ಶಾರ್ಜಾ: ಐಪಿಎಲ್ 2021 ಟೂರ್ನಿ ಮುಕ್ತಾಯಕ್ಕೆ ಎರಡೇ ಪಂದ್ಯ ಬಾಕಿ ಇದೆ. ಇವತ್ತು ನಡೆಯುವ ಎರಡನೇ ಕ್ವಾಲಿಫಯರ್ (Qualifier 2) ಮತ್ತು ಅ. 15ರಂದು ನಡೆಯುವ ಫೈನಲ್ ಪಂದ್ಯ. ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ಗೆ (Orange Cap) ರೇಸ್ ಜೋರಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಕೆಎಲ್ ರಾಹುಲ್ ಅವರು ಈಗಲೂ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರಾದರೂ ಮೂವರು ಬ್ಯಾಟರ್ಸ್ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಆದರೆ, ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುವ ಪರ್ಪಲ್ ಕ್ಯಾಪ್ನ (Purple Cap) ರೇಸ್ನಲ್ಲಿ ಹರ್ಷಲ್ ಪಟೇಲ್ (Harshal Patel) ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಹರ್ಷಲ್ ಪಟೇಲ್ 15 ಪಂದ್ಯಗಳಿಂದ ದಾಖಲೆಯ 32 ವಿಕೆಟ್ ಪಡೆದಿದ್ದಾರೆ. ನಿನ್ನೆ ಕೋಲ್ಕತಾ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಒಂದು ಕ್ಯಾಚ್ ಡ್ರಾಪ್ ಮಾಡದೇ ಹೋಗಿದ್ದರೆ ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಹರ್ಷಲ್ ಪಟೇಲ್ ಅವರದ್ದಾಗಿರುತ್ತಿತ್ತು.
ಆದರೆ, ಈ ಸೀಸನ್ನಲ್ಲಿ 32 ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ತಮ್ಮ ಸಮೀಪ ಸ್ಪರ್ಧಿ ಅವೇಶ್ ಖಾನ್ ಅವರಿಗಿಂತ 9 ವಿಕೆಟ್ ಹೆಚ್ಚು ಪಡೆದಿದ್ದಾರೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ತಲುಪಿದಲ್ಲಿ ಅವೇಶ್ ಖಾನ್ ಎರಡು ಪಂದ್ಯಗಳನ್ನ ಆಡಬಹುದು. ಅದರಲ್ಲಿ ಅವರು 10 ವಿಕೆಟ್ಗಳನ್ನ ಗಳಿಸಬೇಕಾದೀತು. ಆ ಸಾಧ್ಯತೆ ಸ್ವಲ್ಪ ಕಡಿಮೆ.
ಪ್ಲೇ ಆಫ್ನಲ್ಲಿರುವ ಡೆಲ್ಲಿ, ಕೋಲ್ಕತಾ ಮತ್ತು ಚೆನ್ನೈ ತಂಡಗಳ ಪೈಕಿ ಪರ್ಪಲ್ ಕ್ಯಾಪ್ ರೇಸ್ ಗೆಲ್ಲುವ ಸಂಭವ ಇರುವ ಇತರ ಬೌಲರ್ಗಳೆಂದರೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ರಡಬ ಮಾತ್ರ. ಶಾರ್ದೂಲ್ ಠಾಕೂರ್ 18 ವಿಕೆಟ್ ಪಡೆದಿದ್ದಾರಾದರೂ ಚೆನ್ನೈ ತಂಡಕ್ಕೆ ಇರುವುದು ಒಂದೇ ಪಂದ್ಯ. ಅವರು ಫೈನಲ್ನಲ್ಲಿ 10 ವಿಕೆಟ್ ಕಿತ್ತರೂ ಪರ್ಪಲ್ ಕ್ಯಾಪ್ ಸಿಕ್ಕೋದಿಲ್ಲ. ಇನ್ನು, ವರುಣ್ ಚಕ್ರವರ್ತಿ 16 ವಿಕೆಟ್ ಹೊಂದಿದ್ದಾರೆ. ಒಂದು ವೇಳೆ ಎರಡು ಪಂದ್ಯ ಆಡಿದಲ್ಲಿ ಒಟ್ಟು 17 ವಿಕೆಟ್ ಪಡೆಯಬೇಕಾಗುತ್ತದೆ. ಅದು ವಾಸ್ತವಿಕವಾಗಿ ಸಾಧ್ಯವಿಲ್ಲದ್ದು. ಅಕ್ಷರ್ ಪಟೇಲ್ (15 ವಿಕೆಟ್), ಸುನೀಲ್ ನರೈನ್ (14) ಮತ್ತು ಕಗಿಸೋ ರಬಡ (13) ಅವರಿಂದಲೂ ಹರ್ಷಲ್ ಪಟೇಲ್ ಅವರನ್ನ ಓವರ್ಟೇಕ್ ಮಾಡುವುದು ತೀರಾ ಕಷ್ಟಸಾಧ್ಯ. ಹೀಗಾಗಿ, ಅವೇಶ್ ಖಾನ್ ಹೊರತುಪಡಿಸಿ ಉಳಿದ ಯಾವ ಬೌಲರ್ಗೂ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಹರ್ಷಲ್ ಪಟೇಲ್ ಅವರನ್ನ ಹಿಂದಿಕ್ಕಿ ನಂಬರ್ ಒನ್ ಆಗುವ ಅವಕಾಶ ಇಲ್ಲ.
ಇದನ್ನೂ ಓದಿ: KL Rahul- ಮುಂದಿನ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಸೆಳೆಯಲು ಕಾಯುತ್ತಿವೆ ಈ 3 ತಂಡಗಳು
ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೋ 2013-14ರ ಸೀಸನ್ನಲ್ಲಿ 32 ವಿಕೆಟ್ ಪಡೆದಿದ್ದರು. ಅದು ಈಗಲೂ ದಾಖಲೆಯಾಗಿಯೇ ಉಳಿದುಕೊಂಡಿದೆ. ಹರ್ಷಲ್ ಪಟೇಲ್ ಆ ದಾಖಲೆಯನ್ನ ಸರಿಗಟ್ಟಿದ್ದಾರೆ. ಒಂದು ಸೀಸನ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯಂತೂ ಹರ್ಷಲ್ ಪಟೇಲ್ ಬೆನ್ನಿಗಿದೆ. ಅವೇಶ್ ಖಾನ್ ಎರಡು ಪಂದ್ಯದಲ್ಲಿ 10 ವಿಕೆಟ್ ಪಡೆದಲ್ಲಿ ಈ ಎರಡೂ ದಾಖಲೆಗಳನ್ನ ಅಳಿಸುವ ಅವಕಾಶ ಹೊಂದಿದ್ದಾರೆ.
PURPLE CAP:
ಐಪಿಎಲ್ 2021ನಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಪಡೆದವರು (ಎಲಿಮಿನೇಟರ್ ಪಂದ್ಯದ ಬಳಿಕ):
1) ಹರ್ಷಲ್ ಪಟೇಲ್, ಆರ್ಸಿಬಿ: 32
2) ಅವೇಶ್ ಖಾನ್, ಡೆಲ್ಲಿ: 23
3) ಜಸ್ಪ್ರೀತ್ ಬುಮ್ರಾ, ಮುಂಬೈ: 21
4) ಮೊಹಮ್ಮದ್ ಶಮಿ, ಪಂಜಾಬ್: 19
5) ಅರ್ಶ್ದೀಪ್ ಸಿಂಗ್, ಪಂಜಾಬ್: 18
6) ಯುಜವೇಂದ್ರ ಚಹಲ್, ಆರ್ಸಿಬಿ: 18
7) ರಷೀದ್ ಖಾನ್, ಹೈದರಾಬಾದ್: 18
8) ಶಾರ್ದೂಲ್ ಠಾಕೂರ್, ಚೆನ್ನೈ: 18
9) ಜೇಸನ್ ಹೋಲ್ಡರ್, ಹೈದರಾಬಾದ್: 16
10) ವರುಣ್ ಚಕ್ರವರ್ತಿ, ಕೆಕೆಆರ್: 16
ಇಂದು ಶಾರ್ಜಾದಲ್ಲಿ ಸಂಜೆ 7:30ಕ್ಕೆ ಎರಡನೇ ಕ್ವಾಲಿಫಯರ್ ಪಂದ್ಯ ಆರಂಭವಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇದರಲ್ಲಿ ಗೆದ್ದವರು ಅ. 15ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನ ಎದುರಿಸಲಿದ್ದಾರೆ. ಇಲ್ಲಿ ಚೆನ್ನೈ ತಂಡ ಒಂಬತ್ತನೇ ಬಾರಿ ಫೈನಲ್ ಪ್ರವೇಶಿಸಿದ್ದು, ನಾಲ್ಕನೇ ಬಾರಿ ಪ್ರಶಸ್ತಿ ಪಡೆಯುವ ಪ್ರಯತ್ನ ಮಾಡುತ್ತಿದೆ. ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೂವರೆಗೆ ಒಮ್ಮೆಯೂ ಟ್ರೋಫಿ ಗೆಲ್ಲಲು ಆಗಿಲ್ಲ. ಕೋಲ್ಕತಾ ತಂಡ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್ಗಾಗಿ ಪ್ರಯತ್ನ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ