IPLನ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಶ್ರೇಯಸ್ ಪಡೆ ಒಂದೆಡೆಯಾದರೆ, ಬಲಿಷ್ಠರು ಎನಿಸಿಕೊಂಡರು ಮೊದಲ ಎರಡೂ ಪಂದ್ಯಗಳನ್ನು ಸೋತಿರುವ ಡೇವಿಡ್ ವಾರ್ನರ್ ಬಳಗ ಮತ್ತೊಂದೆಡೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅದೃಷ್ಟದ ಗೆಲುವಿನೊಂದಿಗೆ ಜಯದ ಖಾತೆ ತೆರೆದಿದ್ದ ಡೆಲ್ಲಿ, ಎರಡನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ಗೆ ಸೋಲಿನ ರುಚಿ ತನ್ನ ಸಾಮರ್ಥ್ಯ ಸಾರಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ಆರ್ಸಿಬಿ ವಿರುದ್ಧ 10 ರನ್ಗಳ ಸೋಲು, ಕೆಕೆಆರ್ ವಿರುದ್ಧ ಏಳು ವಿಕೆಟ್ಗಳ ಪರಾಜಯದೊಂದಿಗೆ ಅಂಕಪಟ್ಟಿಯಲ್ಲಿ ಪಾತಾಳಕ್ಕಿದಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳಲು ಎಸ್ಆರ್ಹೆಚ್ ಸಕಲ ಅಸ್ತ್ರಗಳನ್ನು ಪ್ರಯೋಗಿಸಬೇಕಿದೆ.
ಪ್ರಸ್ತುತ ತಂಡಗಳ ಪ್ರದರ್ಶನವನ್ನು ಗಮನಿಸಿದ್ರೆ ಉಭಯ ತಂಡಗಳು ಸಮಬಲದಿಂದ ಕೂಡಿದೆ ಎಂದೇ ಹೇಳಬಹುದು. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಜಾನಿ ಬೈರ್ಸ್ಟೋವ್, ಮನೀಷ್ ಪಾಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಇನ್ನು ಆರಂಭಿಕರಾಗಿ ಡೇವಿಡ್ ವಾರ್ನರ್ ಯಾವುದೇ ಸಂದರ್ಭದಲ್ಲೂ ಸಿಡಿಯಬಹುದು. ಆದರೆ ಮಧ್ಯಮ ಕ್ರಮಾಂಕದ ಚಿಂತೆ ಎಸ್ಆರ್ಹೆಚ್ ತಂಡವನ್ನು ಕಾಡುತ್ತಿದೆ. ಇದರ ಹೊರತಾಗಿ ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡರೆ ಇಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದು.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೊದಲ ಪಂದ್ಯದಲ್ಲಿ ಎಡವಿದ ಆರಂಭಿಕರು ಚೆನ್ನೈ ವಿರುದ್ಧ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದಾರೆ. ಪೃಥ್ವಿ ಶಾ ಅರ್ಧಶತಕ ಬಾರಿಸಿ ಫಾರ್ಮ್ಗೆ ಮರಳಿದ್ರೆ, ಶಿಖರ್ ಧವನ್ ಹಾಗೂ ರಿಷಭ್ ಪಂತ್ ಉತ್ತಮ ಮೊತ್ತ ಕಲೆಹಾಕಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ ನಾಯಕ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಹೀಗಾಗಿ ಡೆಲ್ಲಿ ಬ್ಯಾಟಿಂಗ್ ಉತ್ತಮವಾಗಿದೆ ಎಂದೇ ಹೇಳಬಹುದು. ಇದರ ಹೊರತಾಗಿ ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡ ಅವರ ಬಿರುಗಾಳಿ ಚೆಂಡಿನ ಮುಂದೆ ಸಿಎಸ್ಕೆ ಬ್ಯಾಟ್ಸ್ಮನ್ಗಳೇ ಹೈರಾಣರಾಗಿದ್ದರು. ಇವರಿಗೆ ಅನ್ರಿಚ್ ನಾರ್ಟ್ಜೆ ಹಾಗೂ ಅಕ್ಷರ್ ಪಟೇಲ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಹಾಗೆಯೇ ಇಂದಿನ ಪಂದ್ಯದಲ್ಲಿ ಗಾಯಗೊಂಡಿರುವ ಸ್ಪಿನ್ ಮೋಡಿಗಾರ ಆರ್. ಅಶ್ವಿನ್ ತಂಡಕ್ಕೆ ಮರಳಿದ್ರೆ ಸನ್ರೈಸರ್ಸ್ ಪಾಲಿಗೆ ಡೆಲ್ಲಿ ಡೇಂಜರಸ್ ಆಗಿ ಪರಿಣಮಿಸಲಿದೆ.
ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದ್ರೆ ಎರಡು ತಂಡಗಳು 15 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ವಿರುದ್ಧ ಹೈದರಾಬಾದ್ 9 ಬಾರಿ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿರುವುದು 6 ಬಾರಿ ಮಾತ್ರ. ಇನ್ನು ಕೊನೆಯ ಐದು ಪಂದ್ಯಗಳ ಮುಖಾಮುಖಿಯಲ್ಲೂ ಸನ್ರೈಸರ್ಸ್ ಹೈದರಾಬಾದ್ 3 ರಲ್ಲಿ ಗೆಲುವು ಸಾಧಿಸಿತ್ತು. ಅದರಲ್ಲೂ ಕಳೆದ ಸೀಸನ್ನಲ್ಲಿ ಆಡಿದ್ದ 2 ಪಂದ್ಯಗಳಲ್ಲೂ ಡೆಲ್ಲಿ ಹೈದರಾಬಾದ್ ವಿರುದ್ಧ ಸೋಲುಂಡಿತ್ತು.
ಇನ್ನು 2014 ರ ಐಪಿಎಲ್ನಲ್ಲಿ ಯುಎಇನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಸನ್ರೈಸರ್ಸ್ ನೀಡಿದ್ದ 184 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 180 ರನ್ಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಅಂದರೆ ಈ ರೋಚಕ ಹೋರಾಟದಲ್ಲಿ ವಾರ್ನರ್ ಪಡೆ 4 ರನ್ಗಳಿಂದ ಗೆಲುವು ದಾಖಲಿಸಿತ್ತು. ಆದರೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಗಮನ ಸೆಳೆಯಿತು. ಹೀಗಾಗಿ ಇಂದಿನ ಪಂದ್ಯದಲ್ಲೂ ಈ ಹಿಂದಿನಂತೆ ಭರ್ಜರಿ ರೋಚಕ ಹಣಾಹಣಿಯಂತು ಕಂಡು ಬರಲಿದೆ.
ಹಾಗೆಯೇ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ತೋರಿದ್ದಾರೆ. ಕ್ಯಾಪಿಟಲ್ಸ್ ವಿರುದ್ಧ 337 ರನ್ ಕಲೆಹಾಕಿರುವ ಸನ್ರೈಸರ್ಸ್ ನಾಯಕನೇ ಇಂದಿನ ಪಂದ್ಯದಲ್ಲೂ ಬ್ಯಾಟಿಂಗ್ ಶಕ್ತಿ ಎನ್ನಬಹುದು. ಹಾಗೆಯೇ ಡೆಲ್ಲಿ ತಂಡದ ಆರಂಭಿಕ ಶಿಖರ್ ಧವನ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 393 ರನ್ ಕಲೆಹಾಕಿದ್ದಾರೆ. ಹೀಗಾಗಿ ಇಂದು ಕೂಡ ಗಬ್ಬರ್ ಕಡೆಯಿಂದ ಉತ್ತಮ ಆಟವನ್ನು ನಿರೀಕ್ಷಿಸಬಹುದು.
ಇನ್ನು ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಪರ ಯಶಸ್ವಿಯಾಗಿದ್ದು ಕ್ರಿಸ್ ಮೋರಿಸ್. ಆದರೆ ಹೈದರಾಬಾದ್ ತಂಡದ 8 ವಿಕೆಟ್ಗಳನ್ನು ಪಡೆದಿರುವ ಮೋರಿಸ್ ಸದ್ಯ ಆರ್ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಇದು ಗಣನೆಗೆ ಬರುವುದಿಲ್ಲ. ಆದರೆ ಅತ್ತ ಭುವನೇಶ್ವರ್ ಕುಮಾರ್ ಡೆಲ್ಲಿ ವಿರುದ್ಧ 11 ವಿಕೆಟ್ ಉರುಳಿಸಿ ಯಶಸ್ವಿ ಎನಿಸಿಕೊಂಡಿದ್ದಾರೆ. ಹೀಗಾಗಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ ಸಕಲ ತಯಾರಿಯೊಂದಿಗೆ ಭುವಿಯನ್ನು ಎದುರಿಸಲಿದೆ.
ಒಟ್ಟಾರೆ ನೋಡುವುದಾದರೆ ಉಭಯ ತಂಡಗಳು ಸಮಬಲದಿಂದ ಕೂಡಿದ್ದು, ಆದರೆ ಎರಡು ಸತತ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದೆ. ಹಾಗೆಯೇ ಸತತ ಸೋಲಿನಿಂದ ಸನ್ರೈಸರ್ಸ್ ಕಂಗೆಟ್ಟು ನಿಂತಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವು ದಾಖಲಿಸಬೇಕಾದ ಒತ್ತಡದಲ್ಲಿದ್ದಾರೆ ಹೈದರಾಬಾದ್ ತಂಡದ ಆಟಗಾರರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ