CSK vs PBKS- ದುಬೈನಲ್ಲಿ ಚೆನ್ನೈ-ಪಂಜಾಬ್ ಹಣಾಹಣಿ; ಪಿಬಿಕೆಎಸ್ ಮುಂದಿದೆ ಅಸಾಧ್ಯದ ಗುರಿ

IPL 2021, Match no. 53: PBKS vs CSK- ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿ ಕ್ವಾಲಿಫಯರ್​ಗೂ ಅರ್ಹತೆ ಪಡೆದಿದ್ದಾಗಿದೆ. ಪಂಜಾಬ್ ಕಿಂಗ್ಸ್ ಇವತ್ತು ಭಾರೀ ಅಂತರದಿಂದ ಗೆಲ್ಲಬೇಕು. ಮುಂಬೈ ಮತ್ತು ಕೋಲ್ಕತಾ ಭಾರೀ ಅಂತರಿಂದ ಸೋಲಬೇಕು. ಆಗ ಮಾತ್ರ ಪ್ಲೇ ಆಫ್ ಸಾಧ್ಯತೆ ಇರುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡ

 • Share this:
  ದುಬೈ, ಅ. 07: ಐಪಿಎಲ್ 2021 ಪಂದ್ಯಾವಳಿಯ ಲೀಗ್ ಹಂತ ಮುಗಿಯಲು ನಾಲ್ಕು ಪಂದ್ಯಗಳು ಬಾಕಿ ಇವೆ. ಇಂದು ಎರಡು ಪಂದ್ಯಗಳು ನಡೆಯುತ್ತಿವೆ. ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಸಂಜೆ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಮಧ್ಯೆ ಹಣಾಹಣಿ ಇದೆ. ಲೀಗ್ ಹಂತ ಬಹುತೇಕ ಅಂತಿಮಕ್ಕೆ ಬಂದರೂ ಪ್ಲೇ ಆಫ್​ನ ಒಂದು ಸ್ಥಾನ ಮಾತ್ರ ಇನ್ನೂ ಖಚಿತಗೊಂಡಿಲ್ಲ. ನಾಲ್ಕು ತಂಡಗಳಿಗೂ ಈಗಲೂ ಅವಕಾಶ ಇದೆ. ವಿಧಿಯಾಟ ಇದ್ದರೆ ನಾಳೆ ಕೊನೆಯ ಪಂದ್ಯವೇ ನಿರ್ಣಾಯಕ ಆಗಬಹುದು. ಇವತ್ತಿನ ಎರಡು ಪಂದ್ಯಗಳಲ್ಲಿ ಪಾಲ್ಗೊಂಡಿರುವ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ ಉಳಿದ ಮೂರು ತಂಡಗಳಿಗೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ.

  ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇವತ್ತು ಸೋತರೆ ಟೂರ್ನಿಯಿಂದ ಹೊರಬಿದ್ದಂತೆಯೇ. ಕೋಲ್ಕತಾ ನೈಟ್ ರೈಡರ್ಸ್ ತಂಡ ಇವತ್ತು ಸೋತರೂ ಅದೃಷ್ಟದ ಲೆಕ್ಕಾಚಾರದ ಮೇಲೆ ಆಸೆ ಇಟ್ಟುಕೊಂಡಿರಬೇಕಾಗುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇವತ್ತಿನ ಪಂದ್ಯ ತನ್ನ ಬಲಾಬಲವನ್ನ ಮತ್ತೊಮ್ಮೆ ಒರೆಗೆ ಹಚ್ಚಿಕೊಳ್ಳುವುದು ಬಿಟ್ಟರೆ ಪ್ಲೇ ಆಫ್ ವಿಚಾರದಲ್ಲಿ ಯಾವುದೇ ಮಹತ್ವ ಪಡೆದಿಲ್ಲ. ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಪ್-2 ಸ್ಥಾನವನ್ನೂ ಖಚಿತಪಡಿಸಿಕೊಂಡಿದೆ. ಪ್ಲೇ ಆಫ್​ನಲ್ಲಿ ಫೈನಲ್ ತಲುಪಲು ಸಿಇಎಸ್​ಕೆಗೆ ಎರಡು ಪಂದ್ಯಗಳ ಅವಕಾಶವೂ ಇರುತ್ತದೆ. ಹೀಗಾಗಿ, ಚೆನ್ನೈ ತಂಡ ಇವತ್ತು ಯಾವುದೇ ಒತ್ತಡಕ್ಕೆ ಒಳಗಾಗದಂತೆ ಆಡುವ ಯೋಗ ಪಡೆದಿದೆ.

  ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ 13 ಪಂದ್ಯಗಳಿಂದ 10 ಅಂಕಗಳನ್ನ ಹೊಂದಿದೆ. ಅದರ ನೆಟ್ ರನ್ ರೇಟ್ ಮೈನಸ್ 0.241 ಇದೆ. ಅದರ ಜೊತೆ ಒಂದು ಪ್ಲೇ ಆಫ್ ಸ್ಥಾನಕ್ಕೆ ಕೆಕೆಆರ್, ಮುಂಬೈ ಮತ್ತು ರಾಜಸ್ಥಾನ್ ತಂಡಗಳೂ ಇವೆ. ಕೆಕೆಆರ್ ಮತ್ತು ಮುಂಬೈ ತಂಡಗಳು 12 ಅಂಕಗಳನ್ನ ಹೊಂದಿವೆ. ಜೊತೆಗೆ ರನ್ ರೇಟ್ ಕೂಡ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳಿಗೆ ಪ್ಲೇ ಆಫ್ ಪ್ರವೇಶ ಅದೃಷ್ಟದ ಜೊತೆ ಆಟದಂತಾಗಿದೆ. ಇವತ್ತು ಪಂಜಾಬ್ ತಂಡಕ್ಕೆ ಪ್ಲೇ ಆಫ್ ಆಸೆ ಜೀವಂತವಾಗಬೇಕಾದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಲೇಬೇಕಾಗುತ್ತದೆ. ಜೊತೆಗೆ, ಮುಂಬೈ ಮತ್ತು ಕೋಲ್ಕತಾ ತಂಡಗಳು ತಂತಮ್ಮ ಪಂದ್ಯಗಳಲ್ಲಿ ಭಾರೀ ಅಂತರದಿಂದ ಸೋಲಬೇಕಾಗುತ್ತದೆ.
  POINTS TABLE:
  ಪಂಜಾಬ್ ಕಿಂಗ್ಸ್ ತಂಡ ಸದ್ಯದ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್ ನೋಡಿದರೆ ಬಲಾಢ್ಯವಾಗಿಯೇ ಇದೆ. ಓಪನರ್ಸ್ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಏಡನ್ ಮರ್ಕ್ರಮ್ ಅವರೂ ರನ್ ಗಳಿಸುತ್ತಿದ್ಧಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಶಾರುಕ್ ಖಾನ್ ಮತ್ತು ಮೋಯ್ಸಸ್ ಹೆನ್ರಿಕ್ಸ್ ಭರವಸೆ ಮೂಡಿಸಿದ್ಧಾರೆ. ಆದರೆ, ನಿಕೋಲಾಸ್ ಪೂರನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಪಂಜಾಬ್ ತಂಡ ಬೌಲಿಂಗ್ ಪ್ರಬಲವಾಗಿದೆ. ಮೊಹಮ್ಮದ್ ಶಮಿ, ಅರ್ಶ್​ದೀಪ್ ಸಿಂಗ್ ಅವರ ವೇಗ ಬೌಲಿಂಗ್ ತಂಡಕ್ಕೆ ಅನೇಕ ಬಾರಿ ಅಪಾಯದಿಂದ ಪಾರು ಮಾಡಿದ್ದಿದೆ. ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಅದ್ಭುತ ಪ್ರದರ್ಶನ ಮಾಡುತ್ತಿದ್ದಾರೆ.

  ಅತ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಡೀ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ನಡೆಸುತ್ತಾ ಬಂದಿದ್ದರೂ ಅದಕ್ಕೂ ಹಲವು ಸಮಸ್ಯೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಎಂಎಸ್ ಧೋನಿ ಅವರಿಂದ ಸಮರ್ಪಕ ಕೊಡುಗೆ ಬರುತ್ತಿಲ್ಲ. ಋತುರಾಜ್ ಗಾಯಕ್ವಾಡ್, ಡುಪ್ಲೆಸಿಸ್, ಮೊಯೀನ್ ಅಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಡ್ವೇನ್ ಬ್ರಾವೋ ಅವರ ಆಲ್​ರೌಂಡ್ ಆಟ ತಂಡವನ್ನು ಅನೇಕ ಬಾರಿ ಕೈ ಹಿಡಿದಿದೆ. ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಸಿಎಸ್​ಕೆಯ ದಿಗ್ವಿಜಯದ ಹಿಂದಿನ ಪಾತ್ರಧಾರಿಗಳಾಗಿದ್ದ ಸುರೇಶ್ ರೈನಾ ಮತ್ತು ಎಂಎಸ್ ಧೋನಿ ಅವರು ಲಯದಲ್ಲಿ ಇಲ್ಲದೆಯೂ ಚೆನ್ನೈ ಈ ಹಂತಕ್ಕೆ ಬಂದಿರುವುದು ಅಚ್ಚರಿಯಲ್ಲದೇ ಮತ್ತೇನೂ ಅಲ್ಲ. ಇದಕ್ಕೆ ಬಹುತೇಕ ಕಾರಣ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್​ವುಡ್ ಅವರಿರುವ ಬೌಲಿಂಗ್ ಲೈನಪ್. ಜೊತೆಗೆ, ಋತುರಾಜ್ ಗಾಯಕ್ವಾಡ್ ಅವರ ಸ್ಥಿರ ಬ್ಯಾಟಿಂಗ್ ಪ್ರದರ್ಶನ, ಹಾಗೂ ಕೆಳ ಮಧ್ಯಮಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಮತ್ತು ಬ್ರಾವೋ ಅವರ ಸ್ಫೋಟ ಬ್ಯಾಟಿಂಗ್ ಮತ್ತೊಂದು ಕಾರಣ.

  ಇದನ್ನೂ ಓದಿ: Dhoni- ಧೋನಿ ಬಾಲಿವುಡ್​ಗೆ ಹೋಗ್ತಾರಾ? ಐಪಿಎಲ್ ಇನ್ನೆಷ್ಟು ವರ್ಷ ಆಡ್ತಾರೆ? ಅವರೇ ಕೊಟ್ಟಿದ್ದಾರೆ ಉತ್ತರ

  ಇವತ್ತಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ. ಸುರೇಶ್ ರೈನಾ ಈ ಪಂದ್ಯವೂ ಬೆಂಚ್ ಕಾಯಬೇಕಾಗಬಹುದು. ಬ್ರಾವೋಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಿ ಮಿಶೆಲ್ ಸ್ಯಾಂಟ್ನರ್ ಅವರನ್ನ ಆಡಿಸುವ ಸಾಧ್ಯತೆ ಇದೆ. ಪಂಜಾಬ್ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತೊಂದು ಅವಕಾಶ ಪಡೆಯಬಹುದು. ಕ್ರಿಸ್ ಜಾರ್ಡನ್ ಬದಲು ಹರ್​ಪ್ರೀತ್ ಬ್ರಾರ್ ಆಡುವ ಸಾಧ್ಯೆ ಇದೆ.

  ತಂಡಗಳು:

  ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ/ಸುರೇಶ್ ರೈನಾ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್​ವುಡ್.

  ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ನಿಕೋಲಾಸ್ ಪೂರನ್, ಏಡನ್ ಮರ್ಕ್ರಂ, ಸರ್ಫರಾಜ್ ಖಾನ್/ದೀಪಕ್ ಹೂಡ, ಶಾರುಕ್ ಖಾನ್, ಮೋಯ್ಸಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್​ದೀಪ್ ಸಿಂಗ್.
  Published by:Vijayasarthy SN
  First published: