ಐಪಿಎಲ್ ಸೀಸನ್ 13 ರಂಗೇರಲು ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭಿಮಾನಿಗಳಂತೆ ಸೆಲೆಬ್ರೆಟಿಗಳೂ ಕೂಡ ರಂಗು ರಂಗಿನ ಕ್ರಿಕೆಟ್ ಟೂರ್ನಿಯನ್ನು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಸ್ಯಾಂಡಲ್ವುಡ್ನ ಕ್ರಿಕೆಟ್ ಪ್ರಿಯರಂದೇ ಗುರುತಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಜೊತೆ ಮಾತನಾಡಿರುವ ಸೆಂಚುರಿ ಸ್ಟಾರ್, ತಮ್ಮ ತಂಡ ಹಾಗೂ ನೆಚ್ಚಿನ ಆಟಗಾರ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ನಡೆಸಿದ ಸಂದರ್ಶನದಲ್ಲಿ ಕ್ರಿಕೆಟ್ ಜೊತೆಗಿನ ತಮ್ಮ ಅವಿನಾಭಾವ ಸಂಬಂಧ ಹಂಚಿಕೊಂಡ ಶಿವಣ್ಣ, ಈ ಬಾರಿಯಾದರೂ ಆರ್ಸಿಬಿ ಕಪ್ ಗೆಲ್ಲಲಿ ಎಂದು ಹಾರೈಸಿದ್ದಾರೆ.
ಅಷ್ಟೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಕಪ್ತಾನ ಮಹೇಂದ್ರ ಸಿಂಗ್ ಧೋನಿಯನ್ನು ತಮ್ಮದೇ ಧಾಟಿಯಲ್ಲಿ ವರ್ಣಿಸಿ ಶಿವಣ್ಣ ಗಮನ ಸೆಳೆದರು. ಐಪಿಎಲ್ ಎಂಬುದು ಒಂದು ಟ್ರಿಕ್ಕಿ ಗೇಮ್ ಎಂದ ಸೆಂಚುರಿ ಸ್ಟಾರ್, ಈ ಆಟದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಾ ಸಿಕ್ಸರ್ಗೆ ಬೆಲೆಯೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ ಎಂದರು.
ಇನ್ನು ಆರ್ಸಿಬಿ ನಾಯಕ ಕೊಹ್ಲಿ ಅವರ ಆಟಿಟ್ಯೂಡ್ ಒಂಥರಾ ಟಗರಿನಿಂದಿದ್ದು, ಒಂದು ಬಾರಿ ಕ್ರೀಸ್ ಕಚ್ಚಚಿ ನಿಂತರೆ ಎದುರಾಳಿ ಬೌಲರ್ಗಳ ಮೇಲೆ ಟಗರು ರೀತಿಯಲ್ಲೇ ಎಗರಿ ಬೀಳುವಂತೆ ರನ್ ಮಳೆ ಸುರಿಸುತ್ತಾರೆ ಎಂದರು. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಕೂಡ ಶಿವಣ್ಣ ಮಾತನಾಡಿದ್ದು, ಅವರದ್ದು ಮಾಸ್ ಮತ್ತು ಕ್ಲಾಸ್ ವ್ಯಕ್ತಿತ್ವ ಎಂದು ತಿಳಿಸಿದರು. ಏಕೆಂದರೆ ಧೋನಿ ಅವರಲ್ಲಿ ನೀವು ಶಾಂತತೆ ಮಯತ್ತು ಗಂಭೀರತೆ ಎರಡನ್ನೂ ನೋಡಬಹುದು ಎಂದು ಸ್ಯಾಂಡಲ್ವುಡ್ ಮಾಸ್ ನಟ ಹೇಳಿದರು.
ಇದೇ ವೇಳೆ ತಮ್ಮ ನೆಚ್ಚಿನ ಬೌಲರ್ ಬಗ್ಗೆ ತಿಳಿಸಿದ ಶಿವಣ್ಣ, ಪಾಕಿಸ್ತಾನದ ವಾಸಿಂ ಅಕ್ರಮ್ ಅವರ ಓಟದ ಶೈಲಿ ತುಂಬಾ ವಿಭಿನ್ನ. ಅವರು ಜಿಂಕೆಯಂತೆ ಓಡಿ ಬಂದು ಚೆಂಡು ಎಸೆಯುವುದನ್ನು ನೋಡುವುದು ನನಗೆ ಸಖತ್ ಇಷ್ಟ ಎಂದರು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯಾದರೂ ಕಪ್ ಗೆದ್ದು ಬರಲಿ ಎಂದು ತುಂಬ ಹೃದಯದಿಂದ ಶಿವಣ್ಣ ಹಾರೈಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಸೀಸನ್ ನಾಳೆಯಿಂದ ಯುಎಇ ನಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಸೋಮವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ