KKR vs DC- ರಾಣಾ, ಗಿಲ್, ನರೈಲ್ ಅಮೋಘ ಬ್ಯಾಟಿಂಗ್; ಡೆಲ್ಲಿ ಸೋಲಿಸಿದ ಕೆಕೆಆರ್

IPL 2021 Match no. 40, Delhi Capitals vs Kolkata Knight Riders at Sharjah: ಕೆಕೆಆರ್ ತಂಡದ ಉತ್ತಮ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ನಲ್ಲಿ ಕೇವಲ 127 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಕೆಕೆಆರ್ ಯಶಸ್ವಿಯಾಗಿ ಬೆನ್ನತ್ತಿತು.

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್

  • Cricketnext
  • Last Updated :
  • Share this:
    ಶಾರ್ಜಾ, ಸೆ. 28: ಕಡಿಮೆ ಮೊತ್ತದ ಸವಾಲೂ ಕಠಿಣವಾಗಿದ್ದ ಪಿಚ್​ನಲ್ಲಿ ಕೆಕೆಆರ್ ಬ್ಯಾಟರ್​ಗಳು ತಿಣುಕಾಡಿ ತಿಣುಕಾಡಿ ಡೆಲ್ಲಿ ಕ್ಯಾಪಿಟಲ್ಸ್ ಪಡೆಯನ್ನ ಸೋಲಿಸಿದೆ. ಈ ಮೂಲಕ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಗೆಲ್ಲಲು 128 ರನ್ ಗುರಿ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ 3 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಇದರೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಕೆಕೆಆರ್ 4ನೇ ಸ್ಥಾನಕ್ಕೇರಿತು. ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇವತ್ತಿನ ಕೆಕೆಆರ್ ಗೆಲುವಿಗೆ ಅದರ ಬೌಲಿಂಗ್ ಪಡೆ ಪ್ರಮುಖ ಕಾರಣವಾಗಿದೆ. ಸುನೀಲ್ ನರೈನ್, ಲಾಕೀ ಫರ್ಗೂಸನ್ ಮತ್ತು ವೆಂಕಟೇಶ್ ಅಯ್ಯರ್ ಅಮೋಘ ಬೌಲಿಂಗ್ ಪ್ರದರ್ಶನ ತೋರಿ ಡೆಲ್ಲಿ ಇನ್ನಿಂಗ್ಸನ್ನು 127 ರನ್​ಗೆ ಸೀಮಿತಗೊಳಿಸಿದರು. ನಂತರ ಕೆಕೆಆರ್ ಚೇಸಿಂಗ್ ನಿರೀಕ್ಷಿತ ಹಾದಿಯಲ್ಲಿ ಸಾಗಲಿಲ್ಲ. ಪದೇ ಪದೇ ವಿಕೆಟ್ ಬಿದ್ದು ಪಂದ್ಯ ಎತ್ತ ಬೇಕಾದರೂ ವಾಲುವ ಸಾಧ್ಯತೆ ಇತ್ತು. ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಸುನೀಲ್ ನರೈನ್ ಅವರು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಕೆಕೆಆರ್ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಲ್ಲದೇ ಅಮೂಲ್ಯವೆನಿಸುವ ಗೆಲುವಿಗೆ ಕಾರಣರಾದರು.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಟೀವನ್ ಸ್ಮಿತ್, ನಾಯಕ ರಿಷಭ್ ಪಂತ್ ಮತ್ತು ಶಿಖರ್ ಧವನ್ ಬಿಟ್ಟು ಉಳಿದ ಯಾರೂ ಎರಡಂಕಿ ಮೊತ್ತ ಗಡಿ ಮುಟ್ಟಲಿಲ್ಲ.  ಐಪಿಎಲ್ 2021ನ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಬ್ಯಾಟರ್​ಗಳನ್ನ ಕಳೆದುಕೊಂಡು ನಿಧಾನಗತಿಯಲ್ಲಿ ಇನ್ನಿಂಗ್ಸ್ ಮುಂದುವರಿಸಿದೆ. ಯುಎಇ ಲೆಗ್​ನಲ್ಲಿ ಮೊದಲ ಬಾರಿಗೆ ಪ್ಲೇಯಿಂಗ್ ಇಲವೆನ್​ನಲ್ಲಿ ಅವಕಾಶ ಪಡೆದಿರುವ ಸ್ಟೀವ್ ಸ್ಮಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ 39 ರನ್ ಗಳಿಸಿ ಔಟಾದರು. ಆದರೆ, ಆರೆಂಜ್ ಕ್ಯಾಪ್ ರೇಸ್​ನಲ್ಲಿರುವ ಶಿಖರ್ ಧವನ್ 24 ರನ್ ಗಳಿಸಿ ಔಟಾದರು. ಒಳ್ಳೆಯ ಫಾರ್ಮ್​ನಲ್ಲಿದ್ದ ಶ್ರೇಯಸ್ ಅಯ್ಯರ್ ಒಂದು ರನ್ ಮಾತ್ರ ಗಳಿಸಿದರು. ಶಿಮ್ರೋನ್ ಹೆಟ್ಮೆಯರ್ ಕೂಡ ಎರಡಂಕಿ ಸ್ಕೋರು ತಲುಪಲು ವಿಫಲರಾದರು.

    ಈ ಮಹತ್ವದ ಪಂದ್ಯದಲ್ಲಿ ಎರಡೂ ತಂಡಗಳಲ್ಲಿ ಅಲ್ಪ ಬದಲಾವಣೆಗಳಾದವು. ಕಳೆದ ಬಾರಿ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ರಸೆಲ್ ಬದಲು ಟಿಮ್ ಸೌಥಿ ಸ್ಥಾನ ಪಡೆದರು. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಜಡೇಜಾ ಕೈಯಲ್ಲಿ ಚಚ್ಚಿಸಿಕೊಂಡಿದ್ದ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರನ್ನ ಕೈಬಿಡಲಾಯಿತು. ಅವರ ಬದಲು ಕೇರಳದ ಸಂದೀಪ್ ವಾರಿಯರ್​ಗೆ ಚಾನ್ಸ್ ನೀಡಲಾಯಿತು. ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಗಾಯಾಳು ಪೃಥ್ವಿ ಶಾ ಬದಲು ಸ್ಟೀವ್ ಸ್ಮಿತ್ ಅವಕಾಶ ಪಡೆದು ಉತ್ತಮ ಬ್ಯಾಟಿಂಗ್ ಮಾಡಿದರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಅಂಕಗಳನ್ನ ಪಡೆದು ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಇವತ್ತು ಅದು ಗೆದ್ದಿದ್ದರೆ ಪ್ಲೇ ಆಫ್ ಪ್ರವೇಶ ಖಚಿತವಾಗಿರುತ್ತಿತ್ತು. ಆದರೆ, ಅದಕ್ಕೆ ಇನ್ನೂ ಮೂರು ಪಂದ್ಯಗಳ ಅವಕಾಶ ಇದೆ. ಒಂದು ವೇಳೆ ಉಳಿದೆಲ್ಲಾ ಪಂದ್ಯಗಳನ್ನ ಸೋತು, ಬೇರೆ ನಾಲ್ಕು ತಂಡಗಳು ತಮ್ಮೆಲ್ಲಾ ಪಂದ್ಯಗಳನ್ನ ಗೆದ್ದ ಪಕ್ಷದಲ್ಲಿ ಮಾತ್ರ ಡೆಲ್ಲಿ ತಂಡಕ್ಕೆ ಪ್ಲೇ ಆಫ್ ಅವಕಾಶ ಕೈತಪ್ಪಬಹುದು. ಹಾಗಾಗುವ ಸಾಧ್ಯತೆ ಬಹುತೇಕ ಕಡಿಮೆ. ಡೆಲ್ಲಿ ತಂಡ ತನಗಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇ ಆಫ್ ಪ್ರವೇಶ ಖಚಿತಗೊಳ್ಳುತ್ತದ. ಎರಡು ಪಂದ್ಯ ಗೆದ್ದರೆ ಟಾಪ್-2 ತಂಡವಾಗಿ ಪ್ರವೇಶ ಪಡೆದು ಕ್ವಾಲಿಫಯರ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯಲಿದೆ.

    ಇನ್ನೊಂದೆಡೆ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಹಾದಿ ತುಸು ಸುಗಮಗೊಂಡಿದೆ. ಡೆಲ್ಲಿ ವಿರುದ್ಧ ಗೆದ್ದ ಬಳಿಕ ಅದು 10 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿದೆ. ಆರ್​ಸಿಬಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮುಂಬೈ, ರಾಜಸ್ಥಾನ್ ಮತ್ತು ಪಂಜಾಬ್ ತಂಡಗಳು 8 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಹೀಗಾಗಿ, ಪ್ಲೇ ಆಫ್ ಪೈಪೋಟಿ ಸಾಕಷ್ಟು ಕುತೂಹಲ ಮೂಡಿಸಿದೆ.

    ತಂಡಗಳು:

    ಡೆಲ್ಲಿ ಕ್ಯಾಪಿಟಲ್ಸ್ ತಂಡ: ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್​ಮಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್.

    ಕೋಲ್ಕತಾ ನೈಟ್ ರೈಡರ್ಸ್ ತಂಡ: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಟಿಮ್ ಸೌಥೀ, ಸುನೀಲ್ ನರೈನ್, ಲಾಕೀ ಫರ್ಗ್ಯೂಸನ್, ಸಂದೀಪ್ ವಾರಿಯರ್, ವರುಣ್ ಚಕ್ರವರ್ತಿ.

    ಸ್ಕೋರು ವಿವರ:

    ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ 127/9
    (ರಿಷಭ್ ಪಂತ್ 39, ಸ್ಟೀವನ್ ಸ್ಮಿತ್ 39, ಶಿಖರ್ ಧವನ್ 24 ರನ್ – ಸುನೀಲ್ ನರೈನ್ 18/2, ಲಾಕೀ ಫರ್ಗ್ಯೂಸನ್ 10/2, ವೆಂಕಟೇಶ್ ಅಯ್ಯರ್ 29/2)

    ಕೋಲ್ಕತಾ ನೈಟ್ ರೈಡರ್ಸ್ 18.2 ಓವರ್ 130/7
    (ಶುಬ್ಮನ್ ಗಿಲ್ 30, ನಿತೀಶ್ ರಾಣಾ ಅಜೇಯ 36, ಸುನೀಲ್ ನರೈನ್ 21 ರನ್ – ಆವೇಶ್ ಖಾನ್ 13/3)
    Published by:Vijayasarthy SN
    First published: