ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ನಡುವೆ ನಿನ್ನೆ ನಡೆದ ಪಂದ್ಯ ಬಹುತೇಕ ನಾಮಕಾವಸ್ತೆ ಯದ್ದಾಗಿದ್ದರೂ ಅನೇಕ ರೋಚಕತೆಯ ಹೂರಣವಂತೂ ಇತ್ತು. ಹಲವು ತಿರುವುಗಳು ಕೊನೆಯವರೆಗೂ ಕುತೂಹಲ ಕಾಯುವಂತೆ ಮಾಡಿದ್ದವು. ಗೆಲುವಿನ ಹೊಸ್ತಿಲಿಗೆ ಬಂದು ಇನ್ನೇನು ಆರ್‌ಸಿಬಿ ಎಡವುತ್ತದೆ ಎಂದುಕೊಳ್ಳುವಷ್ಟರಲ್ಲೇ ವೈಡ್ ಬಾಲ್ ಮತ್ತು ಕೆಎಸ್ ಭರತ್ ಅವರ ಕೊನೆಯ ಎಸೆತದ ಸಿಕ್ಸರ್ ಬೆಂಗಳೂರಿಗರಿಗೆ ರೋಚಕ ಗೆಲುವು ತಂದುಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು ಒಡ್ಡಿದ 165 ರನ್ ಸವಾಲನ್ನ ಬೆಂಗಳೂರು ಕೊನೆಯ ಎಸೆತದಲ್ಲಿ ಮುಟ್ಟಿತು. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ (KS Bharat) ನಿನ್ನೆಯ ಪಂದ್ಯದ ಹೀರೋ ಎನಿಸಿದರು. ಅವರು ಅಜೇಯ 78 ರನ್ ಗಳಿಸಿ ಬೆಂಗಳೂರು ತಂಡವನ್ನ ಅಪಾಯದಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ದಡ ಮುಟ್ಟಿಸಿದರು.
ಗ್ಲೆನ್ ಮ್ಯಾಕ್ಸ್ವೆಲ್ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದರು. ಭರತ್ 52 ಬಾಲ್ನಲ್ಲಿ ಅಜೇಯ 78 ರನ್ ಭಾರಿಸಿದರೆ, ಮ್ಯಾಕ್ಸ್ವೆಲ್ 33 ಬಾಲ್ನಲ್ಲಿ ಅಜೇಯ 51 ರನ್ ಗಳಿಸಿದರು. ಇಬ್ಬರೂ ನಾಲ್ಕನೇ ವಿಕೆಟ್ಗೆ 10.3 ಓವರ್ನಲ್ಲಿ 111 ರನ್ಗಳ ಮುರಿಯದ ಜೊತೆಯಾಟ ಆಡಿದರು. ಕೇವಲ 6 ರನ್ಗೆ 2 ವಿಕೆಟ್ ಬಿದ್ದಾಗ ಕ್ರೀಸ್ಗೆ ಬಂದ ಕೆಎಸ್ ಭರತ್ ನಿಜಕ್ಕೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಅವರು ಮತ್ತು ಎಬಿ ಡೀವಿಲಿಯರ್ಸ್ 3ನೇ ವಿಕೆಟ್ಗೆ 49 ರನ್ ಜೊತೆಯಾಟ ಆಡಿ ಚೇತರಿಕೆ ನೀಡಿದರು. ಎಬಿಡಿ ಔಟಾದ ಬಳಿಕ ಮ್ಯಾಕ್ಸ್ವೆಲ್ ಮತ್ತು ಭರತ್ ಕೊನೆಯವರೆಗೂ ಉಳಿದು ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.
ಪಂದ್ಯದ ಫಲಿತಾಂಶದ ಬೆನ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ತಂಡದ ಪರ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, 'ಇದು ಆವೃತ್ತಿಯ ಅತ್ಯುತ್ತಮ' ಆಟ ಎಂದು ಹೇಳುವ ಮೂಲಕ ಆರ್‌ಸಿಬಿ ಅಭಿಮಾನಿಗಳು ಈ ಗೆಲುವನ್ನು ಕೊಂಡಾಡುತ್ತಿದ್ದಾರೆ.
ಕೊನೇ ಎಸೆತಕ್ಕೆ 6 ರನ್ ಬೇಕಿದ್ದಾಗ ಶ್ರೀಕರ್ ಭರತ್ ಸಿಕ್ಸ್ ಬಾರಿಸುತ್ತಿದ್ದಂತೆ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದರು. ಕೊನೆಯ ಬಾಲ್ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯ ಕ್ರಿಕೆಟ್ ಪ್ರಿಯರಿಗೆ ರಸದೌತಣವಾಗಿತ್ತು.
ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಇಲ್ಲಿಗೆ ಮುಕ್ತಾಯವಾಯಿತು. #ಅತಿದೊಡ್ಡಕ್ರೀಡಾಂಗಣಕೂ ಎಂಬ ಹ್ಯಾಷ್ ಟ್ಯಾಗ್ ಅಡಿ 'ಇದೊಂದು ಅತ್ಯತ್ತಮ ಆಟ' ಎಂದು ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದರು.
'1ಬಾಲ್ಗೆ 6 ರನ್ ಗಳಿಸಬೇಕಾದ ರೋಚಕ ಘಟ್ಟ ಅದು. ಕೊನೆಯ ಬಾಲ್ ಗೆ ಶ್ರೀಕರ್ ಭರತ್ ಸಿಕ್ಸರ್ ಬಾರಿಸಿದರು. ಅಬ್ಬಾ ಇಂತಹ ಪಂದ್ಯ. ವಿಶ್ವದಲ್ಲಿಯೇ ಉತ್ತಮ ಆವೃತ್ತಿಯಾಗಿತ್ತು. ಹೀಗೆ ಐಪಿಎಲ್ ನ 100 ನೇ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿತು' ಎಂದು ವೀಹಿರ್ ಎನ್ನುವವರು ಕೂ ಮಾಡಿದ್ದಾರೆ.
'ಈ ಆವೃತ್ತಿಯ ಅತ್ಯುತ್ತಮ ಆಟ #RCB ಕಡೆಯಿಂದ! ಶ್ರೀಕರ್ ಭರತ್ ಆಟ ಅತ್ಯದ್ಭುತ! ಇ ಸಲ ಕಪ್ ನಮ್ದೇ' ಎನ್ನುತ್ತಿದ್ದಾರೆ ಮಂಜುನಾಥ್
'IPLದಲ್ಲಿ ಆರ್.ಸಿ.ಬಿ. ತಂಡಕ್ಕೆ 💯 ನೇ ಗೆಲುವು' ಎಂದು ಪ್ರೀತಿಯ ಅಲೆಮಾರಿ ಎನ್ನುವವರು ಸಂಭ್ರಮಿಸಿದ್ದಾರೆ.
ಒಟ್ಟಾರೆ ಆರ್‌ಸಿಬಿ ತಂಡದ ನಿನ್ನೆಯ ಆಟ ಮತ್ತು ಗೆಲುವು ತಂಡದಲ್ಲಿ ಮಾತ್ರವಲ್ಲದೆ ಅಭಿಮಾನಿಗಳಲ್ಲೂ ಸಾಕಷ್ಟು ಸಂತಸವನ್ನು ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಆದರೆ, ಈ ಗುಣಮಟ್ಟದ ಆಟ ಪ್ಲೇ ಆಫ್ನಲ್ಲೂ ಮುಂದುವರೆಯಲಿದೆಯೇ? ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ