ಭಾರತದಲ್ಲಿ ಕೊರೋನಾ ಪ್ರಕರಣಗಳು ಮೀತಿ ಮೀರಿರುವ ಹಿನ್ನೆಲೆಯಲ್ಲಿ ಮುಂದಿನ ಟಿ20 ವಿಶ್ವಕಪ್ ಟೂರ್ನಿ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ರದ್ದಾಗಿರುವ ಬೆನ್ನೆಲ್ಲೇ ಈ ಬಗ್ಗೆ ಚರ್ಚೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಐಸಿಸಿ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರದಿದ್ದರೆ ಟಿ20 ವಿಶ್ವಕಪ್ ಆತಿಥ್ಯ ಭಾರತದ ಕೈ ತಪ್ಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಒಂದು ವೇಳೆ ಭಾರತದಲ್ಲಿ ಟಿ20 ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇನಲ್ಲಿ ಟೂರ್ನಿ ನಡೆಯಲಿದೆ. ಈಗಾಗಲೇ ಬಿಸಿಸಿಐ ಕೂಡ ಸ್ಟ್ಯಾಂಡ್ ಬೈ ತಾಣವಾಗಿ ಯುಎಇಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಐಸಿಸಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರವಾಗಲಿದೆ. ಭಾರತದಲ್ಲಿ ಕೊರೋನಾ ಪ್ರಕರಣಗಳು ಮೀತಿ ಮೀರಿದ್ದು, ಹೀಗಾಗಿ ಟಿ20 ವಿಶ್ವಕಪ್ನಂತಹ ದೊಡ್ಡ ಟೂರ್ನಿಯಲ್ಲಿ ಅಲ್ಲಿ ಆಯೋಜಿಸುವುದು ಸೂಕ್ತವಲ್ಲ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಇದಾಗ್ಯೂ ಐಪಿಎಲ್ ಅನ್ನು ಯಶಸ್ವಿಯಾಗಿ ಬಿಸಿಸಿಐ ಆಯೋಜಿಸಿದರೆ, ಭಾರತದಲ್ಲೇ ಟಿ20 ವಿಶ್ವಕಪ್ ನಡೆಯಲಿದೆ ಎನ್ನಲಾಗಿತ್ತು. ಆದರೀಗ ಐಪಿಎಲ್ ಅನಿರ್ದಿಷ್ಟವಾಧಿಗೆ ಮುಂದೂಡಲಾಗಿದೆ. ಅಲ್ಲದೆ ಕೊರೋನಾ ಪ್ರಕರಣಗಳು ದೇಶದಲ್ಲಿ ಮಿತಿ ಮೀರುತ್ತಿರುವುದರಿಂದ ದೊಡ್ಡ ಟೂರ್ನಿಯನ್ನು ಆಯೋಜಿಸುವುದು ಸುಲಭದ ಮಾತಲ್ಲ. ಅದರಲ್ಲೂ ಮುಂದಿನ ದಿನಗಳಲ್ಲಿ ಕೊರೋನಾ ಭೀತಿ ನಡುವೆ ಭಾರತದಲ್ಲಿ ಟೂರ್ನಿ ಆಡಲು ಹಲವು ದೇಶಗಳ ಆಟಗಾರರು ಹಿಂದೇಟು ಹಾಕಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ