T20 World Cup: ಭಾರತದಿಂದ ಟಿ20 ವಿಶ್ವಕಪ್ ಟೂರ್ನಿ ಸ್ಥಳಾಂತರ ಸಾಧ್ಯತೆ..!

ಐಪಿಎಲ್​ನಿಂದ ಆಸ್ಟ್ರೇಲಿಯಾ ಆಟಗಾರರಾದ ಕೇನ್ ರಿಚರ್ಡ್ಸನ್, ಆಂಡ್ರ್ಯೂ ಟೈ , ಆ್ಯಡಂ ಝಂಪಾ ಹಾಗೂ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಹಿಂದೆ ಸರಿದಿದ್ದು, ಮುಂದಿನ ದಿನಗಳಲ್ಲಿ ಕೊರೋನಾ ಭೀತಿ ನಡುವೆ ಭಾರತದಲ್ಲಿ ಟೂರ್ನಿ ಆಡಲು ಹಲವು ದೇಶಗಳ ಆಟಗಾರರು ಹಿಂದೇಟು ಹಾಕಲಿದ್ದಾರೆ.

ICC T20 World Cup 2021

ICC T20 World Cup 2021

  • Share this:
    ಭಾರತದಲ್ಲಿ ಕೊರೋನಾ ಪ್ರಕರಣಗಳು ಮೀತಿ ಮೀರಿರುವ ಹಿನ್ನೆಲೆಯಲ್ಲಿ ಮುಂದಿನ ಟಿ20 ವಿಶ್ವಕಪ್ ಟೂರ್ನಿ ಸ್ಥಳಾಂತರವಾಗುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಐಸಿಸಿ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರದಿದ್ದರೆ ಟಿ20 ವಿಶ್ವಕಪ್ ಆತಿಥ್ಯ ಭಾರತದ ಕೈ ತಪ್ಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

    ಒಂದು ವೇಳೆ ಭಾರತದಲ್ಲಿ ಟಿ20 ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇನಲ್ಲಿ ಟೂರ್ನಿ ನಡೆಯಲಿದೆ. ಈಗಾಗಲೇ ಬಿಸಿಸಿಐ ಕೂಡ ಸ್ಟ್ಯಾಂಡ್​ ಬೈ ತಾಣವಾಗಿ ಯುಎಇಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಐಸಿಸಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರವಾಗಲಿದೆ. ಭಾರತದಲ್ಲಿ ಕೊರೋನಾ ಪ್ರಕರಣಗಳು ಮೀತಿ ಮೀರಿದ್ದು, ಹೀಗಾಗಿ ಟಿ20 ವಿಶ್ವಕಪ್​ನಂತಹ ದೊಡ್ಡ ಟೂರ್ನಿಯಲ್ಲಿ ಅಲ್ಲಿ ಆಯೋಜಿಸುವುದು ಸೂಕ್ತವಲ್ಲ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

    ಈಗಾಗಲೇ ಐಪಿಎಲ್​ನಿಂದ ಆಸ್ಟ್ರೇಲಿಯಾ ಆಟಗಾರರಾದ ಕೇನ್ ರಿಚರ್ಡ್ಸನ್, ಆಂಡ್ರ್ಯೂ ಟೈ , ಆ್ಯಡಂ ಝಂಪಾ ಹಾಗೂ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಹಿಂದೆ ಸರಿದಿದ್ದು, ಮುಂದಿನ ದಿನಗಳಲ್ಲಿ ಕೊರೋನಾ ಭೀತಿ ನಡುವೆ ಭಾರತದಲ್ಲಿ ಟೂರ್ನಿ ಆಡಲು ಹಲವು ದೇಶಗಳ ಆಟಗಾರರು ಹಿಂದೇಟು ಹಾಕಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

    ಇದರ ಬೆನ್ನಲ್ಲೇ ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆತಿಥ್ಯ ಸ್ಥಳಾಂತರದ ಬಗ್ಗೆ ಐಸಿಸಿ ಕೂಡ ಚಿಂತೆನೆ ನಡೆಸಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ನ್ನು 2022ಕ್ಕೆ ಮುಂದೂಡಲಾಗಿದೆ. ಇದೀಗ 2021ರ ಟಿ20 ವಿಶ್ವಕಪ್​ಗೂ ಕೊರೋನಾ ಕಂಟಕ ಎದುರಾಗುವ ಸಾಧ್ಯತೆಯಿದೆ. ಆದರೆ ಈ ಹಿಂದೆ ಯುಎಇನಲ್ಲಿ ಐಪಿಎಲ್​ ಆಯೋಜಿಸಿದಂತೆ, ಈ ವರ್ಷವೇ ಟಿ20 ವಿಶ್ವಕಪ್​ನ್ನು ಆಯೋಜಿಸಲು ಬಿಸಿಸಿಐ ಕೂಡ ಚಿಂತನೆ ನಡೆಸಿದೆ. ಒಂದು ವೇಳೆ ಸೆಪ್ಟೆಂಬರ್​ ಒಳಗೆ ಭಾರತದಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸದಿದ್ದರೆ ಟಿ20 ವಿಶ್ವಕಪ್ ಭಾರತದ ಕೈತಪ್ಪುವುದು ಬಹುತೇಕ ಖಚಿತ.
    Published by:zahir
    First published: