ಏಪ್ರಿಲ್ 9 ರಂದು ಶುರುವಾಗಿದ್ದ ಐಪಿಎಲ್ಗೆ ಕೊರೋನಾ ಕಾರಣದಿಂದ ಮೇ 4 ರಂದು ತೆರೆ ಬಿದ್ದಿದೆ. ಇತ್ತ 29 ಪಂದ್ಯಗಳನ್ನು ಆಯೋಜಿಸಿರುವ ಬಿಸಿಸಿಐಗೆ ಉಳಿದ 31 ಪಂದ್ಯಗಳನ್ನು ಆಯೋಜಿಸುವುದು ಇದೀಗ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ದೇಶದಲ್ಲಿನ ಕೊರೋನಾ ಪರಿಸ್ಥಿತಿಯಿಂದಾಗಿ ಸದ್ಯಲ್ಲಂತು ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ. ಹೀಗಾಗಿ ಟೂರ್ನಿ ಆಯೋಜನೆಗಾಗಿ ಇರುವ ಅನ್ಯ ಮಾರ್ಗಗಳನ್ನು ಬಿಸಿಸಿಐ ಎದುರು ನೋಡುತ್ತಿದೆ.
ಸದ್ಯ ಬಿಸಿಸಿಐ ಮುಂದೆ ಮೂರು ಆಯ್ಕೆಗಳಿದ್ದು, ಅದರಂತೆ ಮೊದಲ ಆಯ್ಕೆ ಯುಎಇ. ಇದಾಗ್ಯೂ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಅವಕಾಶ ದೊರೆತರೆ ಟೂರ್ನಿಯ ಉಳಿದ ಪಂದ್ಯಗಳನ್ನು ನಡೆಸಲು ಚಿಂತಿಸಲಾಗಿದೆ. ಏಕೆಂದರೆ ಈ ಮೂರು ದೇಶಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಅದರಲ್ಲೂ ಯುಎಇನಲ್ಲಿ ಬಿಸಿಸಿಐ ಕಳೆದ ವರ್ಷ ಟೂರ್ನಿಯನ್ನು ಆಯೋಜಿಸಿದ್ದು, ಹೀಗಾಗಿ ಉಳಿದ ಪಂದ್ಯಗಳನ್ನು ಅಲ್ಲೇ ನಡೆಸುವ ಪ್ಲ್ಯಾನ್ನಲ್ಲಿದೆ.
ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕೌಂಟಿ ಕ್ರಿಕೆಟ್ ಕ್ಲಬ್ಗಳು ಇದೀಗ ಐಪಿಎಲ್ ಟೂರ್ನಿಯ ಆತಿಥ್ಯವಹಿಸಲು ಮುಂದೆ ಬಂದಿರುವುದು ವಿಶೇಷ. ಕೊರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್ನಲ್ಲಿ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಪತ್ರವನ್ನು ಬರೆದಿವೆ. ಈ ಪತ್ರದಲ್ಲಿ ಐಪಿಎಲ್ ಆಯೋಜನೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ಈ ಕ್ಲಬ್ಗಳು ತಿಳಿಸಿದೆ.
ಟೂರ್ನಿಯ ಉಳಿದ ಪಂದ್ಯಗಳನ್ನು 2 ವಾರಗಳ ಒಳಗೆ ಮುಗಿಸಬಹುದಾಗಿದ್ದು, ಹೀಗಾಗಿ ಬಿಸಿಸಿಐಗೆ ಯುಎಇಗಿಂತ ಇಂಗ್ಲೆಂಡ್ ಉತ್ತಮ ಆಯ್ಕೆ. ಏಕೆಂದರೆ ಭಾರತದಿಂದ ಟಿ20 ವಿಶ್ವಕಪ್ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆಯಿದ್ದು, ಅಲ್ಲೇ ಐಪಿಎಲ್ ಆಯೋಜಿಸಿದರೆ ಟಿ20 ವಿಶ್ವಕಪ್ ಟೂರ್ನಿಯ ಅಸಲಿ ಮಜಾ ಕಳೆದುಕೊಳ್ಳಲಿದೆ. ಹೀಗಾಗಿ ಇಂಗ್ಲೆಂಡ್ನಲ್ಲಿ ಐಪಿಎಲ್ ಆಯೋಜಿಸಿ, ಯುಎಇನಲ್ಲಿ ಟಿ20 ವಿಶ್ವಕಪ್ ನಡೆಸುವುದು ಸೂಕ್ತ ಎಂದು ಕೌಂಟಿ ಕ್ಲಬ್ಗಳು ಪತ್ರದ ಮೂಲಕ ಅಭಿಪ್ರಾಯಪಟ್ಟಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ