IPL 2021- ‘ಇವ್ರು ಐಪಿಎಲ್ ರದ್ದು ಮಾಡಲ್ಲ’ – ನಟರಾಜನ್ ವಿಚಾರ ಕೆದಕಿ ಬಿಸಿಸಿಐ ಮೇಲೆ ಕೆಂಡಕಾರಿದ ವಾನ್

Michael Vaughan- ಹೈದರಾಬಾದ್ ಸನ್ ರೈಸರ್ಸ್ ತಂಡದ ಆಟಗಾರ ಟಿ ನಟರಾಜನ್​ಗೆ ಕೋವಿಡ್ ಪಾಸಿಟಿವ್ ಬಂದರೂ ಡೆಲ್ಲಿ ಮತ್ತು ಹೈದರಾಬಾದ್ ಪಂದ್ಯ ನಡೆದಿತ್ತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕೇಲ್ ವಾನ್ ಅವರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ಮೈಕೇಲ್ ವಾನ್

ಮೈಕೇಲ್ ವಾನ್

 • Cricketnext
 • Last Updated :
 • Share this:
  ಲಂಡನ್: ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನ ಭಾರತ ರದ್ದು ಮಾಡಿದ್ದು ಅಲ್ಲಿಯ ಕೆಲ ಕ್ರಿಕೆಟಿಗರನ್ನ ತೀವ್ರ ರೀತಿಯಲ್ಲಿ ಘಾಸಿಗೊಳಿಸಿದೆ. ಭಾರತ ತಂಡ ಇಂಗ್ಲೆಂಡ್ ಕ್ರಿಕೆಟ್​ಗೆ ದ್ರೋಹ ಎಸಗಿತು ಎಂದು ಅನೇಕ ಹಾಲಿ ಮತ್ತು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರು ಸಾಕಷ್ಟು ಬಾರಿ ಅಲವತ್ತುಕೊಂಡಿದ್ದಾರೆ. ಕೋವಿಡ್ ಸೋಂಕಿನ ಭಯಕ್ಕೆ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಐದನೇ ಟೆಸ್ಟ್​ಗೆ ಕಣಕ್ಕಿಳಿಯಲಿಲ್ಲ. ಅದರ ಬೆನ್ನಲ್ಲೇ ಯುಎಇಯಲ್ಲಿ ಐಪಿಎಲ್ ದ್ವಿತೀಯಾರ್ಧ ಶುರುವಾಗಿದೆ. ಒಂದೆರಡು ಪಂದ್ಯ ಕಳೆಯುತ್ತಲೇ ಐಪಿಎಲ್​ಗೂ ಕೋವಿಡ್ ಬಾಧಿಸತೊಡಗಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಟಿ ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಹಾಗು ಅವರ ನಿಕಟ ಸಂಪರ್ದಲ್ಲಿದ್ದ ಆರು ಮಂದಿಯನ್ನ ಸದ್ಯ ಐಸೋಲೇಶನ್​ನಲ್ಲಿ ಇಡಲಾಗಿದೆ.

  ಐಪಿಎಲ್​ನಲ್ಲಾಗಿರುವ ಈ ಕೋವಿಡ್ ಸೋಂಕಿನ ಪ್ರಕರಣವು ಈಗ ಇಂಗ್ಲೆಂಡ್ ಕ್ರಿಕೆಟಿಗರಿಗೆ ವಾಗ್ದಾಳಿ ನಡೆಸುವ ಸರಕಾಗಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನ ಭಾರತ ರದ್ದು ಮಾಡಿದ್ದನ್ನ ಬಲವಾಗಿ ಖಂಡಿಸಿದ ಆಟಗಾರರಲ್ಲಿ ಮಾಜಿ ಕ್ಯಾಪ್ಟನ್ ಮೈಕೇಲ್ ವಾನ್ ಕೂಡ ಒಬ್ಬರು. ಇವರು ಈಗ ನಟರಾಜನ್ ಕೋವಿಡ್ ಪ್ರಕರಣವನ್ನು ಉಲ್ಲೇಖಿಸಿದ್ದು ಐಪಿಎಲ್ ರದ್ದಾಗುವುದಿಲ್ಲ ಎಂದು ಚಾಲೆಂಜ್ ಮಾಡಿದ್ಧಾರೆ. “ಕೊನೆಯ ಟೆಸ್ಟ್ ಪಂದ್ಯಕ್ಕೆ ಮಾಡಿದಂತೆ ಐಪಿಎಲ್ ರದ್ದಾಗುತ್ತದಾ ಎಂದು ನೋಡೋಣ. ಐಪಿಎಲ್ ರದ್ದಾಗುವುದಿಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ” ಎಂದು ಮೈಕೇಲ್ ವಾನ್ ಅವರು ಟ್ವೀಟ್ ಮಾಡಿದ್ದಾರೆ.

  ಸನ್​ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಟಿ ನಟರಾಜನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಡುತ್ತಿದ್ದಂತೆಯೇ ತಂಡದ ಬೇರೆ ಆಟಗಾರರ ಆರ್​ಟಿಪಿಸಿಆರ್ ಪರೀಕ್ಷೆಗಳನ್ನ ನಡೆಸಲಾಗಿದೆ. ಸದ್ಯ ನಟರಾಜನ್ ಅವರು ಐಸೋಲೇಶನ್​ನಲ್ಲಿದ್ಧಾರೆ. ಅವರೊಂದಿಗೆ ಇತ್ತೀಚೆಗೆ ನಿಕಟ ಸಂಪರ್ಕದಲ್ಲಿದ್ದ ಆಲ್​ರೌಂಡರ್ ವಿಜಯ್ ಶಂಕರ್ ಸೇರಿದಂತೆ ಆರು ಮಂದಿಯನ್ನೂ ಐಸೋಲೇಶನ್​ಗೆ ಒಳಪಡಿಸಲಾಗಿದೆ. ವಿಜಯ್ ಶಂಕರ್ ಅವರಲ್ಲದೇ ಟೀಮ್ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯೆ ಅಂಜಲಾ ವಣ್ಣನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸ್ವಾಮಿ ಗಣೇಸನ್ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ. ಸದ್ಯ ಇವರ್ಯಾರಿಗೂ ಯಾವುದೇ ರೋಗಲಕ್ಷಣಗಳಿಲ್ಲ. ನಟರಾಜನ್ ಕೂಡ ಎಸಿಂಪ್ಟಮ್ಯಾಟಿಕ್ (Asmyptomatic) ಆಗಿದ್ದಾರೆ.

  ಇದೇ ವೇಳೆ, ನಟರಾಜನ್ ಜೊತೆಗೆ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಿದ ಹೈದರಾಬಾದ್​ನ ಇತರೆಲ್ಲಾ ಆಟಗಾರರಿಗೆ ನೆಗಟಿವ್ ರಿಸಲ್ಟ್ ಬಂದಿದೆ. ಈಗ ಮತ್ತೊಮ್ಮೆ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೂ ಪರೀಕ್ಷೆಗೆ ಸ್ಯಾಂಪಲ್ ಪಡೆಯಲಾಗಿದೆ.

  ಇದನ್ನೂ ಓದಿ: Sara Tendulkar- ಕ್ಲಿನಿಕ್ ಹೊರಗೆ ಕಾಣಿಸಿದ ಸಾರಾ ತೆಂಡೂಲ್ಕರ್; ವೈರಲ್ ಆಗಿವೆ ಫೋಟೋಸ್

  ಐಪಿಎಲ್ ಪತ್ರಿಕಾ ಪ್ರಕಟಣೆ ಮಾಹಿತಿ:

  ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಟಿ ನಟರಾಜನ್ ಅವರು ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್-10 ಪಾಸಿಟಿವ್ ಬಂದಿದ್ಧಾರೆ. ತಂಡದ ಇತರ ಸದಸ್ಯರಿಂದ ನಟರಾಜನ್ ಐಸೋಲೇಶನ್​ನಲ್ಲಿ ಒಳಪಟ್ಟಿದ್ದಾರೆ. ಸದ್ಯ ಅವರು ಎಸಿಂಪ್ಟಮ್ಯಾಟಿಕ್ ಆಗಿದ್ಧಾರೆ.

  ವೈದ್ಯಕೀಯ ತಂಡವು ನಟರಾಜನ್ ಜೊತೆ ನಿಕಟವಾಗಿದ್ದ ಆರು ಮಂದಿಯನ್ನು ಗುರುತಿಸಿ ಅವರನ್ನೂ ಐಸೋಲೇಶನ್​ನಲ್ಲಿ ಇಟ್ಟಿದೆ. ಈ ಆರು ಮಂದಿ ಪಟ್ಟಿ ಇಲ್ಲಿದೆ:

  1) ವಿಜಯ್ ಶಂಕರ್- ಆಟಗಾರ
  2) ವಿಜಯ್ ಕುಮಾರ್- ಟೀಮ್ ಮ್ಯಾನೇಜರ್
  3) ಶ್ಯಾಮ್ ಸುಂದರ್ ಜೆ- ಫಿಸಿಯೋ ಥೆರಪಿಸ್ಟ್
  4) ಅಂಜನಾ ವಣ್ಣನ್- ವೈದ್ಯರು
  5) ತುಷಾರ್ ಖೇಡ್ಕರ್ – ಲಾಜಿಸ್ಟಿಕ್ಸ್ ಮ್ಯಾನೇಜರ್
  6) ಪೆರಿಯಸಾಮಿ ಗಣೇಸನ್- ನೆಟ್ ಬೌಲರ್

  ನಟರಾಜನ್ ಸೇರಿದಂತೆ ಹೈದರಾಬಾದ್ ತಂಡದ ಏಳು ಮಂದಿ ಐಸೋಲೇಶನ್​ನಲ್ಲಿ ಇದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಯಾವುದೇ ತಡೆಯಿಲ್ಲದೇ ನಡೆಯಿತು. ಡೆಲ್ಲಿ ತಂಡ ನಿರಾಯಾಸವಾಗಿ ಗೆದ್ದು ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಹೈದರಾಬಾದ್ ತಂಡ ಪಟ್ಟಿಯ ತಳದಲ್ಲಿ ಮುಂದುವರಿದಿದೆ.

  ಹೈದರಾಬಾದ್ ತಂಡದ ಪ್ರಮುಖ ಬೌಲರ್ ಎನಿಸಿದ್ದ ಟಿ ನಟರಾಜನ್ ಅವರು ನಿಯಮ ಪ್ರಕಾರ 10 ದಿನ ಪ್ರತ್ಯೇಕ ವಾಸದಲ್ಲಿರಬೇಕಾಗುತ್ತದೆ. ಹೀಗಾಗಿ, ಅವರು ಇನ್ನೂ ಒಂದೆರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದು ಹೈದರಾಬಾದ್ ತಂಡಕ್ಕೆ ಹಿನ್ನಡೆ ಎಂದೇ ಪರಿಗಣಿಸಲಾಗಿದೆ.
  Published by:Vijayasarthy SN
  First published: