ ಎನ್ಗಿಡಿ 3 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್: ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್, ಲುಂಗಿ ಎನ್ಗಿಡಿ.
ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡ, ನಿಕೋಲಸ್ ಪೂರನ್, ಜೇಮ್ಸ್ ನೀಶಮ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜೋರ್ಡನ್, ಮೊಹಮ್ಮದ್ ಶಮಿ.