ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ 45 ರನ್ಗಳ ಭರ್ಜರಿ ಜಯ ಸಾಧಿಸಿದೆ. ಸಿಎಸ್ಕೆ ನೀಡಿದ 189 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 143 ರನ್ಗಳಿಸಲಷ್ಟೇ ಶಕ್ತರಾದರು.
ಇದಕ್ಕೂ ಮುನ್ನ ಸಿಎಸ್ಕೆ ನೀಡಿದ 189 ರನ್ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ಗೆ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಮನನ್ ವೋಹ್ರಾ ಉತ್ತಮ ಆರಂಭ ಒದಗಿಸಿದರು. 3.5 ಓವರ್ನಲ್ಲಿ ಈ ಜೋಡಿ ಮೊದಲ ವಿಕೆಟ್ಗೆ 30 ರನ್ ಪೇರಿಸಿತು. ಇದೇ ವೇಳೆ ಸ್ಯಾಮ್ ಕರನ್ ಎಸೆತದಲ್ಲಿ ಮನನ್ ವೋಹ್ರಾ (14) ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಬಟ್ಲರ್ 5 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 43 ಕ್ಕೇರಿಸಿದರು. ಆದರೆ ಪವರ್ಪ್ಲೇನ ಕೊನೆಯ ಓವರ್ನಲ್ಲಿ ಸಂಜು ಸ್ಯಾಮ್ಸನ್ (1) ಕೂಡ ಸ್ಯಾಮ್ ಕರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಅದರಂತೆ ಮೊದಲ 6 ಓವರ್ನಲ್ಲಿ ಆರ್ಆರ್ 45 ರನ್ಗಳಿಸಲಷ್ಟೇ ಶಕ್ತರಾದರು.
ಈ ಹಂತದಲ್ಲಿ ಜೋಸ್ ಬಟ್ಲರ್ ಜೊತೆಗೂಡಿದ ಶಿವಂ ದುಬೆ ಉತ್ತಮ ಸಾಥ್ ನೀಡಿದರು. ಪರಿಣಾಮ ಮೊದಲ ಹತ್ತು ಓವರ್ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಮೊತ್ತ 81 ಕ್ಕೆ ಬಂದು ನಿಂತಿತು. ಆದರೆ 12ನೇ ಓವರ್ನಲ್ಲಿ ಜಡೇಜಾ ಎಸೆದ ಮೊದಲ ಎಸೆತವನ್ನು ಗುರುತಿಸುವಲ್ಲಿ ಎಡವಿದ ಜೋಸ್ ಬಟ್ಲರ್ 35 ಎಸೆತಗಳಲ್ಲಿನ ತಮ್ಮ 49 ರನ್ಗಳ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಶಿವಂ ದುಬೆ (17) ಅವರನ್ನೂ ಕೂಡ ಜಡೇಜಾ ಎಲ್ಬಿ ಬಲೆ ಬೀಳಿಸಿದರು.
ಇನ್ನು ಡೇವಿಡ್ ಮಿಲ್ಲರ್ (2) ಬಂದ ವೇಗದಲ್ಲೇ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇನ್ನು 15ನೇ ಓವರ್ನ ಮೊದಲ ಎಸೆತದಲ್ಲಿ ಪರಾಗ್ (3) ವಿಕೆಟ್ ಪಡೆದ ಮೊಯೀನ್ ಅಲಿ 3ನೇ ಎಸೆತದಲ್ಲಿ ಕ್ರಿಸ್ ಮೋರಿಸ್ (0) ವಿಕೆಟ್ ಪಡೆದರು.
8ನೇ ವಿಕೆಟ್ಗೆ ಜೊತೆಗೂಡಿದ ರಾಹುಲ್ ತೆವಾಠಿಯಾ ಹಾಗೂ ಜಯದೇವ್ ಉನಾದ್ಕಟ್ 27 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿದರು. 19ನೇ ಓವರ್ನಲ್ಲಿ ತೆವಾಠಿಯಾ (20) ಬ್ರಾವೊಗೆ ವಿಕೆಟ್ ಒಪ್ಪಿಸಿದರೆ, 20ನೇ ಓವರ್ನಲ್ಲಿ ಉನಾದ್ಕಟ್ (24) ಶಾರ್ದುಲ್ ಠಾಕೂರ್ ವಿಕೆಟ್ ನೀಡಿದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ಗಳಿಸುವುದರೊಂದಿಗೆ 45 ರನ್ಗಳಿಂದ ಶರಣಾಯಿತು. ಸಿಎಸ್ಕೆ ಪರ ಮೊಯೀನ್ ಅಲಿ 3 ಓವರ್ನಲ್ಲಿ 7 ರನ್ ನೀಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿಧಾನಗತಿಯ ಆರಂಭ ಒದಗಿಸಿದರು. ಮೊದಲ 4 ಓವರ್ನಲ್ಲಿ ಈ ಜೋಡಿ 25 ರನ್ ಕಲೆಹಾಕಿತು. ಈ ವೇಳೆ ಮುಸ್ತಾಫಿಜುರ್ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ರುತುರಾಜ್ (10) ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಜಯದೇವ್ ಉನಾದ್ಕಟ್ ಎಸೆದ 5ನೇ ಓವರ್ನಲ್ಲಿ ಅಬ್ಬರಿಸಿದ ಫಾಫ್ ಡುಪ್ಲೆಸಿಸ್ 3 ಬೌಂಡರಿ ಹಾಗೂ 1 ಸಿಕ್ಸ್ ಸಿಡಿಸಿ 19 ರನ್ ಕಲೆಹಾಕಿದರು. 17 ಎಸೆತಗಳಲ್ಲಿ 33 ರನ್ಗಳಿಸಿದ್ದ ಡುಪ್ಲೆಸಿಸ್ ಪವರ್ಪ್ಲೇನ ಅಂತಿಮ ಓವರ್ನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ರಿಸ್ ಮೋರಿಸ್ಗೆ ವಿಕೆಟ್ ಒಪ್ಪಿಸಿದರು. ಪರಿಣಾಮ 6 ಓವರ್ ಮುಕ್ತಾಯದ ವೇಳೆಗೆ ಚೆನ್ನೈ ಸ್ಕೋರ್ 46 ಕ್ಕೆ ಬಂದು ನಿಂತಿತು.
ಈ ಹಂತದಲ್ಲಿ ಜೊತೆಗೂಡಿದ ಮೊಯೀನ್ ಅಲಿ ಹಾಗೂ ಸುರೇಶ್ ರೈನಾ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಇದರ ಫಲವಾಗಿ 33 ರನ್ಗಳ ಜೊತೆಯಾಟ ಮೂಡಿಬಂತು. ಆದರೆ 10ನೇ ಓವರ್ನ ಎರಡನೇ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಮೊಯೀನ್ ಅಲಿ (26) ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಹಾಗೆಯೇ ಮೊದಲ ಹತ್ತು ಓವರ್ನಲ್ಲಿ ಸಿಎಸ್ಕೆ 82 ರನ್ ಕಲೆಹಾಕಿತು.
ಈ ವೇಳೆ ಕ್ರೀಸ್ಗಿಳಿದ ಅಂಬಾಟಿ ರಾಯುಡು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 12ನೇ ಓವರ್ ವೇಳೆಗೆ ಸಿಎಸ್ಕೆ ಮೊತ್ತ 100ರ ಗಡಿದಾಟಿತು. ತಂಡದ ಮೊತ್ತ 123 ರನ್ ಆಗಿದ್ದ ವೇಳೆ ಚೇತನ್ ಸಕರಿಯಾ ಎಸೆತದಲ್ಲಿ ಬಿರುಸಿನ ಹೊಡೆತ ಬಾರಿಸಿದ ರಾಯುಡು (27) ಬೌಂಡರಿ ಲೈನ್ನಲ್ಲಿದ್ದ ಪರಾಗ್ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಸುರೇಶ್ ರೈನಾ (18) ಕೂಡ ಕ್ಯಾಚ್ ನೀಡಿ ನಿರ್ಗಮಿಸಿದರು.
ರೈನಾ-ರಾಯುಡು ವಿಕೆಟ್ ಪತನದೊಂದಿಗೆ ಸಿಎಸ್ಕೆ ತಂಡದ ರನ್ ಗತಿ ನಿಧಾನಗೊಂಡಿತು. ಈ ಹಂತದಲ್ಲಿ ಕ್ರೀಸ್ನಲ್ಲಿದ್ದ ಧೋನಿ-ಜಡೇಜಾ ದೊಡ್ಡ ಹೊಡೆತ ಬಾರಿಸಲು ಒದ್ದಾಡಿದರು. ಪರಿಣಾಮ 17 ಓವರ್ ಮುಕ್ತಾಯದ ವೇಳೆಗೆ 143ಕ್ಕೆ ಬಂದು ನಿಂತಿತು. 18ನೇ ಓವರ್ನ 2ನೇ ಎಸೆತದಲ್ಲಿ 17 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಧೋನಿ ಕ್ಯಾಚ್ ನೀಡಿದರು. ನಾಯಕನ ಬೆನ್ನಲ್ಲೇ ಜಡೇಜಾ ಕೂಡ 8 ರನ್ಗಳಿಸಿ ಮೋರಿಸ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ 9 ಬಾಲ್ಗಳು ಬಾಕಿ ಇರುವಾಗ ಕ್ರೀಸ್ಗೆ ಆಗಮಿಸಿದ ಡ್ವೇನ್ ಬ್ರಾವೊ ತಾವು ಎದುರಿಸಿದ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು. 20ನೇ ಓವರ್ನ ಮೊದಲ ಎಸೆತದಲ್ಲೇ ಸ್ಯಾಮ್ ಕರನ್ (13) ರನೌಟ್ ಆದರು. ಕೊನೆಯ ಓವರ್ನಲ್ಲಿ 15 ರನ್ ಬಾರಿಸುವ ಮೂಲಕ ಡ್ವೇನ್ ಬ್ರಾವೋ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 188 ಕ್ಕೆ ತಂದು ನಿಲ್ಲಿಸಿದರು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್ನಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದ ಚೇತನ್ ಸಕರಿಯಾ ಯಶಸ್ವಿ ಬೌಲರ್ ಎನಿಸಿಕೊಂಡರು.
A look at the Playing XI for #CSKvRR
Follow the game here - https://t.co/gNnQUUgwcg #VIVOIPL https://t.co/tkj4lrYSyC pic.twitter.com/4dkuuBG4s4
— IndianPremierLeague (@IPL) April 19, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ