news18-kannada Updated:April 5, 2021, 10:05 PM IST
Devdutt Padikkal
ಕೊನೆಗೂ ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಅವರ ಕೋವಿಡ್ ಟೆಸ್ಟ್ ರಿಪೋರ್ಟ್ ಹೊರಬಂದಿದೆ. ಈ ರಿಪೋರ್ಟ್ನಲ್ಲಿ ಕೊರೋನಾ ನೆಗೆಟಿವ್ ಬಂದಿದ್ದು, ಹೀಗಾಗಿ ಪಡಿಕ್ಕಲ್ ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 22 ರಂದು ದೇವದತ್ ಪಡಿಕ್ಕಲ್ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ತಂಡದ ಅಭ್ಯಾಸದಿಂದ ಹೊರಗುಳಿದಿದ್ದರು. ಅಲ್ಲದೆ ಬೆಂಗಳೂರಿನ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದರು.
ಹೀಗಾಗಿ ಕಳೆದ ಹತ್ತು ದಿನಗಳ ಕಾಲ ಆರ್ಸಿಬಿ ವೈದ್ಯರ ತಂಡ ಯುವ ಆಟಗಾರರ ಮೇಲೆ ತೀವ್ರ ನಿಗಾಯಿಟ್ಟಿದ್ದರು. ಇದೀಗ ಮೊದಲ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದಿರುವುದು ತುಸು ಸಮಾಧಾನಕರ. ಇನ್ನು ಎರಡು ಟೆಸ್ಟ್ಗಳು ಬಾಕಿಯಿದ್ದು, ಇದರಲ್ಲಿ ಒಂದು ನೆಗೆಟಿವ್ ಬಂದರೂ ಪಡಿಕ್ಕಲ್ ಆರ್ಸಿಬಿ ತಂಡವನ್ನು ಕೂಡಿಕೊಳ್ಳಬಹುದಾಗಿದೆ.
ಕೆಲ ಮೂಲಗಳ ಪ್ರಕಾರ ದೇವದತ್ ಪಡಿಕ್ಕಲ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇನ್ನೆರಡು ಟೆಸ್ಟ್ನಲ್ಲೂ ನೆಗೆಟಿವ್ ರಿಸಲ್ಟ್ ಬರುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಏಪ್ರಿಲ್ 7ಕ್ಕೆ ಚೆನ್ನೈಗೆ ವಿಮಾನ ಹತ್ತಲಿದ್ದಾರೆ ಎನ್ನಲಾಗಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಏಕೆಂದರೆ ಆಟಗಾರರು ತಂಡದ ಬಯೋಬಬಲ್ ಪ್ರವೇಶಿಸುವ ಮುನ್ನ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಇತ್ತ ಬೆಂಗಳೂರಿನಿಂದ ಚೆನ್ನೈಗೆ ಬಂದರೂ ಪಡಿಕ್ಕಲ್ ಒಂದು ವಾರ ಕ್ವಾರಂಟೈನ್ನಲ್ಲಿ ಇರಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೂ, 2ನೇ ಪಂದ್ಯದ ವೇಳೆ ದೇವದತ್ ಪಡಿಕ್ಕಲ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published by:
zahir
First published:
April 5, 2021, 10:04 PM IST