news18-kannada Updated:November 1, 2020, 7:08 PM IST
ರುತುರಾಜ್ ಗಾಯಕ್ವಾಡ್
ಅಬುಧಾಬಿ (ನ. 01): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 53ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ರುತುರಾಜ್ ಗಾಯಕ್ವಾಡ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಚೆನ್ನೈ 9 ವಿಕೆಟ್ಗಳ ಜಯ ಕಂಡರೆ, ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅನೇಕ ತಪ್ಪುಗಳನ್ನೆಸೆದು ಸೋಲುಂಡ ಪಂಜಾಬ್ ಟೂರ್ನಿಯಿಂದ ಎರಡನೇ ತಂಡವಾಗಿ ಹೊರಬಿದ್ದಿದೆ.
ಪಂಜಾಬ್ ನೀಡಿದ್ದ 154 ರನ್ಗಳ ಸಾಧಾರಾಣ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆಗಿ ಬ್ಯಾಟ್ ಬೀಸಿದರು. ಅದರಲ್ಲೂ ಡುಪ್ಲೆಸಿಸ್ ಪವರ್ ಪ್ಲೇ ಓವರ್ನಲ್ಲಿ ಅಬ್ಬರಿಸಿದರೆ ಗಾಯಕ್ವಾಡ್ ಉತ್ತಮ ಸಾತ್ ನೀಡಿದರು.
ಮೊದಲ ವಿಕೆಟ್ಗೆ ಈ ಜೋಡಿ ಬರೋಬ್ಬರಿ 82 ರನ್ಗಳ ಕಾಣಿಕೆ ನೀಡಿತು. ಅರ್ಧಶತಕದ ಅಂಚಿನಲ್ಲಿ ಎಡವಿದ ಡುಪ್ಲೆಸಿಸ್ 34 ಎಸೆತಗಳಲ್ಲಿ 48 ರನ್ ಬಾರಿಸಿ ಔಟ್ ಆದರು. ಬಳಿಕ ಅಂಬಟಿ ರಾಯುಡು ಜೊತೆಯಾದ ಗಾಯಕ್ವಾಡ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಸತತ ಮೂರನೇ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ರುತುರಾಜ್ 49 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 62 ರನ್ ಸಿಡಿಸಿದರೆ, ರಾಯುಡು ಅಜೇಯ 30 ರನ್ ಗಳಿಸಿದರು.
ಚೆನ್ನೈ 18.5 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್ ಪರ ಕ್ರಿಸ್ ಜೋರ್ಡನ್ 1 ವಿಕೆಟ್ ಪಡೆದರು. ಇದರೊಂದಿಗೆ ಉಭಯ ತಂಡಗಳು ಐಪಿಎಲ್ 2020 ರಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಇದಕ್ಕೂ ಮುನ್ನ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ನಾಯಕ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 5 ಓವರ್ನಲ್ಲೇ 44 ರನ್ ಚಚ್ಚಿದರು.
ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಎನ್ಗಿಡಿ 15 ಎಸೆತಗಳಲ್ಲಿ 26 ರನ್ ಸಿಡಿಸಿದ್ದ ಮಯಾಂಕ್ರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ 29 ರನ್ ಗಳಿಸಿದ್ದ ರಾಹುಲ್ ಕೂಡ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ನಿಕೋಲಸ ಪೂರನ್ ಆಟ ಈ ಬಾರಿ ಕೇವಲ 2 ರನ್ಗೆ ಅಂತ್ಯವಾಯಿತು.
ಕ್ರಿಸ್ ಗೇಲ್ ಕೂಡ 12 ರನ್ ಗಳಿಸಿರುವಾಗ ತಾಹೀರ್ ಸ್ಪಿನ್ ಬಲೆಗೆ ಸಿಲುಕಿದರು. ಈ ಸಂದರ್ಭ ಮಂದೀಪ್ ಸಿಂಗ್ ಹಾಗೂ ದೀಪಕ್ ಹೂಡ ಒಂದಾಗ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 36 ರನ್ಗಳ ಜೊತೆಯಾಟ ಆಡಿದರು. ಮಂದೀಪ್ 15 ಎಸೆತಗಳಲ್ಲಿ 14 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ತಂಡದ ರನ್ ಗತಿ ಏರಿಸಲು ಹೋರಾಟ ನಡೆಸಿದ ಹೂಡ ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದರು. ಹೂಡ 30 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ ಅಜೇಯ 62 ರನ್ ಗಳಿಸಿದರು.
ಅಂತಿಮವಾಗಿ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಚೆನ್ನೈ ಪರ ಲುಂಗಿ ಎನ್ಗಿಡಿ 3 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
Published by:
Vinay Bhat
First published:
November 1, 2020, 7:08 PM IST