ಐಪಿಎಲ್ 2022ರ (IPL 2022) 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (RCB vs GT) ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ದುಕೊಂಡಿದೆ. ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಈ ಟ್ರೆಂಡ್ ಫಾಲೋ ಮಾಡದ ಆರ್ಸಿಬಿ ಬ್ಯಾಟಿಂಗ್ ಆಯ್ದುಕೊಂಡಿದೆ. ಮೆಗಾ ಹರಾಜಿನ ಬಳಿಕ ಗುಜರಾತ್ ಟೈಟಾನ್ಸ್ (Gujarat Titans) ಸಿದ್ಧಪಡಿಸಿದ ತಂಡವನ್ನು ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ತಂಡ ಪ್ಲೇ-ಆಫ್ಚ (Play Off) ಹತ್ತಿರಕ್ಕೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ, ಗುಜರಾತ್ ಟೈಟನ್ಸ್ ಆಟ ಕಂಡು ಹೀಗಂದುಕೊಂಡಿದ್ದವರು ದಂಗಾಗಿ ಹೋಗಿದ್ದಾರೆ.
ಆಡಿರುವ 8ರಲ್ಲಿ 7 ಪಂದ್ಯ ಗೆದ್ದು ಗುಜರಾತ್ ಪ್ಲೇ-ಆಫ್ ಹೊಸ್ತಿಲಿಗೆ ಬಂದು ನಿಂತಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್ಗೆ ಕರೆದೊಯ್ಯಲಿದೆ. ಇತ್ತ ಆರ್ಸಿಬಿ ಇಂದಿನ ಪಂದ್ಯ ಗೆದ್ದು ಗೆಲುವಿನ ಲಯಕ್ಕೆ ಮತ್ತೆ ಮರಳಲಿದ್ಯಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.
ಎರಡೂ ತಂಡಗಳಲ್ಲಿ ಬದಲಾವಣೆ!
ಬೆಂಗಳೂರು ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸುಯಾಶ್ ಪ್ರಭುದೇಸಾಯಿ ಬದಲಿಗೆ ಮಹಿಪಾಲ್ ಲೋಮ್ರಾರ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಅಭಿನವ್ ಮನೋಹರ್ ಹಾಗೂ ಯಶ್ ದಯಾಳ್ಗೆ ವಿಶ್ರಾಂತಿ ನೀಡಲಾಗಿದ್ದು, ಪ್ರದೀಪ್ ಸಂಗ್ವಾನ್ ಹಾಗೂ ಸಾಯಿ ಸುದರ್ಶನ್ ತಂಡ ಕೂಡಿಕೊಂಡಿದ್ದಾರೆ.
ಪಿಚ್ ವರದಿ ಏನ್ ಹೇಳುತ್ತೆ?
ಇಂದಿನ ಬ್ರೆಬೋರ್ನ್ ಸ್ಟೇಡಿಯಂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಾಯವಾಗುವಂತಹ ಮೈದಾನವಾಗಿದೆ. ಮದ್ಯಾಹ್ನದ ಪಂದ್ಯವಾದ್ದರಿಂದ ಯಾವುದೇ ತೇವಾಂಶದ ಸಮಸ್ಯೆ ಕಾಡುವುದಿಲ್ಲ.
ಇದನ್ನೂ ಓದಿ: ಗೆಲುವಿನ ಲಯಕ್ಕೆ ಮರಳಲಿದೆಯಾ RCB? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದರ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರಾರ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ದಿಮಾನ್ ಸಾಹ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಸುದರ್ಶನ್, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್, ಮೊಹಮ್ಮದ್ ಶಮಿ, ಪ್ರದೀಪ್ ಸಂಗ್ವಾನ್.
ಕಮಾಲ್ ಮಾಡ್ತಾರಾ ವಿರಾಟ್ ಕೊಹ್ಲಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಗ್ರಕ್ರಮಾಂಕದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಈ ಮೂವರು ಆಟಗಾರರ ಪೈಕಿ ಒಬ್ಬ ಆಟಗಾರನಿಂದ ದೊಡ್ಡ ಇನಿಂಗ್ಸ್ ನಿರೀಕ್ಷೆ ಮಾಡುತ್ತಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗ್ರೌಂಡ್ಗೆ ಬಂದ ವೇಗದಲ್ಲೇ ಔಟ್ ಆಗಿ ಪೆವಿಲಿಯನ್ ಸೇರುತ್ತಿದ್ದಾರೆ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲಾದರೂ ವಿರಾಟ್ ಕೊಹ್ಲಿ ಅವರಿಂದ ಒಳ್ಳೆಯ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ ಆರ್ಸಿಬಿ ಅಭಿಮಾನಿಗಳು.
ಇದನ್ನೂ ಓದಿ: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಪಂಜಾಬ್, ಗೆಲುವಿನ ನಗೆಬೀರಿದ ಲಕ್ನೋ ತಂಡ
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಆರ್ಸಿಬಿ ಬೌಲರ್ಗಳು ಶಿಸ್ತುಬದ್ದ ದಾಳಿ ನಡೆಸಿದ್ದರು. ಇಂದೂ ಕೂಡಾ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ