DC vs PBKS: ಮಯಾಂಕ್-ರಾಹುಲ್ ಅರ್ಧಶತಕ: ಡೆಲ್ಲಿ ಮುಂದಿದೆ ಬೃಹತ್ ಮೊತ್ತದ ಸವಾಲು..!
ಉಭಯ ತಂಡಗಳು ಐಪಿಎಲ್ನಲ್ಲಿ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ಗೆಲುವು ದಾಖಲಿಸಲು ಮಾತ್ರ ಯಶಸ್ವಿಯಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ಗೆ 196 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ 3 ಓವರ್ಗಳಲ್ಲಿ 35 ರನ್ ಕಲೆಹಾಕಿದರು. ಅಲ್ಲದೆ ಪವರ್ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರುಗಳ ಬೆಂಡೆತ್ತಿದ ಈ ಜೋಡಿ ಮೊದಲ 6 ಓವರ್ನಲ್ಲಿ 59 ರನ್ ಬಾರಿಸಿತು.
ಪವರ್ಪ್ಲೇ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮಯಾಂಕ್ ಅಗರ್ವಾಲ್ ಸಿಕ್ಸ್, ಫೋರ್ಗಳನ್ನು ಬಾರಿಸುತ್ತಾ ರನ್ ಗಳಿಕೆ ವೇಗವನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಯಾಂಕ್ ಬ್ಯಾಟ್ ಮೇಲೆಕ್ಕೆತ್ತಿದರು. ಅದರೊಂದಿಗೆ ಮೊದಲ ಹತ್ತು ಓವರ್ನಲ್ಲಿ ಪಂಜಾಬ್ ಕಿಂಗ್ಸ್ ಮೊತ್ತ 94 ಕ್ಕೇರಿತು.
ಇನ್ನು ರಬಾಡ ಎಸೆದ 11ನೇ ಓವರ್ನಲ್ಲಿ ಮಯಾಂಕ್ 2 ಸಿಕ್ಸ್ ಸಿಡಿಸಿದರೆ, ರಾಹುಲ್ 1 ಭರ್ಜರಿ ಸಿಕ್ಸ್ ಬಾರಿಸಿದರು. ಈ ಓವರ್ನಲ್ಲಿ 20 ರನ್ ಕಲೆಹಾಕುವುದರೊಂದಿಗೆ ಪಂಜಾಬ್ ಕಿಂಗ್ಸ್ ಮೊತ್ತ 114ಕ್ಕೆ ಬಂದು ನಿಂತಿತು.
ಲುಕ್ಮಾನ್ ಮೆರಿವಾಲ ಎಸೆದ 13ನೇ ಓವರ್ನಲ್ಲಿ ಬಿಗ್ ಹಿಟ್ಗೆ ಮುಂದಾದ ಮಯಾಂಕ್ ಬೌಂಡರಿ ಲೈನ್ನಲ್ಲಿದ್ದ ಶಿಖರ್ ಧವನ್ಗೆ ಕ್ಯಾಚ್ ನೀಡಿದರು. ಇದರೊಂದಿಗೆ 36 ಎಸೆತಗಳಲ್ಲಿ 4 ಸಿಕ್ಸ್, 7 ಬೌಂಡರಿ ಒಳಗೊಂಡ 69 ರನ್ಗಳ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಅಂತ್ಯಗೊಂಡಿತು.
ಇನ್ನೊಂದೆಡೆಯಿದ್ದ ಬರ್ತ್ಡೇ ಬಾಯ್ ಕೆಎಲ್ ರಾಹುಲ್ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ 15 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 140ಕ್ಕೆ ತಂದು ನಿಲ್ಲಿಸಿದರು. ರಬಾಡ ಎಸೆದ 16ನೇ ಓವರ್ನ 2ನೇ ಎಸೆತದಲ್ಲಿ ಕೆಎಲ್ ರಾಹುಲ್ (61 , 51 ಎಸೆತ) ಕ್ಯಾಚ್ ನೀಡಿ ನಿರ್ಗಮಿಸಿದರು. ನಾಯಕನ ಬೆನ್ನಲ್ಲೇ ಕ್ರಿಸ್ ಗೇಲ್ ಕೂಡ 11 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ನಿಕೋಲಸ್ ಪೂರನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 18 ಓವರ್ನಲ್ಲಿ ತಂಡದ ಮೊತ್ತ 170ಕ್ಕೆ ಬಂದು ನಿಂತಿತು. 19ನೇ ಓವರ್ನಲ್ಲಿ 9 ರನ್ ನೀಡಿದ ಅವೇಶ್ ಖಾನ್ ನಿಕೋಲಸ್ ಪೂರನ್ (9) ವಿಕೆಟ್ ಪಡೆದರು.
ಕ್ರಿಸ್ ವೋಕ್ಸ್ ಎಸೆದ 20ನೇ ಓವರ್ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಶಾರುಖ್ ಖಾನ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 195ಕ್ಕೆ ತಂದು ನಿಲ್ಲಿಸಿದರು.
ಈ ಮೈದಾನದಲ್ಲಿ ಈ ಬಾರಿ ಉಭಯ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿದೆ. ಸಿಎಸ್ಕೆ ವಿರುದ್ದ ಹೀನಾಯವಾಗಿ ಸೋತಿರುವ ರಾಹುಲ್ ಪಡೆ ಇಂದಿನ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳುವ ಇರಾದೆಯಲ್ಲಿದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ದ ಪರಾಜಯಗೊಂಡಿರುವ ರಿಷಭ್ ಪಂತ್ ಇಂದು ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ಗೆಲುವು ದಾಖಲಿಸಲು ಮಾತ್ರ ಯಶಸ್ವಿಯಾಗಿದೆ. ಕಳೆದ ಸೀಸನ್ಲ್ಲಿನ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಒಂದೊಂದು ಜಯ ಸಾಧಿಸಿದೆ. ಕೊನೆಯ 10 ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಪಂಜಾಬ್ ತಂಡವು ಮೇಲುಗೈ ಹೊಂದಿದ್ದು, ಡೆಲ್ಲಿ ವಿರುದ್ದ 6 ಜಯ ಸಾಧಿಸಿದೆ.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ