ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದೆ. ಅಬುಧಾಬಿಯ ಶೇಖ್ ಝಾಯದ್ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಜಯದ ಅಭಿಯಾನ ಆರಂಭಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಪಡೆ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು ಸಿಎಸ್ಕೆಗೆ 162 ರನ್ಗಳ ಸವಾಲಿನ ಗುರಿ ನೀಡಿತ್ತು. ಈ ಟಾರ್ಗೆಟ್ನ್ನು ಬೆನ್ನಟ್ಟಿದ್ದ ಧೋನಿ ಪಡೆಯ ಆರಂಭಿಕರು ಮೊದಲೆರಡು ಓವರ್ಗಳಲ್ಲೇ ನಿರ್ಗಮಿಸಿದ್ದರು. 6 ರನ್ಗಳಿಗೆ 2 ವಿಕೆಟ್ ಉರುಳಿಸಿ ಆರಂಭಿಕ ಆಘಾತ ನೀಡಿದ್ದ ಮುಂಬೈ ಇಂಡಿಯನ್ಸ್ಗೆ ಸವಾಲಾಗಿ ಪರಿಣಮಿಸಿದ್ದು ಅಂಬಾಟಿ ರಾಯುಡು ಹಾಗೂ ಫಾಪ್ ಡುಪ್ಲೆಸಿಸ್. ಮೂರನೇ ವಿಕೆಟ್ಗೆ ಇಬ್ಬರ ಜೊತೆಯಾಟದಲ್ಲಿ ಮೂಡಿಬಂದಿದ್ದು ಬರೋಬ್ಬರಿ 115 ರನ್ಗಳು.
ಈ ಬಗ್ಗೆ ಮಾತನಾಡಿರುವ ಸಿಎಸ್ಕೆ ತಂಡದ ಆಟಗಾರ ಹರ್ಭಜನ್ ಸಿಂಗ್, ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ನಡುವಿನ ಪಾಲುದಾರಿಕೆ ಪಂದ್ಯದ ಮಹತ್ವದ ತಿರುವು ಎಂದಿದ್ದಾರೆ. ಏಕೆಂದರೆ ಮುಂಬೈ ಬೌಲರುಗಳು ಪ್ರಾಬಲ್ಯ ಸಾಧಿಸಿದ್ದ ವೇಳೆ ಇಬ್ಬರೂ ಅದ್ಭುತವಾಗಿ ಇನಿಂಗ್ಸ್ ಆಡಿದ್ದರು. ಇದೇ ಆಟ ಮುಂದಿನ ಪಂದ್ಯಗಳಲ್ಲೂ ಮುಂದುವರೆಯಬೇಕಿದೆ ಎಂದು ಭಜ್ಜಿ ಹೇಳಿದರು.
ಮುಂಬೈ ವಿರುದ್ಧದ ಗೆಲುವು ಸಿಎಸ್ಕೆ ಉತ್ತಮ ಶುಭಾರಂಭ ನೀಡಿದೆ. ಇದೇ ಮಾದರಿಯಲ್ಲಿ 2018 ರಲ್ಲೂ ನಾವು ಐಪಿಎಲ್ ಆರಂಭಿಸಿದ್ದೆವು. ಇದೀಗ ಮತ್ತೊಮ್ಮೆ ಅದೇ ಆಟ ಪುನಾರ್ವತನೆಯಾಗಿದೆ. ಈ ಬಾರಿ ಕೂಡ ಎರಡು ವರ್ಷಗಳ ಹಿಂದಿನಂತೆ ಸಿಎಸ್ಕೆ ಚಾಂಪಿಯನ್ಸ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಅಂಬಾಟಿ ರಾಯುಡು ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಭಜ್ಜಿ, 2019 ರ ವಿಶ್ವಕಪ್ ತಂಡದ ಆಯ್ಕೆ ವೇಳೆ ಸೆಲೆಕ್ಟರ್ಗಳು ಹೈದರಾಬಾದ್ ಬ್ಯಾಟ್ಸ್ಮನ್ನ್ನು ಕಡೆಗಣಿಸಿದ್ದರು. ಆದರೀಗ ಅದೇ ರಾಯುಡು ತಾನೆಂಬ ಬ್ಯಾಟ್ಸ್ಮನ್ ಎಂಬುದನ್ನು ತೋರಿಸಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದರು.
"ನೀವು ರಾಯುಡು ಅವರನ್ನು ಎಷ್ಟು ಪ್ರಶಂಸಿದರೂ ಅದು ಕಡಿಮೆನೇ. ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದಾಗ ಆತನಿಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ. ರಾಯುಡು ಖಂಡಿತವಾಗಿಯೂ ಆ ತಂಡದಲ್ಲಿ ಇರಬೇಕಾಗಿತ್ತು. ಆದರೆ ಅಂದು ಕೈ ಬಿಟ್ಟಿದ್ದಕ್ಕೆ ಇಂದು ರಾಯುಡು ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ ಎಂದು ಹರ್ಭಜನ್ ಸಿಂಗ್ ತಿಳಿಸಿದರು.
2019 ರ ವಿಶ್ವಕಪ್ ತಂಡದಲ್ಲಿ ಅಂಬಾಟಿ ರಾಯುಡುಗೆ ಸ್ಥಾನ ನೀಡಿರಲಿಲ್ಲ. ಬದಲಾಗಿ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಹಾಗೂ ವಿಜಯ್ ಶಂಕರ್ ಸ್ಥಾನ ಪಡೆದಿದ್ದರು. ಇದರಿಂದ ಮನ ನೊಂದಿದ್ದ ಹೈದರಾಬಾದ್ ಕ್ರಿಕೆಟಿಗ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಇಷ್ಟೇ ಅಲ್ಲದೆ ಇತ್ತೀಚೆಗೆ ಸುರೇಶ್ ರೈನಾ ಕೂಡ 2019 ಸೆಮಿ ಫೈನಲ್ನಲ್ಲಿ ತಂಡದಲ್ಲಿ ರಾಯುಡು ಇರುತ್ತಿದ್ರೆ ಪಂದ್ಯ ಫಲಿತಾಂಶ ಬದಲಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದರು. ಇದನ್ನು ಪುಷ್ಠೀಕರಿಸುವಂತೆ ಮುಂಬೈ ಇಂಡಿಯನ್ಸ್ ವಿರುದ್ದದ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಕಡೆಗಣಿಸಿದ ಆಯ್ಕೆಗಾರರಿಗೆ ರಾಯುಡು ಉತ್ತರ ನೀಡಿದ್ದಾರೆ. ಈ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ್ದ ಅಂಬಾಟಿ ರಾಯುಡು ಭರ್ಜರಿ 71 ರನ್ ಸಿಡಿಸಿ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮನಮೋಹಕ ಇನಿಂಗ್ಸ್ನಲ್ಲಿ ರಾಯುಡು ಬ್ಯಾಟ್ನಿಂದ 3 ಸಿಕ್ಸರ್ ಹಾಗೂ 6 ಬೌಂಡರಿಗಳು ಮೂಡಿಬಂದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ