ದುಬೈ-ಶಾರ್ಜಾ (ಅ. 31): 13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ಮತ್ತೊಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಶಾರ್ಜಾ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಹಾಲಿ ಚಾಂಪಿಯನ್ ಮುಂಬೈ ತಂಡ ಈಗಾಗಲೆ ಪ್ಲೇಆಫ್ ಖಾತ್ರಿಪಡಿಸಿಕೊಂಡಿದೆ. ಇತ್ತ ಆರಂಭದಲ್ಲಿ ಜಯದ ನಾಗಲೋಟ ಕಂಡಿದ್ದ ಡೆಲ್ಲಿ ಸದ್ಯ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಪ್ಲೇ ಆಫ್ ಖಚಿತ ಪಡಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಪ್ರಮುಖವಾಗಿ ಡೆಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಅಜಿಂಕ್ಯಾ ರಹಾನೆ ಸಂಪೂರ್ಣ ಫಾರ್ಮ್ ಕಳೆದುಕೊಂಡಿದ್ದಾರೆ. ಧವನ್ ಕೂಡ ಬೇಗನೆ ಔಟ್ ಆಗುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕನ ಆಟವಾಡುತ್ತಿಲ್ಲ. ರಿಷಭ್ ಪಂತ್ ಕಳೆದ ಪಂದ್ಯದಲ್ಲಿ ಕೊಂಚ ಬ್ಯಾಟ್ ಬೀಸಿದ್ದರಷ್ಟೆ.
Chris Gayle: ಸಿಟ್ಟಿನಿಂದ ಬ್ಯಾಟ್ ಎಸೆದ ಕ್ರಿಸ್ ಗೇಲ್ಗೆ ಬಿದ್ದ ದಂಡವೆಷ್ಟು ಗೊತ್ತಾ?
ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲರ್ಗಳು ಕೂಡ ದುಬಾರಿಯಾಗಿದ್ದರು. ಕಗಿಸೊ ರಬಾಡ, ನೋರ್ಟ್ಜೆ, ಅಕ್ಸರ್ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ.
ಇತ್ತ ಮುಂಬೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಪ್ರಚಂಡ ಫಾರ್ಮ್ನಲ್ಲಿದೆ. ಡಿ ಕಾಕ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್ ಅದ್ಭುತವಾಗಿ ಸ್ಪೆಲ್ ಮಾಡುತ್ತಿದ್ದಾರೆ.
ಉಭಯ ತಂಡಗಳು ಇಲ್ಲಿಯವರೆಗೆ ಐಪಿಎಲ್ನಲ್ಲಿ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಮುಂಬೈ ತಂಡ ಗೆಲುವು ಕಂಡಿದ್ರೆ, 12 ಪಂದ್ಯಗಳಲ್ಲಿ ಡೆಲ್ಲಿ ತಂಡ ಜಯ ಸಾಧಿಸಿದೆ.ಇನ್ನೂ ಇಂದು ನಡೆಯಲಿರುವ ಮತ್ತೊಂದು ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಸತತ 2 ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೇರುವ ದೃಷ್ಟಿಯಿಂದ ಮಹತ್ವ ಪಡೆದಿದೆ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
RCB: ಆರ್ಸಿಬಿ ಮುಂದಿನ ಎರಡೂ ಪಂದ್ಯಗಳಲ್ಲಿ ಸೋತರೆ ಏನಾಗಲಿದೆ?; ಇಲ್ಲಿದೆ ವಿವರ
ಕೊಹ್ಲಿ ಪಡೆಯಲ್ಲಿ ಬದಲಾವಣೆ ಗಾಳಿ ಬೀಸಬೇಕಾದ ಅಗತ್ಯವಿದೆ. ಕಳೆದ ಪಂದ್ಯದಲ್ಲಿ ಮೂರು ಬದಲಾವಣೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೌಲರ್ಗಳು ಮತ್ತೆ ದುಬಾರಿ ಆಗುತ್ತಿದ್ದಾರೆ. ದೇವದತ್ ಪಡಿಕ್ಕಲ್ ಹಾಗೂ ಜೋಶ್ ಫಿಲಿಪ್ ಕಳೆದ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸಿದ್ದರು. ಆದರೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ನಿರ್ಗಮನದ ಬಳಿಕ ಅಬ್ಬರಿಸುವ ಬ್ಯಾಟ್ಸ್ಮನ್ ಯಾರೂ ಇಲ್ಲ.
ಇತ್ತ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ಲೇ-ಆಫ್ ಜೀವಂತವಾಗಿರಿಸಿಕೊಳ್ಳಲು ಗೆಲುವೊಂದೆ ಮಾರ್ಗವಾಗಿದೆ.
ವೃದ್ಧಿಮಾನ್ ಸಾಹ, ಡೇವಿಡ್ ವಾರ್ನರ್ ಸ್ಫೋಟಕ ಆರಂಭ ಒದಗಿಸಿ ಭರವಸೆ ಮೂಡಿಸಿದ್ದಾರೆ. ಮನೀಷ್ ಪಾಂಡೆ ಕೂಡ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಆದರೆ ವಿಜಯ್ ಶಂಕರ್ ಅಲಭ್ಯತೆ ತಂಡಕ್ಕೆ ಕಾಡಲಿದೆ. ರಶೀದ್ ಖಾನ್, ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಇವರಿಗೆ ಸಂದೀಪ್ ಶರ್ಮ, ಟಿ.ನಟರಾಜನ್ ಅಗತ್ಯ ಸಾಥ್ ನೀಡುತ್ತಿದ್ದಾರೆ.
ಇಲ್ಲಿಯವರೆಗೆ ಹೈದರಾಬಾದ್ ಮತ್ತು ಆರ್ಸಿಬಿ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್ ರೈಸರ್ ತಂಡ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ.