David Warner- ಫಾರ್ಮ್ ಕಳೆದುಕೊಂಡಿದ್ದಷ್ಟೇ ಕಾರಣವಾ? SRH ಕ್ಯಾಪ್ಟನ್ಸಿ ವಾರ್ನರ್ ಕೈತಪ್ಪಿದ್ದು ಯಾಕೆ?

SRH Saga- ನನ್ನನ್ನ ಕ್ಯಾಪ್ಟನ್ಸಿಯಿಂದ ಯಾಕೆ ತೆಗೆದರು ಎಂದು ಯಾರೂ ವಿವರಣೆ ಕೊಟ್ಟಿಲ್ಲ. ಫಾರ್ಮ್ ಒಂದನ್ನೇ ಮಾನದಂಡವಾಗಿಟ್ಟುಕೊಂಡು ಕ್ಯಾಪ್ಟನ್ಸಿಯಿಂದ ಕೆಳಗಿಳಿಸುವುದು ತಪ್ಪು ನಿರ್ಧಾರ ಆಗುತ್ತದೆ ಎಂದು ಹೈದರಾಬಾದ್​ನ ಮಾಜಿ ಕ್ಯಾಪ್ಟನ್ ಡೇವಿಡ್ ವಾರ್ನರ್ ಹೇಳಿದ್ಧಾರೆ.

ಡೇವಿಡ್ ವಾರ್ನರ್​

ಡೇವಿಡ್ ವಾರ್ನರ್​

 • Share this:
  ದುಬೈ, ಅ. 12: ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಡೇವಿಡ್ ವಾರ್ನರ್ ಅವರನ್ನ ತೆಗೆದದ್ದನ್ನ ಕಂಡು ಹಲವರ ಹುಬ್ಬೇರಿತ್ತು. ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶ ಹಾಕಿದ್ದು ಬಿಟ್ಟರೆ ಯಾವತ್ತೂ ಹೇಳಿಕೆ ಕೊಟ್ಟವರಲ್ಲ. ಹೈದರಾಬಾದ್ ಟೀಮ್ ಮ್ಯಾನೇಜ್ಮೆಂಟ್​ನಿಂದಲೂ ಯಾವ ಹೇಳಿಕೆ ಬಂದದ್ದಿಲ್ಲ. ಇವತ್ತು ಮಂಗಳವಾರ ಡೇವಿಡ್ ವಾರ್ನರ್ ಅವರು ಇಂಡಿಯಾ ಟುಡೇ ವಾಹಿನಿ ಜೊತೆ ಮಾತನಾಡುವಾಗ ಹೈದರಾಬಾದ್ ತಂಡದ ಕ್ಯಾಪ್ಟನ್ಸಿ ಕೈತಪ್ಪಿದ ವಿಚಾರದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ ಕಾರಣ ಈವರೆಗೆ ಗೊತ್ತಾಗಿಲ್ಲ. ಮಾಲೀಕರಾಗಲೀ, ತಂಡದ ಮ್ಯಾನೇಜ್ಮೆಂಟ್ ಆಗಲೀ ನನಗೆ ವಿವರಣೆ ಕೊಟ್ಟಿಲ್ಲ ಎಂದು ವಾರ್ನರ್ ಹೇಳಿದ್ದಾರೆ.

  ಡೇವಿಡ್ ವಾರ್ನರ್ ಅವರು ಐಪಿಎಲ್​ನ ಮೊದಲ ಆರು ಪಂದ್ಯಗಳಲ್ಲಿ ನಾಯಕರಾಗಿದ್ದರು. ಆದರೆ, ಈ ಆರು ಪಂದ್ಯಗಳ ಪೈಕಿ ಹೈದರಾಬಾದ್​ಗೆ ಗೆಲ್ಲಲು ಸಾಧ್ಯವಾಗಿದ್ದು ಒಂದನ್ನು ಮಾತ್ರವೇ. ಈ ಸಂದರ್ಭದಲ್ಲಿ ಹೈದರಾಬಾದ್ ಫ್ರಾಂಚೈಸಿಯವರು ದಿಢೀರ್ ಎಂದು ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಅವರಿಗೆ ನಾಯಕ ಪಟ್ಟ ಕಟ್ಟಿದರು. ಇದಕ್ಕೆ ಏನು ಕಾರಣ ಅಂತ ನನಗೆ ಈಗಲೂ ಗೊತ್ತಿಲ್ಲ ಎಂದಿದ್ದಾರೆ ವಾರ್ನರ್.

  “ಫ್ರಾಂಚೈಸಿಯ ಮಾಲೀಕರು ಮತ್ತು ಟ್ರೆವರ್ ಬೇಲಿಸ್, ಲಕ್ಷ್ಮಣ್, ಮೂಡಿ ಮತ್ತು ಮುರಳಿ ಅವರಿಗೆ ಗೌರವ ಇಟ್ಟುಕೊಂಡು ಒಂದು ಮಾತು ಹೇಳುತ್ತೇನೆ. ಒಂದು ನಿರ್ಧಾರ ತೆಗೆದುಕೊಂಡರೆ ಅದು ಸರ್ವಸಮ್ಮತವಾಗಿರಬೇಕು. ನಿಮಗೆ ಯಾವ ವ್ಯಕ್ತಿ ಬೆಂಬಲಿಸುತ್ತಿದ್ದಾರೆ, ಯಾರು ಬೆಂಬಲಿಸುತ್ತಿಲ್ಲ ಎಂಬುದು ಗೊತ್ತಾಗುವುದೇ ಇಲ್ಲ.

  ”ನಿರಾಶೆಗೊಳಸಿದ ಮತ್ತೊಂದು ಸಂಗತಿ ಎಂದರೆ, ನನ್ನನ್ನ ನಾಯಕ ಸ್ಥಾನದಿಂದ ಯಾಕೆ ಕೆಳಗಿಳಿಸಲಾಯಿತು ಎಂಬುದನ್ನು ಯಾರೂ ವಿವರಿಸಲಿಲ್ಲ. ಫಾರ್ಮ್ ಆಧಾರವಾಗಿ ಇಟ್ಟುಕೊಂಡು ಕ್ಯಾಪ್ಟನ್ಸಿಯಿಂದ ಕೆಳಗಿಳಿಸುವ ನಿರ್ಧಾರ ತೆಗೆದುಕೊಳ್ಳುವುದು ಕ್ಲಿಷ್ಟಕರ. ನೀವು ಹಿಂದೆ ಮಾಡಿದ ಸಾಧನೆಯನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ ಅಂತ ಅನಿಸುವುದು ಸಹಜ. ಅದರಲ್ಲೂ ಒಂದು ಫ್ರಾಂಚೈಸಿಗೆ 100 ಪಂದ್ಯಗಳನ್ನ ಆಡಿರುವಾಗ ಫಾರ್ಮ್ ಅನ್ನ ಹೇಗೆ ಪರಿಗಣಿಸುತ್ತೀರಿ?

  ”....ಒಂದು ಫ್ರಾಂಚೈಸಿಗೆ 100 ಪಂದ್ಯಗಳನ್ನ ಆಡಿರುವ ನಾನು ಚೆನ್ನೈನಲ್ಲಿ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಕಳಪೆ ಆಡಿದ್ದನ್ನೇ ಪರಿಗಣಿಸುತ್ತಾರೆ ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಉತ್ತರ ಸಿಗದ ಪ್ರಶ್ನೆಗಳು ಇನ್ನೂ ಇವೆ. ಆದರೆ, ಅದನ್ನ ಇಲ್ಲಿಗೇ ಬಿಟ್ಟು ಮುನ್ನಡೆಯಬೇಕು ಅಷ್ಟೇ” ಎಂದು ಡೇವಿಡ್ ವಾರ್ನರ್ ಹೇಳಿದ್ಧಾರೆ.

  ಇದನ್ನೂ ಓದಿ: T20 World Cup- ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಗೆಲ್ಲೋದ್ಯಾರು? ಶಾಹಿದ್ ಅಫ್ರಿದಿ ಉತ್ತರ ಇದು

  ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗುಡ್ ಬೈ ಹೇಳುತ್ತೀರಾ ಎಂಬ ಪ್ರಶ್ನೆಗೆ ಡೇವಿಡ್ ವಾರ್ನರ್ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಹೈದರಾಬಾದ್ ತಂಡವನ್ನು ಮತ್ತೆ ಪ್ರತಿನಿಧಿಸಲು ಇಚ್ಛಿಸುತ್ತೇನೆ. ಆದರೆ, ಅದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಮಾಲೀಕರು ತೀರ್ಮಾನಿಸಬೇಕು ಅಷ್ಟೇ ಎಂದು ವಾರ್ನರ್ ತಿಳಿಸಿದ್ದಾರೆ. ಆದರೆ, ಮುಂದಿನ ಸೀಸನ್​ನಲ್ಲಿ ಅವರು ಸನ್​ರೈಸರ್ಸ್​ನಲ್ಲಿ ನಾಯಕ ಸ್ಥಾನ ಸಿಗದೇ ಹೋದರೆ ಬೇರಾವುದಾದರೂ ತಂಡಕ್ಕೆ ನಾಯಕನಾಗಲು ಬಯಸಿದ್ದಾರಂತೆ. ಮುಂಬೈ, ಡೆಲ್ಲಿ ಹೊರತುಪಡಿಸಿ ಉಳಿದ ಫ್ರಾಂಚೈಸಿಗಳು ಹೊಸ ನಾಯಕನ ಅನ್ವೇಷಣೆಯಲ್ಲಿರಲಿವೆ. ಹೀಗಾಗಿ, ವಾರ್ನರ್ ಅವರು ಯಾವ ತಂಡದ ಪಾಲಾಗುತ್ತಾರೆ ಎಂದು ಡಿಸೆಂಬರ್​ನಲ್ಲಿ ನಡೆಯುವ ಹರಾಜಿನಲ್ಲಿ ಗೊತ್ತಾಗುತ್ತದೆ.
  POINTS TABLE:
  ಇನ್ನು, ಈ ಬಾರಿಯ ಐಪಿಎಲ್​ನಲ್ಲಿ ಡೇವಿಡ್ ವಾರ್ನರ್ ಅವರು 8 ಪಂದ್ಯಗಳನ್ನ ಆಡಿ 195 ರನ್ ಗಳಿಸಿದ್ದಾರೆ. ಎರಡು ಅರ್ಧಶತಕಗಳನ್ನೂ ಭಾರಿಸಿದ್ಧಾರೆ. ಆದರೆ, ಎಂದಿನ ಲಯವಾಗಲೀ ಬಿಗ್ ಇನ್ನಿಂಗ್ಸ್ ಆಗಲೀ ಅವರಿಂದ ಬರಲಿಲ್ಲ. ಅವರ ಸ್ಟ್ರೈಕ್ ರೇಟ್ 107.23 ಬಹಳ ಅಸ್ವಾಭಾವಿಕ ಎನಿಸಿದೆ. ಆದರೆ, ನಾಲ್ಕೈದು ಪಂದ್ಯಗಳಲ್ಲಿ ವಿಫಲರಾದರೂ ಯಾವಾಗ ಬೇಕಾದರೂ ಫಾರ್ಮ್ ಕಂಡುಕೊಳ್ಳಬಲ್ಲಂಥ ಕ್ಲಾಸೀ ಬ್ಯಾಟರ್ ಅವರಾಗಿದ್ದಾರೆ.
  Published by:Vijayasarthy SN
  First published: