ಅಬು ಧಾಬಿ (ಸೆ. 19): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದಿನಿಂದ ಶುರುವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಬಾರಿಯ ಫೈನಲಿಸ್ಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ. ಮಹಾಮಾರಿ ಕೊರೋನಾ ವೈರಸ್ ಕಾರಣದಿಂದ ಯುಎಇನಲ್ಲಿ ಇಡೀ ಟೂರ್ನಿ ನಡೆಯುತ್ತಿದೆ. ಇಂದಿನ ಮೊದಲ ಪಂದ್ಯ ಅಬು ಧಾಬಿಯ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ಜರುಗಲಿದೆ. ಸಂಜೆ 7:30ಕ್ಕೆ ಈ ಮಹಾ ಟೂರ್ನಿ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಕಳೆದ ಮಾರ್ಚ್ 29 ರಿಂದಲೇ ಭಾರತದಲ್ಲಿ ಐಪಿಎಲ್ ನಡೆಯಬೇಕಿತ್ತು. ಆದರೆ, ಕೊರೊನಾ ವೈರಸ್ ವ್ಯಾಪಿಸಿದ್ದರಿಂದ ಎರಡು ಬಾರಿ ಐಪಿಎಲ್ ಅನ್ನು ಮುಂದೂಡಲಾಗಿತ್ತು. ಸದ್ಯ ಸುಮಾರು ಅರ್ಧ ವರ್ಷ ತಡವಾಗಿ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್ ಆಯೋಜಿಸಲಾಗಿದೆ.
RCB 2020: ಅಭಿಮಾನಿಗಳ ಆಸೆ ಈಡೇರಿಸುತ್ತಾ ಆರ್ಸಿಬಿ: ಕೊಹ್ಲಿ ಸೈನ್ಯದ ಮೇಲಿದೆ ಭಾರೀ ನಿರೀಕ್ಷೆ
ಪ್ರತಿವರ್ಷ ವೈಭವ ಪೂರಿತ ಕಾರ್ಯಕ್ರಮಗಳ ಮೂಲಕ ಐಪಿಎಲ್ ಟೂರ್ನಿಗೆ ಚಾಲನೆ ಸಿಗುತ್ತಿತ್ತು. ಆದರೆ, ಈ ಬಾರಿ ಪ್ರೇಕಕ್ಷರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆರಂಭದ ಕೆಲವು ಪಂದ್ಯಗಳು ನಡೆಯಲಿದೆ. ಕೋವಿಡ್ ಸಾಂಕ್ರಾಮಿಕ ವಿಶ್ವವನ್ನು ನಡುಗಿಸುತ್ತಿರುವುದಿರಂದ ಮುನ್ನಚ್ಚೆರಿಕೆ ಕ್ರಮವಾಗಿ ಹಲವಾರು ಪ್ರೋಟೋಕಾಲ್ಗಳನ್ನು ರಚಿಸಿಕೊಂಡು ಬಯೋ ಸೆಕ್ಯೂರ್ ವಾತಾವರಣದಲ್ಲಿ ಬಿಸಿಸಿಐ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಟೂರ್ನಿಯ ವೇಳೆ ಕೋವಿಡ್ ಟೆಸ್ಟ್ಗಾಗಿಯೇ ಬರೋಬ್ಬರಿ 10 ಕೋಟಿ ರೂ.ಗಳನ್ನು ಬಿಸಿಸಿಐ ವ್ಯಯಮಾಡುತ್ತಿದೆ.
ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ ಎಂಬ ಖ್ಯಾತಿಗೆ ಮುಂಬೈ ಇಂಡಿಯನ್ಸ್ ಭಾಜನವಾಗಿದೆ. ಮುಂಬೈ ಫ್ರಾಂಚೈಸಿ ನಾಲ್ಕು ಐಪಿಎಲ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ. ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ.
ಅಬು ಧಾಬಿಯ ಶೇಖ್ ಝಹೇದ್ ಪಿಚ್ ನಿಧಾನಗತಿಯಿಂದ ಕೂಡಿದ್ದು, ಸ್ನೇಹಿ ವಿಕೆಟ್ ಆಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಕಾದಾಟ ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.
ಇನ್ನೂ
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಒಟ್ಟು 28 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 17 ಬಾರಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.
IPL 2020: ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ ಬ್ರೆಟ್ ಲೀ
ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನ ಈ ಟಾಪ್ ತಂಡಗಳಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಈಗ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ. ಹೀಗಾಗಿ ಈ ಆರಂಭಿಕ ಪಂದ್ಯವನ್ನು ನೋಡಲು ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸಂಭಾವ್ಯ ಇಲೆವೆನ್:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್(ವಿ.ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಥಾನ್ ಕೌಲ್ಟರ್ನೈಲ್, ರಾಹುಲ್ ಚಹರ್, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಮುರಳಿ ವಿಜಯ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್) ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್. ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ