ಅಬುಧಾಬಿ, ಅ. 02: ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಗೂ ಸಮಾಧಾನಕರ ಗೆಲುವು ದಕ್ಕಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 190 ರನ್ಗಳ ಕಠಿಣ ಗುರಿಯನ್ನ ರಾಯಲ್ಸ್ ತಂಡ ಬೆನ್ನತ್ತುವ ನಿರೀಕ್ಷೆ ಬಹಳ ಮಂದಿಗೆ ಇದ್ದಿರಲಿಲ್ಲ. ಆದರೆ, ಸಂಜು ಸ್ಯಾಮ್ಸನ್ ನೇತೃತ್ವದ ಆರ್ ಆರ್ ತಂಡ 7 ವಿಕೆಟ್ಗಳಿಂದ ಅಮೋಘ ಗೆಲುವು ದಾಖಲಿಸಿದೆ. ಶಿವಮ್ ದುಬೇ ಮತ್ತು ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಆಟ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ತತ್ತರಿಸುವಂತೆ ಮಾಡಿದೆ. ದುಬೇ ಮತ್ತು ಜೈಸ್ವಾಲ್ ಇಬ್ಬರೂ ಅರ್ಧಶತಕ ಗಳಿಸಿದರು. ಮೊದಲ ವಿಕೆಟ್ಗೆ ಲೆವಿಸ್ ಮತ್ತು ಜೈಸ್ವಾಲ್ 77 ರನ್ ಜೊತೆಯಾಟ ನೀಡಿದರು. ಕೇವಲ 5 ಓವರ್ನಲ್ಲೇ ಇವರಿಬ್ಬರು ಅಷ್ಟು ರನ್ ಚಚ್ಚಿದರು. ಜೈಸ್ವಾಲ್ ಕೇವಲ 19 ಎಸೆತದಲ್ಲಿ ಅರ್ಧಶತಕ ಭಾರಿಸಿದರು. ಲೆವಿಸ್ ಮತ್ತು ಜೈಸ್ವಾಲ್ ಇಬ್ಬರೂ 4 ರನ್ ಅಂತರದಲ್ಲಿ ಔಟಾದಾಗ ರಾಯಲ್ಸ್ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಭಾವನೆ ಇತ್ತು. ಆದರೆ, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅದಕ್ಕೆ ಆಸ್ಪದ ಕೊಡಲಿಲ್ಲ. ಅರ್ಧಶತಕ ಭಾರಿಸಿದ ಶಿವಮ್ ದುಬೆ ತಮ್ಮ ನಾಯಕನನ್ನೂ ಮೀರಿಸಿದ ಆಟವಾಡಿ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.
ಇದಕ್ಕೆ ಮುನ್ನ, ಋತುರಾಜ್ ಗಾಯಕ್ವಡ್ ಅವರ ಅಮೋಘ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ಗೆ ಸೂಪರ್ ಮೊತ್ತ ದೊರಕಿತು. ಋತುರಾಜ್ ಅವರಿಗೆ ಇದು ಐಪಿಎಲ್ನಲ್ಲಿ ಅವರ ಚೊಚ್ಚಲ ಶತಕ. ಅವರು ಮತ್ತು ರವೀಂದ್ರ ಜಡೇಜಾ ಅವರ ಅಮೋಘ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 189 ರನ್ ಗಳಿಸಿತು. ಇದು ಸಿಎಸ್ಕೆ ಪಾಲಿಗೆ ಈ ಸೀಸನ್ನ ಗರಿಷ್ಠ ಸ್ಕೋರ್ ಎನಿಸಿದೆ. ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ ಮತ್ತು ರವೀಂದ್ರ ಜಡೇಜಾ ಅವರ ಜೊತೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾದ ಋತುರಾಜ್ ಬಹುತೇಕ ಏಕಾಂಗಿಯೇ ಸಿಎಸ್ಕೆಯ ಇನ್ನಿಂಗ್ಸ್ಗೆ ಪುಷ್ಟಿ ತುಂಬಿದರು. ಕೊನೆಕೊನೆಯಲ್ಲಿ ರವೀಂದ್ರ ಜಡೇಜಾ ಕೂಡ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸಿದರು. ಒಂದು ಹಂತದಲ್ಲಿ 95 ರನ್ ಗಳಿಸಿದ ಋತುರಾಜ್ ಗಾಯಕ್ವಡ್ಗೆ ಸ್ಟ್ರೈಕ್ ಸಿಗುವುದೇ ಅನುಮಾನ ಎನಿಸುವಂತೆ ರವೀಂದ್ರ ಜಡೇಜಾ ಆಟವನ್ನು ಆವರಿಸಿದ್ದರು. ಕೊನೆಯ ಎರಡು ಬಾಲ್ ಆಡುವ ಅವಕಾಶ ಋತುರಾಜ್ಗೆ ಸಿಕ್ಕಿತು. ಒಂದು ಬಾಲ್ನಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಬಾಲನ್ನು ಋತುರಾಜ್ ಸಿಕ್ಸರ್ ಸಿಡಿಸಿ ಶತಕ ಮುಟ್ಟಿದರು. ಆದರೆ, ಋತುರಾಜ್ ಅವರ ಶತಕವನ್ನೂ ಮೀರಿಸುವಂತಹ ಇನ್ನಿಂಗ್ಸನ್ನ ರಾಯಲ್ಸ್ ತಂಡದ ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಕಟ್ಟಿದರು.
ಈ ಐಪಿಎಲ್ನ 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಏಳು ಬದಲಾವಣೆಗಳನ್ನ ಮಾಡಲಾಯಿತು. ಮಾಡು ಇಲ್ಲ ಮಡಿ ಪಂದ್ಯವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಐದು ಬದಲಾವಣೆ ಆಗಿದೆ. ಶಿವಂ ದುಬೇ, ಗ್ಲೆನ್ ಫಿಲಿಪ್ಸ್, ಆಕಾಶ್ ಸಿಂಗ್, ಡೇವಿಡ್ ಮತ್ತು ಮಯಂಕ್ ಮರ್ಕಂಡೆ ಸ್ಥಾನ ಪಡೆದಿದ್ದಾರೆ. ಮಹಿಪಾಲ್ ಲೊಮ್ರೋರ್, ಲಿಯಾಮ್ ಲಿವಿಂಗ್ಸ್ಟೋನ್, ರಿಯಾನ್ ಪರಾಗ್, ಕಾರ್ತಿಕ್ ತ್ಯಾಗಿ ಮತ್ತು ಕ್ರಿಸ್ ಮಾರಿಸ್ ಅವರನ್ನ ಕೈಬಿಡಲಾಗಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀಪಕ್ ಚಹರ್ ಮತ್ತು ಡ್ವೇನ್ ಬ್ರಾವೋ ಬದಲು ಕೆಎಂ ಆಸಿಫ್ ಮತ್ತು ಸ್ಯಾಮ್ ಕುರನ್ ಅವರನ್ನ ಆಡಿಸಲಾಗುತ್ತಿದೆ. ಶಿವಂ ದುಬೆ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಈ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶದ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಂಡಿದೆ. 12 ಪಂದ್ಯಗಳಿಂದ 10 ಅಂಕಗಳನ್ನ ಗಳಿಸಿರುವ ಅದು ಆರನೇ ಸ್ಥಾನಕ್ಕೇರಿದೆ. ಉಳಿದಿರುವ ಎರಡು ಪಂದ್ಯಗಳನ್ನೂ ರಾಜಸ್ಥಾನ್ ರಾಯಲ್ಸ್ ಗೆಲ್ಲಲೇಬೇಕಾಗಬಹುದು.
ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಋತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಶಾರ್ದೂಲ್ ಠಾಕೂರ್, ಜೋಶ್ ಹೇಜಲ್ವುಡ್, ಕೆಎಂ ಆಸಿಫ್.
ರಾಜಸ್ಥಾನ್ ರಾಯಲ್ಸ್ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಮ್ ದುಬೇ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಮಯಂಕ್ ಮರ್ಕಂಡೆ, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರಹಮಾನ್.
ಇದನ್ನೂ ಓದಿ: MI vs DC- ಮುಂಬೈ ಇಂಡಿಯನ್ಸ್ಗೆ ಮತ್ತೆ ಸೋಲಿನ ಆಘಾತ; ಡೆಲ್ಲಿಗೆ ಅಮೋಘ ಜಯ
ಸ್ಕೋರು ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 189/4
(ಋತುರಾಜ್ ಗಾಯಕ್ವಾಡ್ ಅಜೇಯ 101, ಫ್ಯಾಫ್ ಡುಪ್ಲೆಸಿಸ್ 25, ಮೊಯೀನ್ ಅಲಿ 21, ರವೀಂದ್ರ ಜಡೇಜಾ ಅಜೇಯ 32 ರನ್ – ರಾಹುಲ್ ತೆವಾಟಿಯಾ 39/3)
ರಾಜಸ್ಥಾನ್ ರಾಯಲ್ಸ್ 16 ಓವರ್ 190/3
(ಯಶಸ್ವಿ ಜೈಸ್ವಾಲ್ 50, ಶಿವಮ್ ದುಬೆ ಅಜೇಯ 64, ಸಂಜು ಸ್ಯಾಮ್ಸನ್ 28, ಎವಿನ್ ಲೆವಿಸ್ 27 ರನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ