• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಸದ್ದು ಗದ್ದಲಗಳ ನಡುವೆ ಅರಳಿದ ಪ್ರತಿಭೆ: ಐಪಿಎಲ್ ಅಂಗಳಕ್ಕೆ ಕಾಶ್ಮೀರಿ ಕ್ರಿಕೆಟಿಗನ ಎಂಟ್ರಿ

IPL 2020: ಸದ್ದು ಗದ್ದಲಗಳ ನಡುವೆ ಅರಳಿದ ಪ್ರತಿಭೆ: ಐಪಿಎಲ್ ಅಂಗಳಕ್ಕೆ ಕಾಶ್ಮೀರಿ ಕ್ರಿಕೆಟಿಗನ ಎಂಟ್ರಿ

Abdul Samad

Abdul Samad

Abdul Samad: ಈ ಸ್ಪೋಟಕ ಬ್ಯಾಟಿಂಗ್​ನಲ್ಲಿ 8 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು. ಅಂದರೆ ಈತನ ಈ ಸ್ಪೋಟಕ ಇನಿಂಗ್ಸ್​ನಲ್ಲಿ ಬೌಂಡರಿ-ಸಿಕ್ಸ್​ಗಳ ಮೂಲಕ ಮೂಡಿಬಂದಿದ್ದು 76 ರನ್​ಗಳು ಎಂದರೆ ಅಬ್ಬರ ಹೇಗಿತ್ತು ಎಂದು ಊಹಿಸಬಹುದು.

  • Share this:

ಜಮ್ಮು ಕಾಶ್ಮೀರದ ಎಂದರೆ ನಮಗೆಲ್ಲರಿಗೂ ಥಟ್ಟನೆ ನೆನಪಾಗುವುದು ಭಾರತೀಯ ಸೈನಿಕರು, ಗುಂಡಿನ ಮೊರೆತ, ಬಾಂಬ್ ಸ್ಪೋಟ, ಗುಡ್ಡಗಾಡು ಪ್ರದೇಶ, ಸೈನಿಕರು ಹಾಗೂ ಸ್ಥಳೀಯರ ನಡುವಣ ಚಕಮಕಿ. ಇವೆಲ್ಲ ಸದ್ದುಗಳ ನಡುವೆ ಇದೀಗ ಯುವ ಪ್ರತಿಭೆಯೊಂದು ಅರಳಿ ನಿಂತಿದೆ. ಅರಳಿರುವ ಪ್ರತಿಭೆ ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿನಿಧಿಸುತ್ತಿದ್ದಾರೆ. ಹೌದು, ಹೀಗೆ ಎಲ್ಲಾ ಸದ್ದು ಗದ್ದಲಗಳ ನಡುವೆ ಅರಳಿದ ಪ್ರತಿಭಾನ್ವಿತನ ಹೆಸರು ಅಬ್ದುಲ್ ಸಮದ್. ಜಮ್ಮು-ಕಾಶ್ಮೀರದ 18ರ ಹರೆಯದ ಯುವ ಬ್ಯಾಟ್ಸ್​ಮನ್. ಸದ್ಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಟಗಾರ. ಐಪಿಎಲ್​ 2020ಯ 11ನೇ ಪಂದ್ಯದ ಮೂಲಕ ಸಮದ್ ಪಾದರ್ಪಣೆ ಮಾಡಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ ಮೂರನೇ ಕಾಶ್ಮೀರಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಜಮ್ಮು-ಕಾಶ್ಮೀರ ಕ್ರಿಕೆಟ್​ನಲ್ಲಿ ಮಿಂಚಿದರೂ ಅಬ್ದುಲ್ ಸಮದ್​ಗೆ ಐಪಿಎಲ್ ದಾರಿ ತೋರಿಸಿಕೊಟ್ಟಿದ್ದು ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಎಂಬುದು ವಿಶೇಷ. 2018ರಲ್ಲಿ ಜಮ್ಮು ಕಾಶ್ಮೀರ ತಂಡದ ಆಟಗಾರ ಮತ್ತು ತರಬೇತುದಾರನಾಗಿ ತಂಡವನ್ನು ಮುನ್ನಡೆಸಿದ್ದ ಪಠಾಣ್, ತಮ್ಮ ರಣಜಿ ತಂಡಕ್ಕೆ ಹೊಸ ಆಟಗಾರರ ಹುಡುಕಾಟದಲ್ಲಿದ್ದರು.


Abdul Samad


ಈ ವೇಳೆ ಕಣಿವೆ ರಾಜ್ಯದ ಶಾಲಾ-ಕಾಲೇಜುಗಳನ್ನು ಹತ್ತಿ ಇಳಿದಿದ್ದರು. ಈಸಮಯದಲ್ಲಿ ಜಮ್ಮುವಿನ ಕಾಲೇಜ್​ವೊಂದರ ಕ್ಯಾಂಪ್​ನಲ್ಲಿ ಯುವ ಬ್ಯಾಟ್ಸ್​ಮನ್​ವೊಬ್ಬ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿರುವುದು ಗಮನಿಸಿದ್ದರು. ಅದರಂತೆ ಆತನನ್ನು ಆಯ್ಕೆ ಮಾಡಿದ ಪಠಾಣ್ ಚುಟುಕು ಕ್ರಿಕೆಟ್​ಗೆ ಈತ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಏಕೆಂದರೆ ಈ ವೇಳೆ 16ರ ಬಾಲಕನಾಗಿದ್ದ ಸಮದ್ ಹಿರಿಯ ಆಟಗಾರರು ನಾಚುವಂತೆ ಮುನ್ನುಗ್ಗಿ ಬೌಲರುಗಳನ್ನು ದಂಡಿಸುತ್ತಿದ್ದರು. ಪುಟ್ಟ ತೋಳ್ಬಲಗಳಿಂದ ದೊಡ್ಡ ಹೊಡೆತಗಳನ್ನು ಬಾರಿಸುತ್ತಿದ್ದರು.


ಅಬ್ದುಲ್ ಸಮದ್ ಅವರ ಈ ಬ್ಯಾಟಿಂಗ್ ಚಾಕಚಕ್ಯತೆಯನ್ನು ಗುರುತಿಸಿದ ಪಠಾಣ್, ಮುಷ್ತಾಕ್ ಅಲಿ ಟೂರ್ನಿಗಾಗಿ ಜಮ್ಮು-ಕಾಶ್ಮೀರ ತಂಡಕ್ಕೆ ಯುವ ಬ್ಯಾಟ್ಸ್​ಮನ್​ನ್ನು ಆಯ್ಕೆ ಮಾಡಿದರು. ಅಲ್ಲದೆ ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಿದರು. ಮೊದಲ ಪಂದ್ಯದಲ್ಲಿ 51ಎಸೆತಗಳಿಂದ 76 ರನ್ ಬಾರಿಸಿ ಸಮದ್ ತಂಡದ ಗೆಲುವಿನ ರೂವಾರಿಯಾದರು.


ಅಲ್ಲಿಂದ ಅಬ್ದುಲ್ ಸಮದ್ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಏಕೆಂದರೆ ಕಾಶ್ಮೀರದ ಯುವ ಕ್ರಿಕೆಟಿಗ ಪಠಾಣ್ ಗರಡಿಯ ಹುಡುಗ ಎಂದು ಗುರುತಿಸಿಕೊಂಡರು. ಲೀಸ್ಟ್ ಎ ಹಾಗೂ ರಣಜಿ ತಂಡಕ್ಕೂ ಆಯ್ಕೆಯಾದರು. ಜಮ್ಮು-ಕಾಶ್ಮೀರ ಪರ 10 ಪ್ರಥಮ ದರ್ಜೆ ಪಂದ್ಯವಾಡಿರುವ ಯುವ ಬ್ಯಾಟ್ಸ್​ಮನ್ 2 ಭರ್ಜರಿ ಶತಕ, 3 ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೆ ಟೂರ್ನಿಯಲ್ಲಿ ಒಟ್ಟಾರೆ 592 ರನ್​ಗಳನ್ನು ಬಾರಿಸಿ ಗಮನ ಸೆಳೆದರು. ಇದರಲ್ಲಿ ಸಮದ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 36 ಸಿಕ್ಸರ್​ಗಳು. ಹಾಗೆಯೇ 10 ಟಿ20 ಪಂದ್ಯಗಳಿಂದ 136.4 ಸ್ಟ್ರೈಕ್ ರೇಟ್ 240 ರನ್​ ಕಲೆಹಾಕಿದರು.


ಅಸ್ಸಾಂ ವಿರುದ್ಧದ ರಣಜಿ ಪಂದ್ಯದಲ್ಲಿ ಕೇವಲ 72 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿ ಸಿಡಿಲಬ್ಬರದ ಸಿಡಿಲಮರಿ ಎನಿಸಿಕೊಂಡರು. ಈ ಸ್ಪೋಟಕ ಬ್ಯಾಟಿಂಗ್​ನಲ್ಲಿ 8 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು. ಅಂದರೆ ಈತನ ಈ ಸ್ಪೋಟಕ ಇನಿಂಗ್ಸ್​ನಲ್ಲಿ ಬೌಂಡರಿ-ಸಿಕ್ಸ್​ಗಳ ಮೂಲಕ ಮೂಡಿಬಂದಿದ್ದು 76 ರನ್​ಗಳು ಎಂದರೆ ಅಬ್ಬರ ಹೇಗಿತ್ತು ಎಂದು ಊಹಿಸಬಹುದು.



ಇಷ್ಟು ಸಾಕಾಯಿತು, ಅಬ್ದುಲ್ ಸಮದ್ ಎಂಬ ಯುವ ಪ್ರತಿಭೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಬಾಗಿಲು ತೆರೆಯಲು. ಅದರಂತೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಸಮದ್​ ಅವರನ್ನು 20 ಲಕ್ಷಕ್ಕೆ ಖರೀದಿಸಿತು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಣಕ್ಕಿಳಿಯಲು ಅವಕಾಶ ನೀಡಲಾಯಿತು. ಅದರಂತೆ 18ನೇ ಓವರ್​ ವೇಳೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಜಮ್ಮು-ಕಾಶ್ಮೀರದ ಯುವ ಪ್ರತಿಭೆ ತಾನು ಎದುರಿಸಿದ ಮೊದಲ ಎಸೆತದಲ್ಲೇ 1 ರನ್ ಕಲೆಹಾಕುವ ಮೂಲಕ ಐಪಿಎಲ್​ನಲ್ಲಿ ರನ್ ಖಾತೆ ತೆರೆದರು.


ಅಲ್ಲದೆ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಹಾಗೆಯೇ ನಾರ್ಟ್ಜೆ ಅವರ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಖಾತೆಯನ್ನು ತೆರೆದರು. ಈ ಪಂದ್ಯದಲ್ಲಿ 7 ಎಸೆತಗಳಲ್ಲಿ 12 ರನ್ ಬಾರಿಸಿ ಸಮದ್ ಅಜೇಯರಾಗಿ ಉಳಿದರು. ಈ ಮೂಲಕ ಐಪಿಎಲ್ ಆಡಿದ ಮೂರನೇ ಜಮ್ಮು-ಕಾಶ್ಮೀರ ಕ್ರಿಕೆಟಿಗ ಎನಿಸಿಕೊಂಡರು. ಹಾಗೆಯೇ ಐಪಿಎಲ್​ಗೆ ಆಯ್ಕೆಯಾದ ನಾಲ್ಕನೇ ಕಾಶ್ಮೀರದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.



ಈ ಹಿಂದೆ ಜಮ್ಮು ಕಾಶ್ಮೀರದ ಕ್ರಿಕೆಟಿಗರಾದ ಪರ್ವೇಜ್ ರಸೂಲ್ (ಪುಣೆ ವಾರಿಯರ್ಸ್​), ಮಂಜೂರ್ ದಾರ್ (ಕಿಂಗ್ಸ್​ ಇಲೆವೆನ್ ಪಂಜಾಬ್- ಆಡುವ ಅವಕಾಶ ಸಿಕ್ಕಿರಲಿಲ್ಲ), ರಸಿಖ್ ಸಲಾಂ (ಮುಂಬೈ ಇಂಡಿಯನ್ಸ್​)  ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿನಿಧಿಸಿದ್ದರು.

POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:



KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀ

First published: