ಅಬುಧಾಬಿ (ನ. 02): 13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪ್ಲೇ ಆಫ್ ಹಂತಕ್ಕೇರಲು ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣೆಸಾಟ ನಡೆಸಲಿವೆ. ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣ ಈ ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದ್ದು, ಗೆದ್ದ ತಂಡ ಎರಡನೇ ಟೀಂ ಆಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆಲುವು ಹಾಗೂ 6 ಪಂದ್ಯಗಳಲ್ಲಿ ಸೋಲನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕೂಡ ಇದೇ ಸ್ಥಿತಿಯಲ್ಲಿದ್ದು ರನ್ರೇಟ್ ಆಧಾರದ ಮೇಲೆ ಮೂರನೇ ಸ್ಥಾನದಲ್ಲಿದೆ.
IPL 2020 - ಆರ್ಸಿಬಿ ಕ್ವಾಲಿಫೈ ಆಗುವ ಸಾಧ್ಯತೆ ಎಷ್ಟು? ಸೋತರೂ ಎಷ್ಟು ಮಾರ್ಜಿನ್? ಇಲ್ಲಿದೆ ಲೆಕ್ಕಾಚಾರ
ಆರ್ಸಿಬಿಗೆ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಹೀಗಾಗಿ ಈ ಪಂದ್ಯವನ್ನು ಜಯಿಸಿದರೆ ನೇರವಾಗಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಕೊಹ್ಲಿ ಪಡೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದೆ. ಅಯ್ಯರ್ ಪಡೆ ಕೂಡ ಇದೇ ಲೆಕ್ಕಚಾರದಲ್ಲಿದೆ. ಸೋತ ತಂಡಕ್ಕೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದ್ದು, ಇತರೆ ತಂಡಗಳ ಪ್ರದರ್ಶನ ಮುಖ್ಯವಾಗಲಿದೆ.
ಕಳೆದ ಪಂದ್ಯದಲ್ಲಿ ಆರ್ಸಿಬಿ ತಂಡ ಹೈದರಾಬಾದ್ ವಿರುದ್ಧ ಹೀನಾಯ ಸೋಲುಕಂಡಿತ್ತು. ತಂಡದಲ್ಲಿ ಬದಲಾವಣೆ ಮಾಡಿದ್ದರೂ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಸಂಪೂರ್ಣ ವಿಫಲವಾಗಿತ್ತು.
ಜೋಶ್ ಫಿಲಿಪ್ ತಂಡಕ್ಕೆ ಆಧಾರವಾಗಿ ನಿಂತಿದ್ದರಷ್ಟೆ. ಗುರುಕೀರತ್ ಮನ್ಸಿಂಗ್ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಟೀಕೆಗಳಿಗೆ ಗುರಿಯಾಗಿದ್ದರು. ಹೀಗಾಗಿ ಶಿವಂ ದುಬೆ ಕಮ್ಬ್ಯಾಕ್ ಮಾಡುವ ಅಂದಾಜಿದೆ. ಜೊತೆಗೆ ಮೊಹಮ್ಮದ್ ಸಿರಾಜ್ ಬದಲು ಉಮೇಶ್ ಯಾದವ್ ಆಡಬಹುದು.
IPL Points Table: ಐಪಿಎಲ್ ಅಂಕ ಪಟ್ಟಿ - ಕೋಲ್ಕತ್ತಾಗೆ ಪ್ಲೇಆಫ್ ಕನಸು ಜೀವಂತ; ರಾಜಸ್ಥಾನ್, ಪಂಜಾಬ್ ಔಟ್
ಸ್ಟಾರ್ ಬ್ಯಾಟ್ಸ್ಮನ್ಗಳಾದ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುತ್ತಿಲ್ಲ. ಆರಂಭಿಕ ಹಂತದಲ್ಲಿ ಪಡಿಕಲ್ ಸಿಡಿಯಬೇಕಿದೆ. ಕ್ರಿಸ್ ಮಾರಿಸ್ ಕೂಡ ನಿಸ್ತೇಜ ನಿರ್ವಹಣೆ ಮುಂದುವರಿಸಿದ್ದಾರೆ.
ಇತ್ತ ಡೆಲ್ಲಿ ತಂಡ ಮುಂಬೈ ವಿರುದ್ಧ ಕಳಪೆ ಪ್ರದರ್ಶನ ತೋರಿತ್ತು. ಪ್ರಮುಖವಾಗಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಅಜಿಂಕ್ಯಾ ರಹಾನೆ ಬದಲು ಪೃಥ್ವಿ ಶಾ ಕಣಕ್ಕಿಳಿದರೂ ಯಶಸ್ವಿಯಾಗಲಿಲ್ಲ. ಧವನ್ ಕೂಡ ಬೇಗನೆ ಔಟ್ ಆಗುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕನ ಆಟವಾಡುತ್ತಿಲ್ಲ. ರಿಷಭ್ ಪಂತ್ ಕಲೆ ಹಾಕುತ್ತಿರುವ ರನ್ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲರ್ಗಳು ಕೂಡ ದುಬಾರಿಯಾಗಿದ್ದರು. ಕಗಿಸೊ ರಬಾಡ, ನೋರ್ಟ್ಜೆ, ಆರ್. ಅಶ್ವಿನ್, ಸ್ಟೋಯ್ನಿಸ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 09 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ