ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಜಯ ಸಾಧಿಸಿ ತಲಾ 4 ಅಂಕಗಳನ್ನು ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್ ಕಳೆದ ಮೂರು ಪಂದ್ಯಗಳನ್ನು ಚೆನ್ನೈನಲ್ಲೇ ಆಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್ನ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡುತ್ತಿರುವುದು ವಿಶೇಷ.
ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿರುವ ಮುಂಬೈಗೆ ಸೋಲುಣಿಸಿ 2ನೇ ಸ್ಥಾನಕ್ಕೇರುವ ತವಕದಲ್ಲಿದ್ದು, ಇತ್ತ ರೋಹಿತ್ ಪಡೆ ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಉಭಯ ತಂಡಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಇದುವರೆಗೆ ಉಭಯ ತಂಡಗಳು 28 ಬಾರಿ ಸೆಣಸಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 16 ಬಾರಿ ಗೆಲುವು ದಾಖಲಿಸಿದೆ. ಇನ್ನು 12 ಬಾರಿ ಜಯ ಸಾಧಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ. ಕಳೆದ ಸೀಸನ್ನಲ್ಲಿ ಫೈನಲ್ ಸೇರಿ ಉಭಯ ತಂಡಗಳು 4 ಬಾರಿ ಮುಖಾಮುಖಿಯಾಗಿದೆ. ಆದರೆ ನಾಲ್ಕು ಬಾರಿ ಕೂಡ ಮುಂಬೈ ಇಂಡಿಯನ್ಸ್ ಡೆಲ್ಲಿಗೆ ಸೋಲುಣಿಸಿದೆ. ಕೊನೆಯ 10 ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯಗಳಲ್ಲಿ ಮಾತ್ರ ಮುಂಬೈ ವಿರುದ್ದ ಜಯ ಸಾಧಿಸಿದೆ.
ಮುಂಬೈ-ಡೆಲ್ಲಿ ಕದನದಲ್ಲಿ ಟಾಪ್ ರನ್ ಸರದಾರರು ಯಾರು ಎಂದು ನೋಡುವುದಾದರೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಹಿತ್ ಶರ್ಮಾ ಇದುವರೆಗೆ 633 ರನ್ ಕಲೆಹಾಕಿದ್ದಾರೆ. ಹಾಗೆಯೇ ಮುಂಬೈ ವಿರುದ್ದ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದು ಡೆಲ್ಲಿ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್. ಸೆಹ್ವಾಗ್ ಮುಂಬೈ ವಿರುದ್ದ 375 ರನ್ ಬಾರಿಸಿದ್ದಾರೆ.
ಇನ್ನು ಬೌಲರುಗಳ ವಿಭಾಗದಲ್ಲಿ ಡೆಲ್ಲಿ ವಿರುದ್ದ ಮುಂಬೈ ತಂಡದ ಯಶಸ್ವಿ ಬೌಲರ್ ಮಾಜಿ ಆಟಗಾರ ಲಸಿತ್ ಮಾಲಿಂಗ. ಮಾಲಿಂಗ ಡೆಲ್ಲಿ ವಿರುದ್ದ 22 ವಿಕೆಟ್ ಕಬಳಿಸಿದ್ದರು. ಹಾಗೆಯೇ ಪ್ರಸ್ತುತ ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 18 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಈ ಬಾರಿ ಕೂಡ ಡೆಲ್ಲಿಗೆ ಬುಮ್ರಾ ಸವಾಲಾಗಿ ಪರಿಣಮಿಸಲಿದೆ.
ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ ಮೇಲುಗೈ ಹೊಂದಿದ್ದು, ಈ ಬಾರಿ ಕೂಡ ಡೆಲ್ಲಿ ಕ್ಯಾಪಿಟಲ್ಸ್ಗೆ ಸೋಲುಣಿಸಿ ಸತತ ಐದು ಗೆಲುವು ದಾಖಲಿಸುವ ಇರಾದೆಯಲ್ಲಿದೆ ರೋಹಿತ್ ಪಡೆ. ಇದಾಗ್ಯೂ ಕಳೆದ ಸೀಸನ್ ಫೈನಲ್ ಪಂದ್ಯದ ಸೇಡನ್ನು ತೀರಿಸುವ ತವಕದಲ್ಲಿದ್ದಾರೆ ರಿಷಭ್ ಪಂತ್ ಹುಡುಗರು. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಕಾದಾಟ ನಿರೀಕ್ಷಿಸಬಹುದಾಗಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
ಡೆಲ್ಲಿ ಕ್ಯಾಪಿಟಲ್ಸ್: ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್ , ರಿಪಾಲ್ ಪಟೇಲ್, ಲುಕ್ಮನ್ ಹುಸೇನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ