HOME » NEWS » Ipl » DC VS PBKS LIVE SCORE IPL 2021 DELHI CAPITALS WON BY 6 WICKETS ZP

DC vs PBKS: ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ

ಉಭಯ ತಂಡಗಳು ಐಪಿಎಲ್​ನಲ್ಲಿ 27 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 12 ಗೆಲುವು ದಾಖಲಿಸಿದೆ.

news18-kannada
Updated:April 18, 2021, 11:23 PM IST
DC vs PBKS: ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ
shikar dhawan
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಪಂಜಾಬ್ ನೀಡಿದ 196 ರನ್​ಗಳ ಟಾರ್ಗೆಟ್​ನ್ನು ಚೇಸ್ ಮಾಡಿದ ಡೆಲ್ಲಿ ಶಿಖರ್ ಧವನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ  10 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿತು.

ಇದಕ್ಕೂ ಮುನ್ನ ಪಂಜಾಬ್ ನೀಡಿದ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಿಖರ್ ಧವನ್-ಪೃಥ್ವಿ ಶಾ ಉತ್ತಮ ಆರಂಭ ಒದಗಿಸಿದರು. ಮೊದಲ ಮೂರು ಓವರ್​ನಲ್ಲಿ 31 ರನ್ ಬಾರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ 5 ಓವರ್​ನಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು.

ಆದರೆ ಪವರ್​ಪ್ಲೇಯ ಕೊನೆಯ ಓವರ್​ನಲ್ಲಿ ಪೃಥ್ವಿ ಶಾ (32) ವಿಕೆಟ್ ಪಡೆದು ಅರ್ಷದೀಪ್ ಸಿಂಗ್ ಪಂಜಾಬ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 6 ಓವರ್​ನಲ್ಲಿ 62 ರನ್ ಪೇರಿಸಿತ್ತು. ಇದಾದ ಬಳಿಕ ಉತ್ತಮ ಜೊತೆಯಾಟವಾಡಿದ ಶಿಖರ್ ಧವನ್ ಹಾಗೂ ಸ್ಟೀವ್ ಸ್ಮಿತ್ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಇದರ ನಡುವೆ 31 ಎಸೆತಗಳಲ್ಲಿ ಶಿಖರ್ ಧವನ್ ತಮ್ಮ ಅರ್ಧಶತಕ ಪೂರೈಸಿದರು. ಅಲ್ಲದೆ 11ನೇ ಓವರ್​ನಲ್ಲಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು.

ಈ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಸ್ಟೀವ್ ಸ್ಮಿತ್ (9) ರಿಲೆ ಮೆರಿಡಿತ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ಧವನ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. 15ನೇ ಓವರ್​ನಲ್ಲಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದ ಬೆನ್ನಲ್ಲೇ ಶಿಖರ್ ಧವನ್ ರಿಚರ್ಡ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಔಟಾಗುವ ಮುನ್ನ ಧವನ್ ಕೇವಲ 49 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್​ನೊಂದಿಗೆ 92 ರನ್ ಬಾರಿಸಿದ್ದರು.

ಅಂತಿಮ 3 ಓವರ್​ಗಳಲ್ಲಿ ಡೆಲ್ಲಿಗೆ 16 ರನ್​ಗಳ ಅಗತ್ಯವಿತ್ತು. ಈ ವೇಳೆ 17ನೇ ಓವರ್ ಬೌಲಿಂಗ್ ಮಾಡಿದ್ದ ಜೈ ರಿಚರ್ಡ್ಸನ್ ಮೊದಲ ಎಸೆತದಲ್ಲಿ ರಿಷಭ್ ಪಂತ್ (15) ವಿಕೆಟ್ ಪಡೆದರು. ಇದಾಗ್ಯೂ ಈ ಓವರ್​ನಲ್ಲಿ ಡೆಲ್ಲಿ 8 ರನ್ ಕಲೆಹಾಕಿತ್ತು. ಅಂತಿಮ 2 ಓವರ್​ನಲ್ಲಿ 8 ರನ್​ಗಳ ಅವಶ್ಯಕತೆಯಿತ್ತು.  18.2 ಓವರ್​ನಲ್ಲಿ 198 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಜಯದ ನಗೆ ಬೀರಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ 3 ಓವರ್​ಗಳಲ್ಲಿ 35 ರನ್​ ಕಲೆಹಾಕಿದರು. ಅಲ್ಲದೆ ಪವರ್​ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರುಗಳ ಬೆಂಡೆತ್ತಿದ ಈ ಜೋಡಿ ಮೊದಲ 6 ಓವರ್​ನಲ್ಲಿ 59 ರನ್ ಬಾರಿಸಿತು.

ಪವರ್​ಪ್ಲೇ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮಯಾಂಕ್ ಅಗರ್ವಾಲ್ ಸಿಕ್ಸ್​, ಫೋರ್​ಗಳನ್ನು ಬಾರಿಸುತ್ತಾ ರನ್​ ಗಳಿಕೆ ವೇಗವನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಯಾಂಕ್ ಬ್ಯಾಟ್ ಮೇಲೆಕ್ಕೆತ್ತಿದರು. ಅದರೊಂದಿಗೆ ಮೊದಲ ಹತ್ತು ಓವರ್​ನಲ್ಲಿ ಪಂಜಾಬ್ ಕಿಂಗ್ಸ್ ಮೊತ್ತ 94 ಕ್ಕೇರಿತು.ಇನ್ನು ರಬಾಡ ಎಸೆದ 11ನೇ ಓವರ್​ನಲ್ಲಿ ಮಯಾಂಕ್ 2 ಸಿಕ್ಸ್ ಸಿಡಿಸಿದರೆ, ರಾಹುಲ್ 1 ಭರ್ಜರಿ ಸಿಕ್ಸ್ ಬಾರಿಸಿದರು. ಈ ಓವರ್​ನಲ್ಲಿ 20 ರನ್​ ಕಲೆಹಾಕುವುದರೊಂದಿಗೆ ಪಂಜಾಬ್ ಕಿಂಗ್ಸ್ ಮೊತ್ತ 114ಕ್ಕೆ ಬಂದು ನಿಂತಿತು.

ಲುಕ್ಮಾನ್ ಮೆರಿವಾಲ ಎಸೆದ 13ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಮಯಾಂಕ್ ಬೌಂಡರಿ ಲೈನ್​ನಲ್ಲಿದ್ದ ಶಿಖರ್ ಧವನ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ 36 ಎಸೆತಗಳಲ್ಲಿ 4 ಸಿಕ್ಸ್​, 7 ಬೌಂಡರಿ ಒಳಗೊಂಡ 69 ರನ್​ಗಳ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಅಂತ್ಯಗೊಂಡಿತು.

ಇನ್ನೊಂದೆಡೆಯಿದ್ದ ಬರ್ತ್​ಡೇ ಬಾಯ್ ಕೆಎಲ್ ರಾಹುಲ್ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ 15 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 140ಕ್ಕೆ ತಂದು ನಿಲ್ಲಿಸಿದರು. ರಬಾಡ ಎಸೆದ 16ನೇ ಓವರ್​ನ 2ನೇ ಎಸೆತದಲ್ಲಿ ಕೆಎಲ್ ರಾಹುಲ್ (61 , 51 ಎಸೆತ) ಕ್ಯಾಚ್ ನೀಡಿ ನಿರ್ಗಮಿಸಿದರು. ನಾಯಕನ ಬೆನ್ನಲ್ಲೇ ಕ್ರಿಸ್ ಗೇಲ್ ಕೂಡ 11 ರನ್​ಗಳಿಸಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ನಿಕೋಲಸ್ ಪೂರನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 18 ಓವರ್​ನಲ್ಲಿ ತಂಡದ ಮೊತ್ತ 170ಕ್ಕೆ ಬಂದು ನಿಂತಿತು. 19ನೇ ಓವರ್​ನಲ್ಲಿ 9 ರನ್​ ನೀಡಿದ ಅವೇಶ್ ಖಾನ್ ನಿಕೋಲಸ್ ಪೂರನ್ (9) ವಿಕೆಟ್ ಪಡೆದರು.

ಕ್ರಿಸ್ ವೋಕ್ಸ್ ಎಸೆದ 20ನೇ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಶಾರುಖ್ ಖಾನ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 195ಕ್ಕೆ ತಂದು ನಿಲ್ಲಿಸಿದರು.

ಈ ಮೈದಾನದಲ್ಲಿ ಈ ಬಾರಿ ಉಭಯ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿದೆ. ಸಿಎಸ್​ಕೆ ವಿರುದ್ದ ಹೀನಾಯವಾಗಿ ಸೋತಿರುವ ರಾಹುಲ್ ಪಡೆ ಇಂದಿನ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳುವ ಇರಾದೆಯಲ್ಲಿದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ದ ಪರಾಜಯಗೊಂಡಿರುವ ರಿಷಭ್ ಪಂತ್ ಇಂದು ಜಯ ಸಾಧಿಸುವ ವಿಶ್ವಾಸದಲ್ಲಿದೆ.





ಉಭಯ ತಂಡಗಳು ಐಪಿಎಲ್​ನಲ್ಲಿ 27 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 12 ಗೆಲುವು ದಾಖಲಿಸಿದೆ.
Published by: zahir
First published: April 18, 2021, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories