ಪಂಜಾಬ್ ತಂಡದಲ್ಲಿದ್ದಾಗ ವಿಫಲರಾಗಿದ್ದ ಮ್ಯಾಕ್ಸ್​ವೆಲ್ ಆರ್​ಸಿಬಿಯಲ್ಲಿ ಮಿಂಚುತ್ತಿರುವ ಗುಟ್ಟೇನು?

Glenn Maxwell Reveals Secret- ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ 11 ಪಂದ್ಯಗಳಿಂದ 108 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಇದೀಗ ಆರ್​ಸಿಬಿಯಲ್ಲಿ 11 ಪಂದ್ಯಗಳಿಂದ 407 ರನ್ ಗಳಿಸಿದ್ದಾರೆ. ಇವರ ಈ ಭರ್ಜರಿ ಫಾರ್ಮ್​ಗೆ ಏನು ಕಾರಣ?

ಗ್ಲೆನ್ ಮ್ಯಾಕ್ಸ್​ವೆಲ್

ಗ್ಲೆನ್ ಮ್ಯಾಕ್ಸ್​ವೆಲ್

 • Share this:
  ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಜೊತೆಗಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. 11 ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 108 ರನ್ ಮಾತ್ರ. ಹಾಗಾಗಿ, ಪಂಜಾಬ್ ತಂಡ ಅವರನ್ನ ರಿಲೀವ್ ಮಾಡಿತ್ತು. ಆದರೆ, ಈ ಸೀಸನ್​ನ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡ ಗ್ಲೆನ್ ಮ್ಯಾಕ್ಸ್​​ವೆಲ್ ಅವರನ್ನ ಖರೀದಿಸಲು ಪೈಪೋಟಿಗೆ ಬಿದ್ದಿದ್ದವು. ಅಂತಿಮವಾಗಿ ಆರ್​ಸಿಬಿ ತಂಡ 14.25 ಕೋಟಿ ಮೊತ್ತ ಕೊಟ್ಟು ಸೆಳೆದುಕೊಂಡಿತು. ಹಿಂದಿನ ಐಪಿಎಲ್​ನಲ್ಲಿ ವಿಫಲರಾಗಿದ್ದ ಆಟಗಾರನಿಗೆ ಇಷ್ಟು ಮೊತ್ತವಾ ಎಂದು ಕೆಲವರು ಹುಬ್ಬೇರಿಸಿದ್ದರು ಕೂಡ. ಆದರೆ, ಐಪಿಎಲ್ ಫ್ರಾಂಚೈಸಿಗಳು ಸಾಮಾನ್ಯವಾಗಿ ಒಬ್ಬ ಆಟಗಾರನ ಮೇಲೆ ಕೋಟಿಗಟ್ಟಲೆ ಹಣ ಸುರಿಯೋದಿಲ್ಲ. ಅಳೆದು ತೂಗಿ ಅವರ ಆಟ, ಫಾರ್ಮ್ ಇತ್ಯಾದಿಯನ್ನ ಲೆಕ್ಕಾಚಾರ ಮಾಡಿ ಹರಾಜಿಗೆ ಸಿದ್ಧವಾಗಿ ಬಂದಿರುತ್ತದೆ. ಮ್ಯಾಕ್ಸ್​ವೆಲ್ ಖರೀದಿಯಲ್ಲೂ ಇಂಥದ್ದೇ ಲೆಕ್ಕಾಚಾರ ಆರ್​ಸಿಬಿಗೆ ಇತ್ತು. ಅದು ವರ್ಕೌಟ್ ಆಗಿದೆ. ಮ್ಯಾಕ್ಸ್​ವೆಲ್ ಈಗ ಆರ್​ಸಿಬಿ ಪಾಲಿಗೆ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿದ್ಧಾರೆ.

  ಮ್ಯಾಕ್ಸ್​ವೆಲ್ ಮ್ಯಾಜಿಕ್ ಸೀಕ್ರೆಟ್ ಇದು: ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ 11 ಪಂದ್ಯಗಳಿಂದ 108 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಈ ಆಲ್​ರೌಂಡರ್ ಈ ವರ್ಷದ ಆರ್​ಸಿಬಿ ಪರ 11 ಪಂದ್ಯಗಳಿಂದ ಬರೋಬ್ಬರಿ 407 ರನ್ ಗಳಿಸಿದ್ಧಾರೆ. ಇದಕ್ಕೆ ಕಾರಣ ಏನು? ಮ್ಯಾಕ್ಸ್​ವೆಲ್ ಅವರು ಆರ್​ಸಿಬಿಯಲ್ಲಿ ಫಾರ್ಮ್ ಕಂಡುಕೊಂಡರಾ? ಪಂಜಾಬ್​ನಲ್ಲಿ ಯಾಕೆ ಫಾರ್ಮ್ ಕಳೆದುಕೊಂಡರು? ಇವೆಲ್ಲಾ ಪ್ರಶ್ನೆಗೆ ಮ್ಯಾಕ್ಸ್​ವೆಲ್ ಅವರೇ ಉತ್ತರ ಕೊಟ್ಟಿದ್ದಾರೆ. ಆರ್​ಸಿಬಿಯಲ್ಲಿ ಅವರು ಒಳ್ಳೆಯ ಲಯದಲ್ಲಿರುವುದಕ್ಕೆ ಕಾರಣ ಅವರ ಬ್ಯಾಟಿಂಗ್ ಪೊಸಿಶನ್ ಅಂತೆ.
  POINTS TABLE:
  ಮ್ಯಾಕ್ಸ್​ವೆಲ್ ಮತ್ತು ನಂಬರ್ ಫೋರ್: ಆರ್​ಸಿಬಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ನಂಬರ್ ನಾಲ್ಕರ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಬರುತ್ತಾರೆ. ಅಂದರೆ ಟೂ ಡೌನ್​ನಲ್ಲಿ ಅವರು ಬರುತ್ತಾರೆ. ಇದು ಅವರ ಫೇವರಿಟ್ ಪೊಸಿಶನ್. ಆಸ್ಟ್ರೇಲಿಯಾ ಟೀಮ್​ನಲ್ಲೂ ಅವರು ಇದೇ ಪೊಸಿಶನ್​ನಲ್ಲಿ ಆಡುತ್ತಾರೆ. ಆ ಸ್ಥಾನದಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ಧಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮ್ಯಾಕ್ಸ್​ವೆಲ್​ಗೆ ಅದೇ ಸ್ಥಾನದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಹಿಂದಿನ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅವರು ಐದನೇ ಕ್ರಮಾಂಕದಲ್ಲಿ ಆಡಿದ್ದರು. ಅಲ್ಲಿ ಹೆಚ್ಚು ರನ್ ಗಳಿಸದೇ ಹೋಗಿದ್ದಕ್ಕೆ ಈ ಬದಲಾದ ಪೊಸಿಶನ್ ಕಾರಣ ಇರಬಹುದು ಎಂಬುದು ಮ್ಯಾಕ್ಸ್​ವೆಲ್ ಅವರ ಅನಿಸಿಕೆ.
  ORANGE CAP:
  ಒಳ್ಳೆಯ ಲಯದಲ್ಲಿ ಆರ್​ಸಿಬಿ ಆಟಗಾರರು:

  ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರು ಆರಂಭಿಕ ಬ್ಯಾಟರ್ಸ್ ಆಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆಂಧ್ರದ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಅವರು ನಂಬರ್ 3 ಪೊಸಿಶನ್​ನಲ್ಲಿ ಕ್ಲಿಕ್ ಆಗುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಮ್ಯಾಕ್ಸ್​ವೆಲ್ ಬರುತ್ತಾರೆ. ಬಳಿಕ ಎಬಿ ಡೀವಿಲಿಯರ್ಸ್, ಡ್ಯಾನ್ ಕ್ರಿಸ್ಟಿಯಾನ್ ಮೊದಲಾದವರು ಬರುತ್ತಾರೆ. ಡೇನಿಯಲ್ ಕ್ರಿಸ್ಟಿಯನ್ ಹೊರತುಪಡಿಸಿ ಉಳಿದ ಆರ್​ಸಿಬಿ ಬ್ಯಾಟರ್ಸ್ ಒಳ್ಳೆಯ ಲಯದಲ್ಲಿದ್ದಾರೆ. ಎಬಿ ಡೀವಿಲಿಯರ್ಸ್ ಹೆಚ್ಚು ರನ್ ಗಳಿಸದೇ ಹೋದರೂ ಅವರ ಬ್ಯಾಟಿಂಗ್ ತೃಪ್ತಿಕರವೆನಿಸಿದೆ. ಯಾವಾಗ ಬೇಕಾದರೂ ಅವರಿಂದ ದೊಡ್ಡ ಇನ್ನಿಂಗ್ಸ್ ಬರುವ ಸಾಧ್ಯತೆ ದಟ್ಟವಾಗಿದೆ.

  ಇದನ್ನೂ ಓದಿ: KKR vs SRH- ಶುಬ್ಮನ್ ಗಿಲ್ ಅಮೋಘ ಆಟ; ಎಸ್ಆರ್​ಎಚ್ ವಿರುದ್ಧ ಕೆಕೆಆರ್ ರೋಚಕ ಗೆಲುವು

  ಯುಎಇಯಲ್ಲಿ ಮೊದಲೆರಡು ಪಂದ್ಯ ಸೋತಿದ್ದ ಆರ್​ಸಿಬಿ ನಂತರ ಪುಟಿದೆದ್ದು ಹ್ಯಾಟ್ರಿಕ್ ಗೆಲುವು ಪಡೆದು ಈಗ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳನ್ನ ಆಡಬೇಕಿರುವ ಆರ್​ಸಿಬಿ ಈಗ ಟಾಪ್ 2 ಸ್ಥಾನಕ್ಕೆ ಲಗ್ಗೆ ಹಾಕುವ ಯೋಚನೆಯಲ್ಲಿದೆ. 16 ಅಂಕಗಳನ್ನ ಹೊಂದಿರುವ ಆರ್​ಸಿಬಿ ತನ್ನ ಮುಂದಿನ ಎರಡು ಪಂದ್ಯಗಳನ್ನ ದೊಡ್ಡ ಅಂತರದಿಂದ ಗೆದ್ದರೆ ಮೊದಲೆರಡು ಸ್ಥಾನ ಆಕ್ರಮಿಸಿಕೊಳ್ಳುವ ಅವಕಾಶ ಸಿಗಬಹುದು.
  Published by:Vijayasarthy SN
  First published: