IPL Qualifier 1- DC vs CSK: ಫೈನಲ್ ಟಿಕೆಟ್​ಗೆ ಇಂದು ದುಬೈನಲ್ಲಿ ಡೆಲ್ಲಿ ಮತ್ತು ಚೆನ್ನೈ ಹಣಾಹಣಿ

IPL 2021, Qualifier 1: Chennai vs Delhi- ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ದುಬೈನಲ್ಲಿ ಇಂದು ಮೊದಲ ಕ್ವಾಲಿಫಯರ್ ಪಂದ್ಯ ನಡೆಯುತ್ತಿದೆ. ಇದರಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸುತ್ತಾರೆ.

ಎಂಎಸ್ ಧೋನಿ ಮತ್ತು ರಿಷಭ್ ಪಂತ್

ಎಂಎಸ್ ಧೋನಿ ಮತ್ತು ರಿಷಭ್ ಪಂತ್

 • Share this:
  ದುಬೈ, ಅ. 10: ಇಂದಿನಿಂದ ಐಪಿಎಲ್ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಇವತ್ತು ಲೀಗ್ ಹಂತದ ಗ್ರೂಪ್ ಟಾಪರ್ಸ್ ಆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಮೊದಲ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ಪ್ರವೇಶ ಪಡೆಯುತ್ತದೆ. ಸೋತ ತಂಡ ಎರಡನೇ ಕ್ವಾಲಿಫಯರ್​ನಲ್ಲಿ ಆಡಿ ಫೈನಲ್​ಗೆ ಪ್ರವೇಶ ಪಡೆಯುವ ಅವಕಾಶವನ್ನ ಹೊಂದಿರುತ್ತದೆ. ಹೀಗಾಗಿ, ಇವತ್ತಿನ ಮೊದಲ ಕ್ವಾಲಿಫಯರ್ ಪಂದ್ಯವು ನಿರ್ಭೀತಿಯಿಂದ ನಡೆಯುವ ಉಗ್ರ ಕಾಳಗವಾಗಲಿದೆ. ಜೊತೆಗೆ, ಅನುಭವಿ ಅಟಗಾರರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಉದಯೋನ್ಮುಖ ಪ್ರತಿಭೆಗಳ ಆಗರವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಕದನ ಸಾಕಷ್ಟು ಕುತೂಹಲ ಮೂಡಿಸಿದೆ..

  ಕಳೆದ ಹಲವು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸತತವಾಗಿ ಗೆಲುವು ಸಾಧಿಸಿದೆ. ಈ ಆವೃತ್ತಿಯ ಐಪಿಎಲ್​ನ ಲೀಗ್ ಹಂತದ ಎರಡೂ ಪಂದ್ಯಗಳಲ್ಲೂ ಡೆಲ್ಲಿಯೇ ಗೆದ್ದಿರುವುದು. ಇದಕ್ಕೆ ಪ್ರತಿಯಾಗಿ ಪ್ಲೇ ಆಫ್ ಹಂತದಲ್ಲಿ ಡೆಲ್ಲಿ ಎದುರು ಚೆನ್ನೈ ಸೋತದ್ದೇ ಇಲ್ಲ. ಈ ಎರಡೂ ಅಂಶಗಳು ಗಮನಾರ್ಹವಾದುದು. ಹಾಗೆಯೇ, ಲೀಗ್ ಹಂತದಲ್ಲಿ ಕೊನೆಯ ಮೂರೂ ಪಂದ್ಯಗಳನ್ನೂ ಸೋತಿರುವುದು ಚೆನ್ನೈ ತಂಡದ ಮಾನಸಿಕತೆಯ ಮೇಲೆ ಪ್ರಭಾವ ಬೀರುತ್ತದಾ ಎಂಬ ಕುತೂಹಲವೂ ಇದೆ. ಆದರೆ, ಅಂಥದ್ದೊಂದು ಸಾಧ್ಯತೆ ತೀರಾ ಕಡಿಮೆ. ನಾಕೌಟ್ ಅಥವಾ ಪ್ಲೇ ಆಫ್ ವಿಚಾರಕ್ಕೆ ಬಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವರ್ತನೆಯೇ ವಿಭಿನ್ನವಾಗಿರುತ್ತದೆ.

  ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಟು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಮೂರು ಬಾರಿ ಚಾಂಪಿಯನ್ ಆಗಿದೆ. ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಐಪಿಎಲ್ ಗೆದ್ದಿರುವ ತಂಡ ಸಿಎಸ್​ಕೆ. ಸಾಮಾನ್ಯವಾಗಿ ಅನುಭವಿ ಆಟಗಾರರೇ ಚೆನ್ನೈ ತಂಡದ ಆಸ್ತಿ ಮತ್ತು ಗೆಲುವಿನ ರೂವಾರಿಗಳು. ಅನುಭವಿ ಕ್ರಿಕೆಟಿಗರು ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿಕೊಡಬಲ್ಲರು ಎಂಬುದು ಸಿಎಸ್​ಕೆ ಮಂತ್ರ ಇದ್ದಂತಿದೆ. ಟಾಪ್ ಆರ್ಡರ್​ನಲ್ಲಿ ಋತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿ ಮತ್ತು ಮೊಯೀನ್ ಅಲಿ ಅವರಿಂದ ಸ್ಥಿರ ಪ್ರದರ್ಶನ ಬರುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಅವರು ತಂಡದೆ ಬೆನ್ನೆಲುಬು ಆಗಿದ್ದಾರೆ. ಬೌಲಿಂಗ್​ನಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್ ಮತ್ತು ಜೋಷ್ ಹೇಜಲ್​ವುಡ್ ಸಾಕಷ್ಟು ಬಾರಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಇವತ್ತಿನ ಪಂದ್ಯಕ್ಕೆ ಸುರೇಶ್ ರೈನಾ ಆಡುತ್ತಾರಾ, ರಾಬಿನ್ ಉತ್ತಪ್ಪ ಆಡುತ್ತಾರಾ ಎಂಬ ಕುತೂಹಲ ಮಾತ್ರವೇ ಉಳಿದಿರುವುದು. ಉತ್ತಪ್ಪ ತಮಗೆ ಸಿಕ್ಕ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಂಡಿಲ್ಲವಾದ್ದರಿಂದ ರೈನಾ ಅವರಿಗೇ ಧೋನಿ ಮಣೆ ಹಾಕುವ ಸಾಧ್ಯತೆ ಇದೆ.

  ಇದನ್ನೂ ಓದಿ: K L Rahul: ಮತ್ತೆ RCBಗೆ ಬರ್ತಾರಾ ಕನ್ನಡಿಗ ರಾಹುಲ್​? ಅನುಮಾನ ಹುಟ್ಟುಹಾಕಿದ ಆ ಒಂದು ಪೋಸ್ಟ್​​

  ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸರ್ವಶಕ್ತ ತಂಡವಾಗಿ ಗೋಚರಿಸುತ್ತಿದೆ. ಪೃಥ್ವಿ ಶಾ, ಶಿಖರ್ ಧವನ್, ಹೆಟ್ಮೆಯರ್ ಅವರು ಸಿಡಿಯುತ್ತಿದ್ಧಾರೆ. ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ಹೆಚ್ಚು ರನ್ ಗಳಿಸದೇ ಇದ್ದರೂ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ದೊಡ್ಡ ಪುಷ್ಟಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಡೆಲ್ಲಿಯ ಬೌಲಿಂಗ್ ಸಾಕಷ್ಟು ಬಲಿಷ್ಠವಾಗಿದೆ. ಅವೇಶ್ ಖಾನ್ ಅವರು ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಎರಡನೇ ಸ್ಥಾನದಲ್ಲಿದ್ಧಾರೆ. ಕಗಿಸೋ ರಬಡ, ನೋರ್ಟಿಯಾ ಅವರು ಅಸಾಮಾನ್ಯ ವೇಗಿಗಳೆನಿಸಿದ್ಧಾರೆ. ಈ ಐಪಿಎಲ್​ನಲ್ಲಿ 22 ವಿಕೆಟ್ ಕಲೆಹಾಕಿರುವ ಅವೇಶ್ ಖಾನ್ ಅವರು 30 ವಿಕೆಟ್ ಕಿತ್ತಿರುವ ಹರ್ಷಲ್ ಪಟೇಲ್ ಅವರನ್ನ ಹಿಂದಿಕ್ಕುತ್ತಾರಾ ಎಂಬ ಕುತೂಹಲವೂ ಇವತ್ತು ಇದೆ.

  ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯ ಸಂಜೆ 7:30ಕ್ಕೆ ಆರಂಭಗೊಳ್ಳುತ್ತದೆ.

  ತಂಡಗಳು:

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮಯರ್, ಮಾರ್ಕಸ್ ಸ್ಟಾಯ್ನಿಸ್/ರಿಪಲ್ ಪಟೇಲ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಕ್ ನೋರ್ಟಿಯಾ, ಅವೇಶ್ ಖಾನ್.

  ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಋತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿ, ಮೊಯೀನ್ ಅಲಿ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ/ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್​ವುಡ್.
  Published by:Vijayasarthy SN
  First published: