ದೇವದತ್ ಪಡಿಕ್ಕಲ್ ಮಲಯಾಳಿ ಎಂದು ಕೊಚ್ಚಿಕೊಂಡ ಸಂಸದನಿಗೆ ದೊಡ್ಡ ಗಣೇಶ್ ಕೊಟ್ಟ ಉತ್ತರ ಇದು

ಈ ಬಾರಿಯ ಐಪಿಎಲ್​ನಲ್ಲಿ ಶತಕ ಭಾರಿಸಿದ ಇಬ್ಬರೂ ಆಟಗಾರರು ಮಲಯಾಳಿಗಳು ಎಂದು ಹೇಳಿ ಟ್ವೀಟ್ ಮಾಡಿದ್ದ ಸಂಸದ ಶಶಿ ತರೂರ್ ಅವರಿಗೆ ದೊಡ್ಡ ಗಣೇಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Devdutt Padikkal

Devdutt Padikkal

  • Share this:
ಬೆಂಗಳೂರು: ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿಯ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಗಳಿಸಿದರು. ಇದು ಅವರ ಚೊಚ್ಚಲ ಶತಕ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಬಂದ ಎರಡನೇ ಶತಕ ಅದು. ಸಂಜು ಸ್ಯಾಮ್ಸನ್ ಕೂಡ ಶತಕ ಭಾರಿಸಿದ್ಧಾರೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ವರ್ಷದ ಐಪಿಎಲ್​ನಲ್ಲಿ ಶತಕ ಭಾರಿಸಿದ ಇಬ್ಬರೂ ಬ್ಯಾಟ್ಸ್​ಮನ್​ಗಳು ಮಲಯಾಳಿಗಳು ಎಂದು ಹರ್ಷೋದ್ಘಾರ ಮಾಡಿದ್ದಾರೆ. ಆದರೆ, ಇದಕ್ಕೆ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ದೊಡ್ಡ ಗಣೇಶ್ ಅವರು ಟ್ವೀಟ್ ಮೂಲಕವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ಧಾರೆ.

“ಬಹಳ ಕಾಲದಿಂದ ಕೇರಳ ರಾಜ್ಯವನ್ನು ಕ್ರಿಕೆಟ್ ಲೋಕದ ಕೂಸು ಎಂದು ಪರಿಗಣಿಸಲಾಗುತ್ತಿತ್ತು. ಈಗ ಈ ಬಾರಿಯ ಐಪಿಎಲ್​ನಲ್ಲಿ ಬಂದ ಎರಡೂ ಶತಕಗಳನ್ನ ಮಲಯಾಳಿಗಳೇ ಹೊಡೆದಿರುವುದು ಸೋಜಿಗದ ಸಂಗತಿ. ಈ ಬಾರಿಯ ಐಪಿಎಲ್​ನಲ್ಲಿ ಶತಕ ಭಾರಿಸಿದ ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ ಪಡಿಕ್ಕಲ್​ಗೆ ಅಭಿನಂದನೆಗಳು” ಎಂದು ತಿರುವನಂತಪುರಂ ಕ್ಷೇತ್ರದ ಸಂಸದರಾದ ಶಶಿ ತರೂರ್ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದರು.


ಇದಕ್ಕೆ ದೊಡ್ಡ ಗಣೇಶ್ ಕೊಟ್ಟ ಉತ್ತರ ಇದು: “2016ರಲ್ಲಿ ಕರುಣ್ ನಾಯರ್ ತ್ರಿಶತಕ ಭಾರಿಸಿದಾಗ ಬಹಳ ಜನರು ಇವ ನಮ್ಮವ ಎಂದು ಹೇಳಿಕೊಂಡಿದ್ದರು. ಅದಾದ ಬಳಿಕ ಆತ ಸ್ಥಾನ ಕಳೆದುಕೊಂಡಾಗ ಇದೇ ಜನರು ಆತನನ್ನು ತಿರಸ್ಕರಿಸಿದರು. ಈಗ ದೇವದತ್ ವಿಚಾರದಲ್ಲಿ ಅದೇ ಆಗುತ್ತಿದೆ. ಅವರು ಮಲಯಾಳಿಗಳೆಂದು ನಾನು ಒಪ್ಪುತ್ತೇನೆ. ಆದರೆ, ಕರುಣ್ ಮತ್ತು ದೇವದತ್ ಅವರುಗಳು ಕ್ರಿಕೆಟಿಗರಾಗಿ ಬೆಳವಣಿಗೆ ಸಾಧಿಸುವುದರ ಹಿಂದೆ ಕೇರಳದ ಯಾವ ಪಾತ್ರವೂ ಇಲ್ಲ. ಅವರು ಕರ್ನಾಟಕದ ಹುಡುಗರು” ಎಂದು ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.


ಕೆಎಲ್ ರಾಹುಲ್ ಅವರ ಹೆಸರಿನಲ್ಲಿ ಕಣ್ಣೂರು ಎಂಬುದು ಸೇರಿರುವುದರಿಂದ ಈ ಹಿಂದೆ ಕೆಲವರು ಆತ ಕೇರಳದ ಕಣ್ಣೂರಿನವನು, ಮಲಯಾಳಿ ಎಂದು ಹೇಳಿಕೊಂಡಿದ್ದುಂಟು. ಆದರೆ, ಹಾಸನ ಬಳಿಯ ಕಣ್ಣೂರಿನವರು ಕೆಎಲ್ ರಾಹುಲ್. ಈ ವಿಚಾರವನ್ನು ಒಬ್ಬ ಟ್ವೀಟಿಗ ಪ್ರಸ್ತಾಪಿಸಿ ಕುಟುಕಿದ್ದಾರೆ.

ಇದನ್ನೂ ಓದಿ: RCB vs RR – ಬೆಂಗಳೂರು-ರಾಜಸ್ಥಾನ ಪಂದ್ಯದಲ್ಲಿ ಪಡಿಕ್ಕಲ್ ಶತಕ ಸೇರಿ ಹಲವು ದಾಖಲೆಗಳು

ಮತ್ತೊಬ್ಬ ಟ್ವೀಟಿಗರು ಆಲ್ಬರ್ಟ್ ಐನ್​ಸ್ಟೀನ್ ಹೇಳಿಕೆಯೊಂದನ್ನು ಉದಾಹರಣೆಯಾಗಿ ನೀಡಿದ್ಧಾರೆ. “ನನ್ನ ಸಾಪೇಕ್ಷ ಸಿದ್ಧಾಂತ (Theory of Relativity) ಯಶಸ್ವಿಯಾಗಿ ರೂಪಿತವಾದರೆ ಜರ್ಮನಿ ದೇಶ ನನ್ನನ್ನ ಜರ್ಮನ್ ಎಂದು ಕೊಚ್ಚಿಕೊಳ್ಳುತ್ತದೆ. ಫ್ರಾನ್ಸ್ ದೇಶ ನನ್ನನ್ನು ಜಾಗತಿಕ ಪ್ರಜೆ ಎಂದು ಘೋಷಿಸುತ್ತದೆ. ಅದೇ ನನ್ನ ಥಿಯರಿ ಸುಳ್ಳೆಂದು ಸಾಬೀತಾದರೆ, ಫ್ರಾನ್ಸ್ ದೇಶವು ನನ್ನನ್ನು ಜರ್ಮನ್ ಎಂದು ಹೇಳುತ್ತದೆ. ಜರ್ಮಿನಿಯು ನನ್ನನ್ನು ಯಹೂದಿ (Jew) ಎಂದು ಘೋಷಿಸುತ್ತದೆ ಅಂತ ಅಲ್ಬರ್ಟ್ ಐನ್ಸ್​ಟೀನ್ ಹೇಳಿದ್ದು ನನಗೆ ನೆನಪಾಗುತ್ತಿದೆ” ಎಂದು ಡಾ. ಅಭಿಷೇಕ್ ರತಕಲ್ ಎಂಬುವವರು ಪ್ರತಿಕ್ರಿಯಿಸಿದ್ಧಾರೆ.

ಕರ್ನಾಟಕದ ಈಗಿನ ತಂಡದಲ್ಲಿ ಕನ್ನಡೇತರ ಭಾಷಿಕರು ಬಹಳ ಇದ್ದಾರೆ. ಇದು ಕರ್ನಾಟಕದ ಸಂಸ್ಕೃತಿಯೂ ಹೌದು. ಮಾಸ್ತಿಯಂಥ ಅನೇಕ ಅನ್ಯಭಾಷಿಕರು ಕನ್ನಡ ಭಾಷೆಯನ್ನ ಶ್ರೀಮಂತಗೊಳಿಸಿದಂತೆ, ಅನ್ಯಭಾಷಿಕ ಕ್ರಿಕೆಟಿಗರು ಕರ್ನಾಟಕದ ಕ್ರಿಕೆಟ್ ಲೋಕದ ಕೀರ್ತಿ ಹೆಚ್ಚಿಸುತ್ತಿರುವುದು ಸುಳ್ಳಲ್ಲ. ಕರುಣ್ ನಾಯರ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಂಕ್ ಅಗರ್ವಾಲ್, ರೋನಿತ್ ಮೋರೆ ಮೊದಲಾದವರು ಕರ್ನಾಟಕ ಕ್ರಿಕೆಟ್​ಗೆ ಮತ್ತೆ ವೈಭವಯುತ ಕಾಲ ಮರಳಿಸಲು ಕೊಡುಗೆ ನೀಡುತ್ತಿದ್ಧಾರೆ. ಇವರು ಅನ್ಯಭಾಷಿಕರಾದರೂ ಕರ್ನಾಟಕದವರೇ, ಕನ್ನಡಿಗರೇ ಎಂದು ಜನರು ಸ್ವೀಕರಿಸಿದ್ದಾರೆ.
Published by:Vijayasarthy SN
First published: