• ಹೋಂ
  • »
  • ನ್ಯೂಸ್
  • »
  • IPL
  • »
  • CSK vs KKR, IPL 2020: ಔಪಚಾರಿಕ ಪಂದ್ಯದಲ್ಲಿ ಧೋನಿ ಹುಡುಗರ ದರ್ಬಾರ್: ಪಂದ್ಯದ ಗತಿಯನ್ನೇ ಬದಲಾಯಿಸಿದ ಜಡ್ಡು

CSK vs KKR, IPL 2020: ಔಪಚಾರಿಕ ಪಂದ್ಯದಲ್ಲಿ ಧೋನಿ ಹುಡುಗರ ದರ್ಬಾರ್: ಪಂದ್ಯದ ಗತಿಯನ್ನೇ ಬದಲಾಯಿಸಿದ ಜಡ್ಡು

ಜಡೇಜಾ

ಜಡೇಜಾ

IPL 2020, Chennai Super Kings vs Kolkata Knight Riders: ಕೊನೆಯ ಎರಡು ಓವರ್​ನಲ್ಲಿ ಜಡೇಜಾ ಪಂದ್ಯದ ಗತಿಯನ್ನೇ ಬದಲಾಯಿಸಿದರು. 19ನೇ ಓವರ್​ನ ಫರ್ಗೂಸನ್ ಓವರ್​ನಲ್ಲಿ 20 ರನ್ ಚಚ್ಚಿದರು. ಕೊನೆಯ ಓವರ್​ನಲ್ಲಿ ಸಿಎಸ್​ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು.

  • Share this:

    ದುಬೈ (ಅ. 29): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ ರೋಚಕ ಜಯ ಸಾಧಿಸಿದೆ. ಔಪಚಾರಿಕ ಪಂದ್ಯದಲ್ಲಿ ಸಿಎಸ್​ಕೆ ಬ್ಯಾಟ್ಸ್​ಮನ್​ಗಳಾದ ಜಡೇಜಾ ಹಾಗೂ ರುತುರಾಜ್ ಅಬ್ಬರಿಸಿ ತಂಡಕ್ಕೆ 6 ವಿಕೆಟ್​ಗಳ ರೋಚಕ ಜಯ ತಂದಿಟ್ಟರು. ಇತ್ತ ಕೆಕೆಆರ್ ಪ್ಲೇ ಆಫ್ ಹಾದಿ ದುಸ್ತರವಾಗಿದೆ. ಜೊತೆಗೆ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಕ್ವಾಲಿಫೈಯರ್ ಆಗಿದೆ.


    ಕೆಕೆಆರ್ ನೀಡಿದ್ದ 173 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿತಾದರೂ ಒಂದು ವಿಕೆಟ್ ಕಳೆದುಕೊಂಡಿತು. ಶೇನ್ ವಾಟ್ಸನ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಪವರ್ ಪ್ಲೇ ನಲ್ಲಿ 44 ರನ್ ಕಲೆಹಾಕಿತು. ಆದರೆ, ವಾಟ್ಸನ್ ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸದೆ 14 ರನ್​ಗೆ ನಿರ್ಗಮಿಸಿದರು.


    2ನೇ ವಿಕೆಟ್​​ಗೆ ರುತುರಾಜ್ ಜೊತೆಯಾದ ಅಂಬಟಿ ರಾಯುಡು ಭರ್ಜರಿ ಆಟವಾಡಿದರು. 68 ರನ್​ಗಳ ಕಾಣಿಕೆ ನೀಡಿದರು. ರಾಯುಡು ಕೇವಲ 20 ಎಸೆತಗಳಲ್ಲಿ 38 ರನ್ ಬಾರಿಸಿದರು. ಈ ಜೋಡಿ ತಂಡದ ಗೆಲುವನ್ನು ಹತ್ತಿರಮಾಡಿತು. ಆದರೆ, ರಾಯುಡು ಬೆನ್ನಲ್ಲೇ ನಾಯಕ ಎಂಎಸ್ ಧೋನಿ(1) ಚಕ್ರವರ್ತಿ ಬೌಲಿಂಗ್​ನಲ್ಲಿ ಬೌಲ್ಡ್ ಆದರು.


    18ನೇ ಓವರ್​ನಲ್ಲಿ ಗಾಯಕ್ವಾಡ್ ಕೂಡ 53 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 72 ರನ್ ನಿರ್ಗಮಿಸಿದ್ದು ತಂಡದ ರನ್ ಗತಿ ಕುಸಿಯಿತು. ಆದರೆ ಬಳಿಕ ನಡೆದಿದ್ದು ಜಡೇಜಾ ಆಟ.



    ಕೊನೆಯ ಎರಡು ಓವರ್​ನಲ್ಲಿ ಜಡೇಜಾ ಪಂದ್ಯದ ಗತಿಯನ್ನೇ ಬದಲಾಯಿಸಿದರು. 19ನೇ ಓವರ್​ನ ಫರ್ಗೂಸನ್ ಓವರ್​ನಲ್ಲಿ 20 ರನ್ ಚಚ್ಚಿದರು. ಕೊನೆಯ ಓವರ್​ನಲ್ಲಿ ಸಿಎಸ್​ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಕೊನೆಯ 2 ಎಸೆತಗಳಲ್ಲಿ 7 ರನ್​ಗಳ ಬೇಕಾಗಿತ್ತು. 5ನೇ ಎಸೆತದಲ್ಲಿ ಜಡೇಜಾ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು. ಅಂತಿಮ ಎಸೆತದಲ್ಲಿ ಜಡ್ಡು ಮತ್ತೊಂದು ಸಿಕ್ಸ್ ಸಿಡಿಸಿ ತಂಡಕ್ಕೆ ರೋಚಕ ಜಯತಂದಿಟ್ಟರು.


    ಜಡೇಜಾ ಕೇವಲ 10 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೇಯ 25 ರನ್ ಚಚ್ಚಿದರೆ, ಕುರ್ರನ್ ಅಜೇಯ 13 ರನ್ ಗಳಿಸಿದರು. ಸಿಎಸ್​ಕೆ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಜಯ ಸಾಧಿಸಿತು. ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.


    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಈ ಜೋಡಿ ಮೊದಲ 6 ಓವರ್​ಗಳಲ್ಲಿ 48 ರನ್ ಕಲೆಹಾಕಿತು.


    ಆದರೆ, 8ನೇ ಓವರ್​ನ ಕರ್ಣ್​ ಶರ್ಮಾ ಬೌಲಿಂಗ್​ನಲ್ಲಿ ಶುಭ್ಮನ್ ಗಿಲ್(26 ರನ್, 17 ಎಸೆತ) ಔಟ್ ಆಗುವ ಮೂಲಕ ಕೆಕೆಆರ್ ಮೊದಲ ವಿಕೆಟ್ ಪತನ ಕೊಂಡಿತು. ಬಂದ ಬೆನ್ನಲ್ಲೇ ಒಂದು ಸಿಕ್ಸ್​ ಸಿಡಿಸಿ ಸುನೀಲ್ ನರೈನ್ ಬ್ಯಾಟ್ ಕೆಳಗಿಟ್ಟರು. ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ರಿಂಕು ಸಿಂಗ್ 11 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.


    ಬಳಿಕ ನಾಯಕ ಇಯಾನ್ ಮಾರ್ಗನ್ ಜೊತೆಯಾದ ರಾಣ ಬಿರುಸಿನ ಆಟ ಪ್ರದರ್ಶಿಸಿದರು. ಚೆನ್ನೈ ಬೌಲರ್​ಗಳ ಬೆಂಡೆತ್ತಿದ ರಾಣ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. ಅದರಲ್ಲೂ 16ನೇ ಓವರ್​ನ ಕರ್ಣ್​ ಶರ್ಮಾ ಬೌಲಿಂಗ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿ ಶಕ್ತಿ ಪ್ರದರ್ಶಿಸಿದರು. 61 ಎಸೆತಗಳಲ್ಲಿ ಆಡಿದ ರಾಣ 10 ಬೌಂಡರಿ, 4 ಸಿಕ್ಸರ್​ ಬಾರಿಸಿ 87 ರನ್ ಚಚ್ಚಿದರು.



    ಕೊನೆ ಹಂತದಲ್ಲಿ ಮಾರ್ಗನ್(15) ಹಾಗೂ ದಿನೇಶ್ ಕಾರ್ತಿಕ್(ಅಜೇಯ 21) ಬ್ಯಾಟ್ ಬೀಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಕೆಕೆಆರ್ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಚೆನ್ನೈ ಪರ ಲುಂಗಿ ಎನ್​ಗಿಡಿ 2, ಮಿಚೆಲ್ ಸ್ಯಾಂಟನರ್, ಕರ್ಣ್​ ಶರ್ಮಾ, ಜಡೇಜಾ ತಲಾ 1 ವಿಕೆಟ್ ಪಡೆದರು.

    Published by:Vinay Bhat
    First published: