CSK vs SRH: ಸನ್​ರೈಸರ್ಸ್​ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್​ಗೆ ಸೂಪರ್ ಗೆಲುವು

172 ರನ್​ಗಳ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆಗೆ ಆರಂಭಿಕಾರ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದರು. ಬಿರುಸಿನ ಬ್ಯಾಟಿಂಗ್ ಮೂಲಕ ಇನಿಂಗ್ಸ್​ ಆರಂಭಿಸಿದ ಈ ಜೋಡಿ ಸನ್​ರೈಸರ್ಸ್​ ಬೌಲರುಗಳ ಬೆಂಡೆತ್ತಿದರು.

CSK

CSK

  • Share this:
    ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 23ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್​ರೈಸರ್ಸ್​ ಹೈದರಾಬಾದ್​ಗೆ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಆರಂಭಿಕ ಆಟಗಾರ ಜಾನಿ ಬೈರ್​ಸ್ಟೋವ್ (7) 4ನೇ ಓವರ್​ನಲ್ಲಿ ಸ್ಯಾಮ್​ ಕರನ್​ಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಡೇವಿಡ್ ವಾರ್ನರ್​ ಜೊತೆಗೂಡಿದ ಮನೀಷ್ ಪಾಂಡೆ ಉತ್ತಮ ಜೊತೆಯಾಟವಾಡಿದರು. ಅದರಂತೆ 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 102ಕ್ಕೆ ಬಂದು ನಿಂತಿತು. ಈ ನಡುವೆ ಮನೀಷ್ ಪಾಂಡೆ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

    ಇನ್ನೊಂದೆಡೆ ಎಚ್ಚರಿಕೆಯ ಆಟವಾಡಿದ ಡೇವಿಡ್ ವಾರ್ನರ್ 50ನೇ ಎಸೆತದ ಮೂಲಕ ಐಪಿಎಲ್​ನ 50ನೇ ಅರ್ಧಶತಕವನ್ನು ಪೂರೈಸಿದರು. ಅಲ್ಲದೆ ಮನೀಷ್ ಪಾಂಡೆ ಜೊತೆಗೂಡಿ 80 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದರು. ಇದರ ಬೆನ್ನಲ್ಲೇ ವಾರ್ನರ್ (57) ಲುಂಗಿ ಎನ್​ಗಿಡಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ (61) ಕೂಡ ಕ್ಯಾಚ್ ನೀಡಿ ನಿರ್ಗಮಿಸಿದರು.

    ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ವಿಲಿಯಮ್ಸನ್ ಶಾರ್ದುಲ್ ಠಾಕುರ್ ಎಸೆದ 19ನೇ ಓವರ್​ನಲ್ಲಿ 20 ರನ್ ಕಲೆಹಾಕಿದರು. ಹಾಗೆಯೇ 20ನೇ ಓವರ್​ನಲ್ಲಿ 13 ರನ್ ಕಲೆಹಾಕುವ ಮೂಲಕ ಸನ್​ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟದೊಂದಿಗೆ 171 ರನ್ ಪೇರಿಸಿತು.

    172 ರನ್​ಗಳ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆಗೆ ಆರಂಭಿಕಾರ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದರು. ಬಿರುಸಿನ ಬ್ಯಾಟಿಂಗ್ ಮೂಲಕ ಇನಿಂಗ್ಸ್​ ಆರಂಭಿಸಿದ ಈ ಜೋಡಿ ಸನ್​ರೈಸರ್ಸ್​ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಫಾಫ್ ಡುಪ್ಲೆಸಿಸ್​ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ರುತುರಾಜ್ ಗಾಯಕ್ವಾಡ್ 36 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಲ್ಲದೆ ಮೊದಲ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು.

    ತಂಡದ ಮೊತ್ತ 128 ಆಗಿದ್ದ ವೇಳೆ 13ನೇ ಓವರ್​ನಲ್ಲಿ ರಶೀದ್ ಖಾನ್​​ಗೆ ರುತುರಾಜ್ (75 ರನ್, 44 ಎಸೆತ) ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಫಾಫ್ ಡುಪ್ಲೆಸಿಸ್ ಅಬ್ಬರ ಮುಂದುವರೆದಿತ್ತು. ಇನ್ನು 3 ಬೌಂಡರಿಯೊಂದಿಗೆ 15 ರನ್​ಗಳಿಸಿದ್ದ ಮೊಯೀನ್ ಅಲಿಯನ್ನು ರಶೀದ್ ಖಾನ್​ ಪೆವಿಲಿಯನ್​ಗೆ ಕಳುಹಿಸಿದರು. ಇದರ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್​ (56 ರನ್, 38 ಎಸೆತ)ಯನ್ನು ಎಲ್​ಬಿ ಬಲೆಗೆ ಕೆಡವಿದ ರಶೀದ್ ಖಾನ್​ ಎಸ್​ಆರ್​ಹೆಚ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆದರೆ ಅದಾಗಲೇ ಸಿಎಸ್​ಕೆ ತಂಡವು ಗೆಲುವಿನ ಸಮೀಪ ತಲುಪಿ ಸುಸ್ಧಿತಿಯಲ್ಲಿತ್ತು.

    ಈ ಹಂತದಲ್ಲಿ ಜೊತೆಗೂಡಿದ ಸುರೇಶ್ ರೈನಾ-ರವೀಂದ್ರ ಜಡೇಜಾ ಉತ್ತಮ ಹೊಂದಾಣಿಕೆಯ ಆಟದ ಮೂಲಕ 18.3 ಓವರ್​ನಲ್ಲಿ ತಂಡದ ಮೊತ್ತವನ್ನು 173ಕ್ಕೆ ತಂದು ನಿಲ್ಲಿಸಿದರು. ಇದರೊಂದಿಗೆ ಚೆನ್ನೈ ಸೂಪರ್​ ಕಿಂಗ್ಸ್​ 7 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ, ದೀಪಕ್ ಚಹರ್.

    ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ , ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಕೇದರ್ ಜಾಧವ್, ವಿಜಯ್ ಶಂಕರ್, ರಶೀದ್ ಖಾನ್, ಜಗದೀಶ್ ಸುಚಿತ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್
    Published by:zahir
    First published: