CSK vs PBKS: ಕೆಎಲ್ ರಾಹುಲ್ 42 ಬಾಲ್​ನಲ್ಲಿ 98 ರನ್; ಸಿಎಸ್​ಕೆ ವಿರುದ್ಧ ಪಂಜಾಬ್​ಗೆ ಸುಲಭ ಜಯ; ಪ್ಲೇ ಆಫ್ ಆಸೆ ಜೀವಂತ

IPL 2021, Match no. 53: PBKS vs CSK- ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲಲು ಒಡ್ಡಿದ 135 ರನ್ ಸವಾಲನ್ನು ಪಂಜಾಬ್ ಕಿಂಗ್ಸ್ 7 ಓವರ್ ಬಾಕಿ ಇರುವಂತೆಯೇ ಮೆಟ್ಟಿ ನಿಂತು ಪ್ಲೇ ಆಫ್ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಂಡಿದೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ದುಬೈ, ಅ. 07: ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ಸಂಕಷ್ಟದ ಸ್ಥಿತಿಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಇಂದು ಅತ್ಯಗತ್ಯವಾಗಿದ್ದ ಮಹೋನ್ನತ ಗೆಲುವು ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 6 ವಿಕೆಟ್​ಗಳಿಂದ ಜಯಭೇರಿ ಭಾರಿಸಿದೆ. ಇನ್ನೂ 7 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿ ಭಾರೀ ಅಂತರದ ಜಯ ದಕ್ಕಿಸಿಕೊಂಡ ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ನಾಳೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ದೊಡ್ಡ ಅಂತರದಿಂದ ಗೆದ್ದಾಗ ಮಾತ್ರ ಹಾಗೂ ಮುಂಬೈ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೋತಾಗ ಮಾತ್ರ ಪಂಜಾಬ್ ತಂಡಕ್ಕೆ ಪ್ಲೇ ಆಫ್ ಪ್ರವೇಶ ಸಿಗಲಿದೆ.

  ಚೆನ್ನೈ ತಂಡದ ಫ್ಯಾಫ್ ಡುಪ್ಲೆಸಿಸ್ ಮತ್ತು ಪಂಜಾಬ್ ತಂಡದ ಕೆಎಲ್ ರಾಹುಲ್ ಅವರ ಅಮೋಘ ಬ್ಯಾಟಿಂಗ್ ಈ ಪಂದ್ಯದ ಹೈಲೈಟ್ ಎನಿಸಿದೆ. ಅದರಲ್ಲೂ ಕೆಎಲ್ ರಾಹುಲ್ ಅವರದ್ದು ಅಬ್ಬರದ ಆಟವಾಗಿತ್ತು. ಒತ್ತಡದ ಸಂದರ್ಭದಲ್ಲಿ ನಾಯಕ ಇನ್ನಿಂಗ್ಸ್ ಆಡಿದರು. ಕೇವಲ 42 ಬಾಲ್​ನಲ್ಲಿ ಅವರು ಅಜೇಯ 98 ರನ್ ಗಳಿಸಿ ಕೇವಲ 2 ರನ್ನಿಂದ ಶತಕವಂಚಿತರಾದರು. ಎಂಟು ಭರ್ಜರಿ ಸಿಕ್ಸರ್ ಸಿಡಿಸಿದ ರಾಹುಲ್ ಗೆಲುವಿನ ರನ್ ಅನ್ನೂ ಸಿಕ್ಸರ್ ಸಿಡಿಸುವ ಮೂಲಕ ಗಳಿಸಿದರು. ಇನ್ನೂ ಏಳು ಓವರ್​ಗಳು ಬಾಕಿ ಇರುವಂತೆಯೇ 135 ರನ್ ಗುರಿಯನ್ನ ಪಂಜಾಬ್ ಮುಟ್ಟಲು ಸಾಧ್ಯವಾಗಿದ್ದು ರಾಹುಲ್ ಅವರ ಇನಿಂಗ್ಸ್ ಮಾತ್ರದಿಂದಲೇ.

  ಇದಕ್ಕೂ ಮುನ್ನ, ಟಾಸ್ ಗೆದ್ದು ಚೆನ್ನೈ ತಂಡವನ್ನ ಬ್ಯಾಟಿಂಗ್​ಗೆ ಕಳುಹಿಸಿ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವ ಕೆಎಲ್ ರಾಹುಲ್ ಪಡೆಯ ಪ್ರಯತ್ನ ಫಲಕೊಡಲಿಲ್ಲ. ಫ್ಯಾಫ್ ಡುಪ್ಲೆಸಿಸ್ ಅವರೊಬ್ಬರೇ ಪಂಜಾಬ್ ಕಿಂಗ್ಸ್​ನ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದು. ಸೌಥ್ ಆಫ್ರಿಕಾದ ಡುಪ್ಲೆಸಿಸ್ 55 ಬಾಲ್​ನಲ್ಲಿ 76 ರನ್ ಗಳಿಸಿ ಅಕ್ಷರಶಃ ಏಕಾಂಗಿಯಾಗಿ ಚೆನ್ನೈ ಇನ್ನಿಂಗ್ಸ್ ಕಟ್ಟಿದರು. ಅವರ ನಂತರ ಅತೀ ಹೆಚ್ಚು ಸ್ಕೋರ್ ಎಂದರೆ ರವೀಂದ್ರ ಜಡೇಜಾ ಗಳಿಸಿದ 15 ರನ್. ಡುಪ್ಲೆಸಿಸ್ ಅವರ ಆಟದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್​ಲ್ಲಿ 6 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಈ ಪಿಚ್​ನಲ್ಲಿ ಇದು ಸಾಧಾರಣ ಮೊತ್ತವಾದರೂ ಭಾರೀ ಅಂತರದಿಂದ ಪಂದ್ಯ ಗೆಲ್ಲುವ ಅನಿವಾರ್ಯತೆಯಲ್ಲಿರುವ ಪಂಜಾಬ್ ತಂಡಕ್ಕೆ ದೊಡ್ಡ ಸವಾಲಂತೂ ಆಗಿತ್ತು. ಪಂಜಾಬ್ ಆ ಸವಾಲನ್ನ ಮೆಟ್ಟಿ ನಿಂತು ಈಗ ಅದೃಷ್ಟದಾಟಕ್ಕೆ ತೆರೆದುಕೊಂಡಿದೆ.

  ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ದೌರ್ಬಲ್ಯ ಮತ್ತೊಮ್ಮೆ ಅನಾವರಣಗೊಂಡಿತು. ಫಾರ್ಮ್​ನಲ್ಲಿದ್ದ ಋತುರಾಜ್ ಗಾಯಕ್ವಾಡ್ ಔಟಾದ ಬಳಿಕ ತಂಡಕ್ಕೆ ಆಸರೆಯಾಗಿದ್ದು ಫ್ಯಾಫ್ ಮಾತ್ರ. ಮೊಯೀನ್ ಅಲಿ, ರಾಬಿನ್ ಉತ್ತಪ್ಪ ಮತ್ತು ಅಂಬಾಟಿ ರಾಯುಡು ಒಂದಂಕಿ ಸ್ಕೋರಿಗೇ ಔಟಾದರು. ಎಂಎಸ್ ಧೋನಿ ಕೂಡ ಹೆಚ್ಚು ರನ್ ಗಳಿಸಲಿಲ್ಲ.

  ಪಂಜಾಬ್ ಕಿಂಗ್ಸ್ ತಂಡದ ಬೌಲರ್​ಗಳಾದ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವಿ ಬಿಷ್ಓಐ್, ಹರ್​ಪ್ರೀತ್ ಬ್ರಾರ್ ಅದ್ಭುತ ಪ್ರದರ್ಶನ ತೋರಿದರು. ಈಗ ಸಾಧಾರಣ ಸವಾಲನ್ನ ಅತ್ಯಂತ ಕಡಿಮೆ ಓವರ್​ನಲ್ಲಿ ಬೆನ್ನತ್ತುವ ಅಸಾಧಾರಣ ಗುರಿ ಪಡೆದಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರ ಜೊತೆಯಾಟ ಪ್ರಮುಖ ಆಧಾರವಾಗಿರಲಿದೆ.

  ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತೊಂದು ಅವಕಾಶ ಪಡೆದರು. ಇನ್ನು, ಪಂಜಾಬ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಆಯಿತು. ನಿಕೋಲಾಸ್ ಪೂರನ್ ಬದಲು ಕ್ರಿಸ್ ಜಾರ್ಡನ್ ಅವರಿಗೆ ಅವಕಾಶ ಕೊಡಲಾಯಿತು..
  ORANGE CAP:
  ಇದು ಚೆನ್ನೈ ಮತ್ತು ಪಂಜಾಬ್ ತಂಡಕ್ಕೆ ಕೊನೆಯ ಪಂದ್ಯವಾಗಿತ್ತು. ಚೆನ್ನೈ ತಂಡ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಪಂಜಾಬ್ ತಂಡ 14 ಪಂದ್ಯಗಳಿಂದ 12 ಅಂಕಗಳನ್ನ ಹೊಂದಿದೆ. ಅದರ ನೆಟ್ ರನ್ ರೇಟ್ ಸೊನ್ನೆಗೆ ಏರಿಕೆ ಆಗಿದೆ. ಪ್ಲಸ್ 0.294 ನೆಟ್ ರನ್ ರೇಟ್ ಹೊಂದಿರುವ ಕೆಕೆಆರ್ ತಂಡ ನಾಳೆಯ ಪಂದ್ಯದಲ್ಲಿ ಹೀನಾಯವಾಗಿ ಸೋತರೆ ಮಾತ್ರ ಪಂಜಾಬ್ ಕಿಂಗ್ಸ್ ತಂಡಕ್ಕೆ ಅವಕಾಶ ಸಿಗುತ್ತದೆ. ಆದರೆ, ಮುಂಬೈ ಇಂಡಿಯನ್ಸ್ ತಂಡ  ಸನ್​ರೈಸರ್ಸ್ ವಿರುದ್ಧ ಗೆಲುವು ಸಾಧಿಸಿದರೆ ಪಂಜಾಬ್ ತಂಡದ ಆಸೆ ಕಮರಿಹೋಗುತ್ತದೆ.
  PURPLE CAP:

  ಇದನ್ನೂ ಓದಿ: KKR - MI Playoff Chances: ಐಪಿಎಲ್​ ಪ್ಲೇಆಫ್​ಗೆ ಆಯ್ಕೆಯಾಗಲು ಕೆಕೆಆರ್​ - ಮುಂಬೈ ಇಂಡಿಯನ್ಸ್​ಗೆ ಕಡೆಯ ಅವಕಾಶ

  ತಂಡಗಳು:

  ಚೆನ್ನೈ ಸೂಪರ್ ಕಿಂಗ್ಸ್ ತಂಡ: ಋತುರಾಜ್ ಗಾಯಕ್ವಾಡ್, ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್​ವುಡ್.

  ಪಂಜಾಬ್ ಕಿಂಗ್ಸ್ ತಂಡ: ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಏಡನ್ ಮರ್ಕ್ರಂ, ಸರ್ಫರಾಜ್ ಖಾನ್, ಶಾರುಕ್ ಖಾನ್, ಮೋಯ್ಸಸ್ ಹೆನ್ರಿಕ್ಸ್, ಹರ್​ಪ್ರೀತ್ ಬ್ರಾರ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್​ದೀಪ್ ಸಿಂಗ್.

  ಸ್ಕೋರು ವಿವರ:

  ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 134/6
  (ಫ್ಯಾಫ್ ಡುಪ್ಲೆಸಿಸ್ 76, ರವೀಂದ್ರ ಜಡೇಜಾ ಅಜೇಯ 15, ಋತುರಾಜ್ ಗಾಯಕ್ವಡ್ 12, ಎಂಎಸ್ ಧೋನಿ 12 ರನ್ – ಕ್ರಿಸ್ ಜೋರ್ಡಾನ್ 20/2, ಅರ್ಶ್​ದೀಪ್ ಸಿಂಗ್ 35/2)

  ಪಂಜಾಬ್ ಕಿಂಗ್ಸ್ 13 ಓವರ್ 139/4
  (ಕೆಎಲ್ ರಾಹುಲ್ ಅಜೇಯ 98, ಏಡನ್ ಮರ್ಕ್ರಮ್ 13, ಮಯಂಕ್ ಅಗರ್ವಾಲ್ 12 ರನ್- ಶಾರ್ದೂಲ್ ಠಾಕೂರ್ 28/3)
  Published by:Vijayasarthy SN
  First published: