ಪ್ರಿಯಂ ಗರ್ಗ್...ಕ್ರಿಕೆಟ್ ಪ್ರೇಮಿಗಳು ಈ ಹೆಸರನ್ನು ಕಳೆದ ವರ್ಷ ಒಮ್ಮೆಯಾದರೂ ಕೇಳಿರುತ್ತೀರಿ. ಏಕೆಂದರೆ 19ರ ಹರೆಯದ ಈ ಯುವ ಆಟಗಾರನೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದು. ಇದೀಗ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಗರ್ಗ್ ಹೆಸರು ತುಸು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಶುಕ್ರವಾರ ಐಪಿಎಲ್ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಚಾಕಚಕ್ಯತೆಯನ್ನು ಪ್ರದರ್ಶಿಸಿರುವುದು. ಸನ್ರೈಸರ್ಸ್ ಹೈದರಾಬಾದ್ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಪ್ರಿಯಂ ಗರ್ಗ್ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ರನೌಟ್ಗೆ ಕಾರಣರಾಗಿದ್ದರು. ಇದನ್ನು ನೋಡಿದ ಬಹುತೇಕರು ಈ ಯುವ ಆಟಗಾರನನ್ನು ಬೈದಿರಲೂಬಹುದು. ಆದರೆ ನಾನು ಕೂಡ ಬ್ಯಾಟ್ಸ್ಮನ್ ಎಂಬುದನ್ನು ಆ ಬಳಿಕ ಗರ್ಗ್ ನಿರೂಪಿಸಿದರು.
ಮೈದಾನದಲ್ಲೇ ಗುರಾಯಿಸಿ ಹಿಂತಿರುಗಿದ್ದ ವಿಲಿಯಮ್ಸನ್ ಕೂಡ ಎದ್ದು ನಿಂತು ಚಪ್ಪಾಳೆ ಹೊಡೆಯುವಂತಹ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 26 ಎಸೆತಗಳಲ್ಲಿ ಎದುರಿಸಿದ ಗರ್ಗ್ 51 ರನ್ ಬಾರಿಸಿ ಮಿಂಚಿದರು. ಈ ಭರ್ಜರಿ ಇನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಡಿ ಬಂದಿತ್ತು.
ಪ್ರಿಯಂ ಗರ್ಗ್ ಅವರ ಕ್ರಿಕೆಟ್ ಜರ್ನಿ ಆರಂಭ ಕೆಂಪು ಹಾಸಿನ ಸ್ವಾಗತವೇನು ಆಗಿರಲಿಲ್ಲ. ಏಕೆಂದರೆ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಗರ್ಗ್ ಬೆಳೆದಿರುವುದು ಅಕ್ಕಂದಿರ ಲಾಲನೆ ಪಾಲನೆಯಲ್ಲಿ. 11 ವಯಸ್ಸಿನಲ್ಲೇ ತಾಯಿಯ ಪ್ರೀತಿಯನ್ನು ಕಳೆದುಕೊಂಡಿದ್ದ ಈತನ ಕನಸನ್ನು ಪೂರೈಸಲು ತಂದೆ ಪಣ ತೊಟ್ಟಿದ್ದರು. ಆದರೆ ಗರ್ಗ್ ಕಂಡಿದ್ದ ಕನಸೇನು ಚಿಕ್ಕದಾಗಿರಲಿಲ್ಲ. ಅದು ಟೀಮ್ ಇಂಡಿಯಾ ಎಂಬ ಮುಗಿಲೆತ್ತರದ ಗುರಿ. ಅದಕ್ಕೇನು ಮಾಡಬೇಕೆಂಬುದು ತಂದೆಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಮಗನಿಗೆ ಕ್ರಿಕೆಟಿಗನಾಗಬೇಕೆಂಬ ಆಸೆಯಿದೆ ಅದಕ್ಕೆ ಬೇಕಾದ ಹಣ ಹೊಂದಿಸಲು ಪಣ ತೊಟ್ಟರು.
ಒಂದೆಡೆ ಮಗ ಸತತ ಪ್ರಯತ್ನದಲ್ಲಿದ್ರೆ, ಮತ್ತೊಂದೆಡೆ ಪ್ರಿಯಂ ಗರ್ಗ್ ತಂದೆ ಮಾಡದ ಕೆಲಸವಿರಲಿಲ್ಲ ಎನ್ನಬಹುದು. ತನ್ನ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ, ಅದರ ಜೊತೆಗೆ ಮಗನಿಗೆ ಬೇಕಾದ ಕ್ರಿಕೆಟ್ ಸಾಮಗ್ರಿಗಳು, ಫೀಸುಗಳನ್ನು ಹೊಂದಿಸಬೇಕಿತ್ತು. ಹೀಗಾಗಿ ಹಾಲು ಮಾರುವುದು, ಶಾಲಾ ವ್ಯಾನ್ಗಳನ್ನು ಓಡಿಸುವುದು, ಅದರ ಜೊತೆ ಲೋಡಿಂಗ್ ಕೆಲಸಕ್ಕೆ ಹೋಗುವುದು...ಹೀಗೆ ಒಂದಲ್ಲ..ಎರಡಲ್ಲ ಹಲವು ಕೆಲಸಗಳನ್ನು ಒಂದೇ ದಿನ ಮಾಡುತ್ತಿದ್ದರು. ತಮ್ಮ ಜೀವನವನ್ನೇ ಮಗನಿಗಾಗಿ ಮುಡಿಪಾಗಿಟ್ಟು ಕೆಲಸ ಮಾಡುತ್ತಿದ್ದ ಆ ಬಡಪಾಯಿ, ತನ್ನ ಸರ್ವಸುಖಗಳನ್ನು ತ್ಯಾಗ ಮಾಡಿದರು.
ಇಷ್ಟೇ ಅಲ್ಲದೆ ಬೆಳಿಗ್ಗೆ ಎದ್ದು ಹಳ್ಳಿಯಿಂದ 25 ಕಿ.ಮೀ ದೂರದಲ್ಲಿದ್ದ ಕ್ರಿಕೆಟ್ ಅಕಾಡೆಮಿಗೆ ಸೈಕಲ್ನಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಹಾಗೆಯೇ ಸಂಜೆಯ ನಂತರ ಕರೆದುಕೊಂಡು ಬರುತ್ತಿದ್ದರು. ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಸಾಲಗಳನ್ನು ಮಾಡಿ ಕೋಚಿಂಗ್ ವ್ಯವಸ್ಥೆಗೆ ಭಂಗ ಬರದಂತೆ ನೋಡಿಕೊಂಡರು. ತಂದೆಯ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ತಿಳಿದುಕೊಂಡಿದ್ದ ಗರ್ಗ್ ಇತ್ತ ಕಠಿಣ ಅಭ್ಯಾಸದಲ್ಲಿ ನಿರತಾದರು. ನನ್ನ ಕ್ರಿಕೆಟ್ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆಗೆ ಕ್ರಿಕೆಟ್ ಮೂಲಕವೇ ಎಲ್ಲವನ್ನೂ ಮರಳಿ ಕೊಡಿಸುವ ಗಟ್ಟಿ ನಿರ್ಧಾರ ಮಾಡಿದ್ದನು.
ಅದರಂತೆ ಉತ್ತರ ಪ್ರದೇಶದ ಅಂಡರ್ -14 ತಂಡ ಮತ್ತು ಅಂಡರ್ -16 ತಂಡಗಳಿಗೆ ಆಯ್ಕೆಯಾದರು. ಈ ಎರಡು ಸ್ಟೇಜ್ಗಳಲ್ಲಿನ ಭರ್ಜರಿ ಪ್ರದರ್ಶನ ಅಂಡರ್-19 ಗೂ ರಹದಾರಿ ಮಾಡಿಕೊಟ್ಟಿತು. ಉತ್ತರಪ್ರದೇಶದ ಚೊಚ್ಚಲ ರಣಜಿ ಟ್ರೋಫಿ 2018-19ರ ಸೀಸನ್ನಲ್ಲಿ 800 ಕ್ಕಿಂತ ಹೆಚ್ಚು ರನ್ ಗಳಿಸಿದರು. ಗೋವಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು. ಅಷ್ಟೇ ಸಾಕಾಯಿತು ಪ್ರಿಯಂ ಗರ್ಗ್ ಎಂಬ ಯುವ ಬ್ಯಾಟ್ಸ್ಮನ್ನ ಕಠಿಣ ಪರಿಶ್ರಮಕ್ಕೆ ಅಂಡರ್-19 ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲು. ಅಲ್ಲಿ ಸಿಕ್ಕಿದ್ದೇ ದಿ ಲೆಜೆಂಡ್ ರಾಹುಲ್ ದ್ರಾವಿಡ್.
ರಾಹುಲ್ ದ್ರಾವಿಡ್ ಕೋಚಿಂಗ್ನಲ್ಲಿ ಯುವ ಆಟಗಾರ ಮತ್ತಷ್ಟು ಪಳಗಿದ. ಬ್ಯಾಟಿಂಗ್ನಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಿದ. ಯುವ ಕ್ರಿಕೆಟಿಗನ ಶಾಂತ ಸ್ವಭಾವ, ಎಲ್ಲರನ್ನೂ ನಿಯಂತ್ರಿಸುವ ಸಾಮರ್ಥ್ಯ ಗಮನಿಸಿದ್ದ ದ್ರಾವಿಡ್, ಗರ್ಗ್ಗೆ ಟೀಮ್ ಇಂಡಿಯಾ ನಾಯಕನ ಪಟ್ಟ ನೀಡಿದರು. ಅದರಂತೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಫೈನಲ್ ತನಕ ಕೊಂಡೊಯ್ದಿದ್ದನು. ದುರಾದೃಷ್ಟವಶಾತ್ ಫೈನಲ್ ಪಂದ್ಯದಲ್ಲಿ ಮಳೆ ಬಂದ ಕಾರಣ ಡಕ್ವರ್ತ್ ನಿಯಮದ ಪ್ರಕಾರ ಬಾಂಗ್ಲಾದೇಶ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಆದರೆ ಅಂದು ತಂಡವನ್ನು ಮುನ್ನಡೆಸಿದ್ದ ಪ್ರಿಯಂ ಗರ್ಗ್ ಭಾರತದಲ್ಲಿ ಮನೆಮಾತಾಗಿದ್ದ. ಅಲ್ಲದೆ ಯುವ ಆಟಗಾರನ ಮೇಲೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕಣ್ಣಿಟ್ಟಿತ್ತು. ಅದರಂತೆ 2019-20 ರ ಐಪಿಎಲ್ ಹರಾಜಿನಲ್ಲಿ ಗರ್ಗ್ ಅವರನ್ನು 1.9 ಕೋಟಿಗೆ ಖರೀದಿಸಲಾಯಿತು. ಕೋಟಿ ಮೊತ್ತಕ್ಕೆ ನಾನೇಕೆ ಮಾರಾಟವಾದೆ ಎಂಬುದನ್ನು ಸಿಎಸ್ಕೆ ವಿರುದ್ಧದ ಪಂದ್ಯದ ಮೂಲಕ 19ರ ಹರೆಯದ ಪ್ರಿಯಂ ಗರ್ಗ್ ನಿರೂಪಿಸಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಐಪಿಎಲ್ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ