ನವದೆಹಲಿ, ಡಿ. 7: ಟೀಮ್ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಅವರು ಆಡುವುದು ಬಹುತೇಕ ನಿಂತುಹೋಗಿದೆ. ಟೀಮ್ ಇಂಡಿಯಾ ಇರಲಿ ಐಪಿಎಲ್ನಲ್ಲೂ ಅವರ ಆಟವನ್ನು ನೋಡಲಾಗುತ್ತಿಲ್ಲ. ಕಳೆದ ಬಾರಿಯ ಐಪಿಎಲ್ನಲ್ಲಿ ಭಾರತದಲ್ಲಿ ನಡೆದ ಲೆಗ್ನಲ್ಲಿ ಅವರು ಕೆಲ ಪಂದ್ಯಗಳನ್ನ ಆಡಿದ್ದು ಬಿಟ್ಟರೆ ಉಳಿದಂತೆ ಸ್ಟೇಡಿಯಂನಲ್ಲಿ ಕೂತು ಉಳಿದ ಆಟಗಾರರಿಗೆ ಸಲಹೆಗಳನ್ನ ಕೊಡುವುದಕ್ಕೆ ಸೀಮಿತಗೊಂಡಿದ್ದರು. ಇದೀಗ ಅವರು ಕೋಚಿಂಗ್ ವೃತ್ತಿಯನ್ನೇ ಹಿಡಿದು ಸಾಗಲಿದ್ದಾರೆ ಎಂದು ಕೆಲ ಸುದ್ದಿಗಳು ಹೇಳುತ್ತಿವೆ.
ಮೂಲಗಳ ಪ್ರಕಾರ, ಈಗಾಗಲೇ ಕೆಲ ಐಪಿಎಲ್ ಫ್ರಾಂಚೈಸಿಗಳು ಹರ್ಭಜನ್ ಅವರನ್ನ ಕೋಚಿಂಗ್ ಟೀಮ್ಗೆ ಸೆಳೆಯುವ ಪ್ರಯತ್ನದಲ್ಲಿವೆ. ಇದಕ್ಕೆ ಮುನ್ನ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಘೋಷಿಸುವ ನಿರೀಕ್ಷೆ ಇದ್ದು, ಅದಾದ ಬಳಿಕವಷ್ಟೇ ಅವರು ಯಾವ ತಂಡದ ಕೋಚಿಂಗ್ ಸ್ಟಾಫ್ಗೆ ಸೇರಿಕೊಳ್ಳಬಹುದೆಂದು ಯೋಜಿಸಲಿದ್ದಾರೆ.
ಮೆಂಟರ್ ಆಗಬಹುದು ಭಜ್ಜಿ:
“ಕೋಚ್ ಎಂದರೆ ಹರ್ಭಜನ್ ಸಿಂಗ್ ಮುಖ್ಯ ಕೋಚ್ ಆಗುವುದಿಲ್ಲ. ಅವರು ತಂಡಕ್ಕೆ ಕನ್ಸಲ್ಟೆಂಟ್, ಮೆಂಟರ್ ಆಗಬಹುದು. ಅಥವಾ ಫ್ರಾಂಚೈಸಿಯ ಸಲಹಾ ತಂಡದ ಭಾಗವಾಗಬಹುದು. ಹರ್ಭಜನ್ ಅವರನ್ನ ಸಂಪರ್ಕಿಸುತ್ತಿರುವ ಫ್ರಾಂಚೈಸಿಯು ಆಟಗಾರನ ಅಗಾಧ ಅನುಭವವನ್ನು ಬಳಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಒಂದು ವೇಳೆ ಆ ಫ್ರಾಂಚೈಸಿ ಜೊತೆ ಮಾತುಕತೆ ಸಫಲವಾದರೆ ಐಪಿಎಲ್ ಹರಾಜಿನಲ್ಲಿ ತಂಡಕ್ಕೆ ಸೂಕ್ತವೆನಿಸುವ ಆಟಗಾರನನ್ನು ಆರಿಸುವ ಜವಾಬ್ದಾರಿಯನ್ನ ಹರ್ಭಜನ್ಗೂ ಕೊಡುವ ಸಾಧ್ಯತೆ ಇದೆ” ಎಂದು ಐಪಿಎಲ್ ಮೂಲವೊಂದು ತನಗೆ ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹರ್ಭಜನ್ ಸಿಂಗ್ ಮೊದಲಿಂದಲೂ ಸಹ-ಆಟಗಾರರನ್ನ ಉತ್ತೇಜಿಸುವ ಸ್ವಭಾವದವರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಇದ್ದ ಅವರು ಕೆಲ ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯದಲ್ಲಿ ಹೆಚ್ಚು ಆಸಕ್ತಿ ತೋರಿದ್ದುಂಟು.
ಇದನ್ನೂ ಓದಿ: ಮತ್ತೆ ಒಂದಾದರಾ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್? ಇಲ್ಲಿದೆ ಆ್ಯಡ್ ಸ್ಟೋರಿ
ವರುಣ್ ಚಕ್ರವರ್ತಿಗೆ ಮಾರ್ಗದರ್ಶಕ: ಕಳೆದ ವರ್ಷ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದರು. ಆದರೆ, ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ಹರ್ಭಜನ್ ಸಿಂಗ್ ಬೌಲಿಂಗ್ ಸಲಹೆಗಳನ್ನ ನೀಡಿ ಮಾರ್ಗದರ್ಶನ ನೀಡುತ್ತಿದ್ದರೆನ್ನಲಾಗಿದೆ.
ಅಯ್ಯರ್ ಬಗ್ಗೆ ಭವಿಷ್ಯ:
ವೆಂಕಟೇಶ್ ಅಯ್ಯರ್ ಐಪಿಎಲ್ ಸ್ಟಾರ್ ಆಗಿ ಹೊರಹೊಮ್ಮುವ ಮುನ್ನವೇ ಅವರ ಬಗ್ಗೆ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದರು. ನಾನು ಇನ್ನೂ ಯಾವುದೇ ಪಂದ್ಯ ಆಡದೇ ಇದ್ದಾಗಲೂ ನೆಟ್ ಸೆಷೆನ್ಸ್ನಲ್ಲಿ ನನ್ನ ಬ್ಯಾಟಿಂಗ್ ನೋಡಿದ ಹರ್ಭಜನ್ ಸಿಂಗ್ ಅವರು ನಾನು ಬಿಗ್ ಹಿಟ್ ಆಗಬಹುದು ಎಂದು ಹೇಳಿದ್ದರೆಂದು ಸ್ವತಃ ವೆಂಕಟೇಶ್ ಅಯ್ಯರ್ ಅವರೇ ಹೇಳಿದ್ದುಂಟು.
ಕ್ಯಾಪ್ಟನ್ ಕೂಡ ಹರ್ಭಜನ್ ಸಲಹೆಗೆ ಕಿವಿಗೊಡುತ್ತಿದ್ದರು:
ಆಟಗಾರನಾಗಿದ್ದಕ್ಕಿಂತ ಹೆಚ್ಚಾಗಿ ಸಲಹೆಗಾರನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹರ್ಭಜನ್ ಸಿಂಗ್ ಕೊಡುಗೆ ಹೆಚ್ಚು ಮಹತ್ವದ್ದು. ತಂಡದ ಆಯ್ಕೆಯಿಂದ ಹಿಡಿದು ರಣತಂತ್ರ ಇತ್ಯಾದಿ ವಿಚಾರಗಳಲ್ಲಿ ಹರ್ಭಜನ್ ಸಿಂಗ್ ಅವರ ಸಲಹೆಗಳನ್ನ ಮ್ಯಾನೇಜ್ಮೆಂಟ್ ಗಂಭೀರವಾಗಿ ಪರಿಗಣಿಸುತ್ತಿತ್ತು. ಸ್ವತಃ ನಾಯಕ ಇಯಾನ್ ಮಾರ್ಗನ್ ಅವರೂ ಕೂಡ ಹರ್ಭಜನ್ ಸಿಂಗ್ ಅವರ ಸಲಹೆಗೆ ಕಿವಿಗೊಡುತ್ತಿದ್ದರೆನ್ನಲಾಗಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿ: ಹೊಸ ವೇಳಾಪಟ್ಟಿ ಪ್ರಕಟ; ಡಿ. 26ರಿಂದ ಮೊದಲ ಟೆಸ್ಟ್
“ಈ ಸೀಸನ್ ಮುಗಿದ ಬಳಿಕ ಹರ್ಭಜನ್ ಸಿಂಗ್ ಅವರು ಅಧಿಕೃತವಾಗಿ ನಿವೃತ್ತಿ ಘೋಷಿಸಬೇಕೆಂದಿದ್ದರು. ಅವರನ್ನ ಕೋಚಿಂಗ್ ವಿಭಾಗಕ್ಕೆ ಸೆಳೆಯಲು ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿವೆ. ಇದರಲ್ಲಿ ಒಂದು ಫ್ರಾಂಚೈಸಿ ಜೊತೆ ಹರ್ಭಜನ್ ಸಿಂಗ್ ಮಾತುಕತೆ ನಡೆಸುತ್ತಿದ್ದಾರೆ. ಇದು ಸಫಲವಾದ ಬಳಿಕ ಅದರ ಬಗ್ಗೆ ಹರ್ಭಜನ್ ಸಿಂಗ್ ಬಹಿರಂಗವಾಗಿ ಮಾತನಾಡಬಹುದು” ಎಂದು ಸುದ್ದಿಮೂಲವು ಹೇಳಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಬಹುತೇಕ ಎಲ್ಲಾ ಪಾತ್ರವನ್ನು ಮಾಡಿರುವ ಹರ್ಭಜನ್ ಸಿಂಗ್ ಅವರು ಅದೇ ತಂಡದ ಕೋಚಿಂಗ್ ವಿಭಾಗದಲ್ಲಿ ಮುಂದುವರಿಯುತ್ತಾರಾ ಅಥವಾ ಬೇರೆ ತಂಡವನ್ನ ಸೇರಿಕೊಳ್ಳುತ್ತಾರಾ ಮುಂದಿ ದಿನಗಳಲ್ಲಿ ಬಹಿರಂಗಗೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ