ಅಬುಧಾಬಿ, ಸೆ. 25: ನಾಕೌಟ್ ತಲುಪುವ ಸಾಧ್ಯತೆ ಜೀವಂತವಾಗಿರಿಸಿಕೊಳ್ಳುವ ರಾಜಸ್ಥಾನ್ ರಾಯಲ್ಸ್ ಆಸೆಗೆ ಇಂದು ತಣ್ಣೀರು ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸುಲಭವಾಗಿ ಸೋತಿದೆ. ಗೆಲ್ಲಲು 155 ರನ್ಗಳ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ಕೇವಲ 120 ರನ್ಗೆ ಅಂತ್ಯಗೊಂಡು 34 ರನ್ಗಳಿಂದ ಸೋತಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮತ್ತೊಮ್ಮೆ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ರಾಜಸ್ಥಾನ್ ರಾಯಲ್ಸ್ ತಂಡ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಮುಂದುವರಿದಿದೆ.
ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬಿಗ್ ಹಿಟ್ಟರ್ಗಳು ಸಿಡಿಯಲೇ ಇಲ್ಲ. ನಾಯಕ ಸಂಜು ಸ್ಯಾಮ್ಸನ್ ಅವರೊಬ್ಬರೇ ಏಕಾಂಗಿ ಹೋರಾಟ ತೋರಿದರು. ಅವರಿಗೆ ಸೂಕ್ತ ಬೆಂಬಲ ಸಿಗದೇ ರಾಯಲ್ಸ್ ಗೆಲುವು ಗಗನ ಕುಸುಮವಾಗಿಯೇ ಉಳಿಯಿತು. ರಾಯಲ್ಸ್ನ ಬ್ಯಾಟಿಂಗ್ ಟ್ರಂಪ್ ಕಾರ್ಡ್ ಎನಿಸಿದ್ದ ಲಿಯಾಮ್ ಲಿವಿಂಗ್ ಸ್ಟೋನ್ ವಿಫಲರಾಗಿದ್ದ ದೊಡ್ಡ ಹೊಡೆತ ಕೊಟ್ಟಿತ್ತು. ಮತ್ತೊಬ್ಬ ಬಿಗ್ ಹಿಟ್ಟರ್ ಡೇವಿಡ್ ಮಿಲರ್ ಕೂಡ ವಿಫಲರಾದರು. ಸಂಜು ಸ್ಯಾಮ್ಸನ್ ಅವರೊಬ್ಬರೇ ಏಕಾಂಗಿ ಹೋರಾಟ ತೋರಿದರು. ಅಜೇಯ 70 ರನ್ ಗಳಿಸಿದ ನಾಯಕನಿಗೆ ಸೂಕ್ತ ಜೊತೆಗಾರ ಸಿಗಲಿಲ್ಲ. ಮಹಿಪಾಲ್ ಲಮ್ರೋರ್ ಅವರ ಜೊತೆ ಸ್ಯಾಮ್ಸನ್ 4ನೇ ವಿಕೆಟ್ಗೆ 31 ರನ್ ಜೊತೆಯಾಟ ಆಡಿದರು. ಹಾಗೆಯೇ, 6ನೇ ವಿಕೆಟ್ಗೆ ಸ್ಯಾಮ್ಸನ್ ಮತ್ತು ರಾಹುಲ್ ತೆವಾಟಿಯಾ 44 ರನ್ ಜೊತೆಯಾಟ ಆಡಿದರು. ಇವೆರಡು ಬಟ್ಟರೆ ರಾಜಸ್ಥಾನ್ ಇನ್ನಿಂಗ್ಸಲ್ಲಿ ಒಳ್ಳೆಯ ಜೊತೆಯಾಟ ಬರಲಿಲ್ಲ. ಸ್ಯಾಮ್ಸನ್ಗೆ ಸೂಕ್ತ ಬೆಂಬಲವೂ ಸಿಗಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ನ ಡೆಡ್ಲಿ ಬೌಲಿಂಗ್ ಕಾಂಬಿನೇಶನ್ ಎನಿಸಿರುವ ರಬಡ ಮತ್ತು ನೋರ್ಟಿಯಾ ಅವರ ಆರ್ಭಟ ಈ ಪಂದ್ಯದಲ್ಲೂ ಮುಂದುವರಿಯಿತು.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಬಲ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಶ್ರೇಯಸ್ ಅಯ್ಯರ್ 43 ರನ್ ಗಳಿಸಿದ್ದ ಆ ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ರಿಷಭ್ ಪಂತ್ ಮತ್ತು ಶಿಮ್ರೋನ್ ಹೆಟ್ಮಯರ್ ಅವರೂ ಉತ್ತಮ ಬ್ಯಾಟಿಂಗ್ ಮಾಡಿದರು. ಅದು ಬಿಟ್ಟರೆ ಉಳಿದಂತೆ ಈ ಇನ್ನಿಂಗ್ಸಲ್ಲಿ ಆರ್ ಆರ್ ತಂಡದ ಬೌಲರ್ಗಳದ್ದೇ ಹೆಚ್ಚು ಪ್ರಾಬಲ್ಯ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಪಾಲಿನ ಹೀರೋ ಆಗಿದ್ದ ಕಾರ್ತಿಕ್ ತ್ಯಾಗಿ ಅವರು ಇವತ್ತಿನ ಪಂದ್ಯದಲ್ಲಿ ಶಿಖರ್ ಧವನ್ ಅವರನ್ನ ಔಟ್ ಮಾಡಿ ಮಂದಹಾಸ ಮೂಡಿಸಿದರು. ಆದರೆ, ಅವರಿಗೆ ಇವತ್ತು ಸಿಕ್ಕಿದ್ದು ಅದೊಂದೇ ವಿಕೆಟ್. ಚೇತನ್ ಸಕಾರಿಯಾ ಮತ್ತು ಮುಸ್ತಾಫಿಜುರ್ ರಹಮಾನ್ ಇಬ್ಬರೂ ತಲಾ ಎರಡು ವಿಕೆಟ್ ಪಡೆದರು.
ಐಪಿಎಲ್ 2021ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟುಗಾರರಿಗೆ ಕೊಡುವ ಆರೆಂಜ್ ಕ್ಯಾಪ್ನ ರೇಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಮತ್ತು ಪೃಥ್ವಿ ಶಾ ಇಬ್ಬರು ಆಟಗಾರರು ಇದ್ದಾರೆ. ಈ ಇಬ್ಬರೂ ಇವತ್ತು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ.
ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎರಡು ದೊಡ್ಡ ಬದಲಾವಣೆ ಮಾಡಿತು. ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತ ಕೊಟ್ಟು ಖರೀದಿ ಮಾಡಲಾಗಿದ್ದ ಕ್ರಿಸ್ ಮಾರಿಸ್ ಅವರನ್ನ ಡ್ರಾಪ್ ಮಾಡಬೇಕಾದ ಸ್ಥಿತಿಗೆ ರಾಯಲ್ ಬಂದಿದೆ. ಕಳಪೆ ಫಾರ್ಮ್ನಲ್ಲಿರುವ ಕ್ರಿಸ್ ಮಾರಿಸ್ ಬದಲು ಡೇವಿಡ್ ಮಿಲ್ಲರ್ ಅವರನ್ನ ಆಡಿಸಿತು. ಎವಿನ್ ಲೆವಿಸ್ ಬದಲು ತಬ್ರೇಜ್ ಶಮ್ಸಿ ಅವರಿಗೆ ಅವಕಾಶ ಕೊಡಲಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿತು. ಮಾರ್ಕಸ್ ಸ್ಟಾಯ್ನಿಸ್ ಬದಲು ಹೆಚ್ಚುವರಿ ಸ್ಪಿನ್ನರ್ ಆಗಿ ಲಲಿತ್ ಯಾದವ್ ಅವರನ್ನ ಕರೆತರಲಾಯಿತು. ನಿಧಾನಗತಿ ಇರುವ ಅಬುಧಾಬಿ ಪಿಚ್ನಲ್ಲಿ ಸ್ಪಿನ್ನರ್ಗಳ ಪಾತ್ರ ಹೆಚ್ಚಿರಬಹುದು ಎಂಬ ನಿರೀಕ್ಷೆಯಲ್ಲಿ ರಿಷಭ್ ಪಂತ್ ಅವರು ಲಲಿತ್ ಯಾದವ್ ಅವರಿಗೆ ಅವಕಾಶ ಕೊಟ್ಟಿರಬಹುದು.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬದಲಾವಣೆ:
1) ಕ್ರಿಸ್ ಮಾರಿಸ್ ಬದಲು ಡೇವಿಡ್ ಮಿಲ್ಲರ್
2) ಎವಿನ್ ಲೆವಿಸ್ ಬದಲು ತಬ್ರೇಜ್ ಶಮ್ಸಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ:
1) ಮಾರ್ಕಸ್ ಸ್ಟಾಯ್ನಿಸ್ ಬದಲು ಲಲಿತ್ ಯಾದವ್
ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳಿದ 16 ಅಂಕ ಗಳಿಸಿ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಅದು ನಾಕೌಟ್ ಪ್ರವೇಶಿಸುವುದು ಬಹುತೇಕ ಖಚಿತವೆಂಬಂತಿದೆ. ಅತ್ತ, ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಿಂದ 8 ಅಂಕ ಗಳಿಸಿ ಐದನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ನಾಕೌಟ್ ಬಾಗಿಲು ರಾಯಲ್ಸ್ ಪಾಲಿಗೆ ಇನ್ನೂ ಮುಚ್ಚಿಹೋಗಿಲ್ಲ.
ಇದನ್ನೂ ಓದಿ: CSK vs RCB- ಆರ್ಸಿಬಿ ಸೋಲಿಗೆ ಬೌಲರ್ಗಳನ್ನ ದೂಷಿಸಿದ ಕೊಹ್ಲಿ; ಗೆಲುವಿಗೆ ಧೋನಿ ಕೊಟ್ಟ ಕಾರಣ ಇದು
ತಂಡಗಳು:
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್
ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲರ್, ಮಹಿಪಾಲ್ ಲೊಮ್ರೋರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರಹಮಾನ್, ಟಬ್ರೇಜ್ ಶಮ್ಸಿ.
ಸ್ಕೋರು ವಿವರ:
ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ 154/6
(ಶ್ರೇಯಸ್ ಅಯ್ಯರ್ 43, ಶೆಮ್ರಾನ್ ಹೆಟ್ಮಯರ್ 28, ರಿಷಭ್ ಪಂತ್ 24 ರನ್ – ಮುಸ್ತಾಫಿಜುರ್ ರಹಮಾನ್ 22/2, ಚೇತನ್ ಸಕಾರಿಯಾ 33/2)
ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ 121/6
(ಸಂಜು ಸ್ಯಾಮ್ಸನ್ ಅಜೇಯ 70, ಮಹಿಪಾಲ್ ಲೊಮ್ರೋರ್ 19 ರನ್ – ಆನ್ರಿಕ್ ನೋರ್ಟಿಯಾ 18/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ