IPL 2022- ಐಪಿಎಲ್ ಆಕ್ಷನ್​ನಲ್ಲಿ ಈ ಆಟಗಾರನಿಗೆ ಹೊಸ ದಾಖಲೆ ಬೆಲೆ: ಮಾಜಿ ಕ್ರಿಕೆಟಿಗ ಭವಿಷ್ಯ

Akash Chopra prediction- ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯಿಗೆ ಈ ಆಟಗಾರ ಬಂದರೆ ಸಿಕ್ಕಾಪಟ್ಟೆ ಬೇಡಿಕೆ ಇರಲಿದೆ. ಹೊಸ ದಾಖಲೆ ಬೆಲೆಗೆ ಅವರ ಖರೀದಿ ಆಗಬಹುದು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ಧಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕರ್ನಾಟಕದ ಹುಡುಗ ಹಾಗು ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಕೆ ಎಲ್ ರಾಹುಲ್ (KL Rahul) ಅವರಿಗೆ ಮುಂದಿನ ಐಪಿಎಲ್​ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರಲಿದೆ. ಅವರೇನಾದರೂ ಹರಾಜಿಗೆ ಒಳಪಟ್ಟರೆ ದಾಖಲೆ ಬೆಲೆಗೆ ಮಾರಾಟ ಆಗಲಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ (Former India Team Opener Akash Chopra) ಭವಿಷ್ಯ ನುಡಿದಿದ್ದಾರೆ. ಮುಂದಿನ ತಿಂಗಳು ಐಪಿಎಲ್ 2022 ಸೀಸನ್​ಗಾಗಿ ಹರಾಜು (IPL 2022 Auction) ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಒಬ್ಬ ಆಟಗಾರನನ್ನ ಖರೀದಿಸಲು ಗರಿಷ್ಠ ಮೊತ್ತವನ್ನು ನಿಗದಿಪಡಿಸದೇ ಇದ್ದಲ್ಲಿ ಕೆ ಎಲ್ ರಾಹುಲ್ ಅವರಿಗೆ ಕನಿಷ್ಠ 20 ಕೋಟಿ ಮೊತ್ತವಾದರೂ ಸಿಗಬಹುದು ಎಂಬುದು ಆಕಾಶ್ ಚೋಪ್ರಾ ಅಭಿಪ್ರಾಯ.

“ಕೆ ಎಲ್ ರಾಹುಲ್ ಹರಾಜಿಗೆ ಒಳಪಟ್ಟರೆ, ಮತ್ತು ಆಟಗಾರರ ಸಂಭಾವನೆಯಲ್ಲಿ ಯಾವುದೇ ಮಿತಿ ಹಾಕದೇ ಇದ್ದರೆ ಅವರು ಮುಂಬರುವ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಲಿದ್ದಾರೆ. 20 ಕೋಟಿ ರೂ ಗೂ ಹೆಚ್ಚು” ಎಂದು ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.


ಪಂಜಾಬ್ ಕಿಂಗ್ಸ್​ನಿಂದ ಕೆಎಲ್ ರಾಹುಲ್ ಬೇರ್ಪಡೆ ಸಾಧ್ಯತೆ:

ಟೀಮ್ ಇಂಡಿಯಾದ ಓಪನರ್ ಆಗಿರುವ ಕೆಎಲ್ ರಾಹುಲ್ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರೂ ಆಗಿದ್ದಾರೆ. ಐಪಿಎಲ್ 2021ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲು ವಿಫಲವಾಗಿತ್ತು. ಕೆಎಲ್ ರಾಹುಲ್ ಇಡೀ ಸೀಸನ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ತಂಡ ನಾಕೌಟ್ ತಲುಪಲಿಲ್ಲ. ಆಗಿನಿಂದಲೂ ಕೆ ಎಲ್ ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡದಿಂದ ಹೊರಗೆ ಹೋಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ವರದಿಗಳ ಪ್ರಕಾರ, ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಂದು ಹರಾಜು ಪ್ರಕ್ರಿಯೆಗೆ ಒಳಪಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಯಾವುದೇ ಐಪಿಎಲ್ ತಂಡ ಗರಿಷ್ಠ ನಾಲ್ವರು ಆಟಗಾರರನ್ನ ಮಾತ್ರ ರೀಟೈನ್ ಮಾಡಿಕೊಳ್ಳಬಹುದು. ಒಂದು ವೇಳೆ ತಂಡ ರೀಟೈನ್ ಮಾಡಿಕೊಂಡರೂ ಆಟಗಾರ ಇಚ್ಛಿಸಿದಲ್ಲಿ ಆತ ತಂಡದಿಂದ ಬೇರ್ಪಟ್ಟು ಹರಾಜಿಗೆ ಒಳಪಡುವ ಅವಕಾಶ ಇದೆ. ಹೀಗಾಗಿ, ಆಟಗಾರರನ್ನ ರೀಟೈನ್ ಮಾಡಿಕೊಳ್ಳಬೇಕಿದ್ದರೆ ಅದು ಪರಸ್ಪರ ಸಮ್ಮತಿ ಮೇರೆಗೆ ಮಾತ್ರ.

ಕೆಎಲ್ ರಾಹುಲ್​ಗೆ ಇದೆ ಸಿಕ್ಕಾಪಟ್ಟೆ ಡಿಮ್ಯಾಂಡ್:

ಮುಂಬರುವ ಐಪಿಎಲ್ ಸೀಸನ್​ನಲ್ಲಿ ಎರಡು ಹೊಸ ತಂಡಗಳು ಆಗಮಿಸಿವೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳನ್ನ ಸೇರಿ ಒಟ್ಟು ಹತ್ತು ತಂಡಗಳು ಸೆಣಸಲಿವೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ತಂಡಗಳು ಹೊಸ ನಾಯಕನನ್ನ ಅರಸುತ್ತಿವೆ. ಹರಾಜಿನಲ್ಲೇ ಹೊಸ ಕ್ಯಾಪ್ಟನ್ ಅನ್ನು ಕೊಂಡುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: IPL Auction- ಆಟಗಾರನೇ ಕಿಂಗ್, ಆತ ಒಪ್ಪಿದರೆ ಮಾತ್ರ ರೀಟೈನ್; ಇಬ್ಬರು ವಿದೇಶಿಗರಿಗಷ್ಟೇ ಅವಕಾಶ

ಕೆ ಎಲ್ ರಾಹುಲ್ ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಆಟಗಾರ. ಜೊತೆಗೆ ಕ್ಯಾಪ್ಟನ್ಸಿ ಮೆಟೀರಿಯಲ್ ಕೂಡ ಹೌದು. ಅವರ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲು ವಿಫಲವಾದರೂ ಸೀಮಿತ ಸಾಮರ್ಥ್ಯದ ಆಟಗಾರರನ್ನ ಅವರು ಕ್ಯಾಪ್ಟನ್ ಆಗಿ ನಿಭಾಯಿಸಿದ ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಟೀಮ್ ಇಂಡಿಯಾದ ಟಿ20 ಪಂದ್ಯಗಳಲ್ಲೂ ಕೆ ಎಲ್ ರಾಹುಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರಿಗೆ ಐಪಿಎಲ್ 2022 ಸೀಸನ್​ನಲ್ಲಿ ಒಳ್ಳೆಯ ಬೇಡಿಕೆ ಇದೆ. ಸಂಪೂರ್ಣವಾಗಿ ಹೊಸದಾಗಿ ತಂಡ ಕಟ್ಟಬೇಕಿರುವ ಅಹ್ಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳು ಕೆ ಎಲ್ ರಾಹುಲ್ ಅವರಿಗಾಗಿ ಮುಗಿಬೀಳುವ ಸಾಧ್ಯತೆಯಂತೂ ಇದೆ. ಈ ದೃಷ್ಟಿಯಲ್ಲಿ ಆಕಾಶ್ ಚೋಪ್ರಾ ನುಡಿದ ಭವಿಷ್ಯ ನಿಜವೇ ಆಗಬಹುದು.
Published by:Vijayasarthy SN
First published: