ದುಬೈ, ಅ. 15: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2021ರ ಐಪಿಎಲ್ ಚಾಂಪಿಯನ್ ಆಗಿದೆ. ಫ್ಯಾಫ್ ಡುಪ್ಲೆಸಿ ಅವರ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯ ಅದ್ಭುತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಫೈನಲ್ನಲ್ಲಿ ಕೆಕೆಆರ್ ತಂಡವನ್ನು 27 ರನ್ಗಳಿಂದ ಸುಲಭವಾಗಿ ಮಣಿಸಿತು. ಗೆಲ್ಲಲು 193 ರನ್ಗಳ ಬೃಹತ್ ಮೊತ್ತದ ಗುರಿಗೆ ಪ್ರತಿಯಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್ 165 ರನ್ಗೆ ಅಂತ್ಯಗೊಂಡಿತು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಂತಾಗಿದೆ.
ಮಧ್ಯಮ ಕ್ರಮಾಂಕ ವೈಫಲ್ಯ: ಕೋಲ್ಕತಾ ತಂಡದ ಮಧ್ಯಮಕ್ರಮಾಂಕದ ವೈಫಲ್ಯ ತಂಡದ ಮೂರನೇ ಐಪಿಎಲ್ ಪ್ರಶಸ್ತಿಗೆ ಅಡ್ಡಗಾಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ನಲ್ಲಿ ಗೆಲುವಿನ ಹಾದಿಯಲ್ಲಿದ್ದ ಕೆಕೆಆರ್ ದಿಢೀರ್ ಸೋಲಿನ ಸುಳಿಗೆ ಸಿಲುಕಿತು. ಗೆಲ್ಲಲು 193 ರನ್ ಗುರಿ ಪಡೆದ ಕೋಲ್ಕತಾ ತಂಡ ಒಂದು ಹಂತದಲ್ಲಿ 91 ರನ್ಗಳ ಭರ್ಜರಿ ಆರಂಭಿಕ ಜೊತೆಯಾಟ ಬಂದು ಗೆಲುವಿನ ಹಾದಿಯಲ್ಲೇ ಸಾಗಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಎರಡನೇ ಕ್ವಾಲಿಫಯರ್ನಲ್ಲಿ ಆದ ರೀತಿಯಲ್ಲೇ ಕೆಕೆಆರ್ನ ಮಧ್ಯಮ ಕ್ರಮಾಂಕದ ಲೈನಪ್ ತರಗೆಲೆಗಳಂತೆ ಉದುರಿದೆ. 34 ರನ್ ಅಂತರದಲ್ಲಿ 7 ವಿಕೆಟ್ ಪತನಗೊಂಡು ಸೋಲಿನ ಸುಳಿಗೆ ಸಿಲುಕಿತು. ಕೊನೆಯಲ್ಲಿ ಲಾಕೀ ಫರ್ಗೂಸನ್ ಮತ್ತು ಶಿವಮ್ ಮಾವಿ ಒಂದಿಷ್ಟು ಬಿಡುಬೀಸಾಗಿ ಬ್ಯಾಟಿಂಗ್ ಮಾಡಿ ತಂಡದ ಸೋಲಿನ ಅಂತರವನ್ನ ತಗ್ಗಿಸಿದರು.
ಇಡೀ ಟೂರ್ನಿಯಲ್ಲಿ ಉತ್ತಮ ಆಟವಾಡುತ್ತಾ ಬಂದಿರುವ ವೆಂಕಟೇಶ್ ಅಯ್ಯರ್ ಮತ್ತು ಶುಬಮನ್ ಗಿಲ್ ಇಬ್ಬರೂ ಅರ್ಧಶತಕಗಳನ್ನ ಭಾರಿಸಿದರು. ಆದರೆ, ಅವರು ಹಾಕಿಕೊಟ್ಟ ಅಮೋಘ ಆರಂಭವನ್ನ ಮುಂದುವರಿಸಿಕೊಂಡು ಹೋಗಲು ಇತರ ಬ್ಯಾಟರ್ಸ್ ವಿಫಲರಾದರು. ನಿತೀಶ್ ರಾಣಾ, ಸುನೀಲ್ ನರೈನ್, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಶಾಕಿಬ್ ಅಲ್ ಹಸನ್, ರಾಹುಲ್ ತ್ರಿಪಾಠಿ ಅವರು ಒಂದಂಕಿ ಸ್ಕೋರ್ಗೇ ಔಟಾದರು.
ಚೆನ್ನೈ ಭರ್ಜರಿ ಬ್ಯಾಟಿಂಗ್:
ಇದಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಸರಿಯಾದ ಸಂದರ್ಭಕ್ಕೆ ಫಾರ್ಮ್ಗೆ ಮರಳಿದರು. ಸಿಎಸ್ಕೆಯ ವೀಕ್ ಲಿಂಕ್ ಎನಿಸಿದ್ದ ಮಧ್ಯಮ ಕ್ರಮಾಂಕದ ಬ್ಯಾಟರುಗಳು ಇತ್ತೀಚಿನ ಕೆಲ ಪಂದ್ಯಗಳಿಂದ ಸಿಡಿಯುತ್ತಿದ್ಧಾರೆ. ಇದರ ಫಲವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ನಲ್ಲಿ 192 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 193 ರನ್ ಗುರಿ ನೀಡಿದೆ. ಇಡೀ ಸರಣಿಯಲ್ಲಿ ಮಿಂಚುತ್ತಿರುವ ಫ್ಯಾಪ್ ಡುಪ್ಲೆಸಿ ಇಂದು ಫೈನಲ್ನಲ್ಲಿ ಇನ್ನೂ ಅಮೋಘ ಪ್ರದರ್ಶನ ನೀಡಿದರು. ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ ಕೂಡ ಡುಪ್ಲೆಸಿಗೆ ಸೂಕ್ತ ಬೆಂಬಲ ನೀಡಿದ ಫಲವಾಗಿ ಚೆನ್ನೈ ತಂಡ ಬೃಹತ್ ಮೊತ್ತ ಕಲೆಹಾಕಲು ಶಕ್ಯವಾಗಿದೆ.
ಇದನ್ನೂ ಓದಿ: MS Dhoni milestone- 300 ಟಿ20 ಪಂದ್ಯಗಳಲ್ಲಿ ನಾಯಕನಾದ ವಿಶ್ವದ ಏಕೈಕ ಕ್ರಿಕೆಟಿಗ ಎಂಎಸ್ ಧೋನಿ
ಋತುರಾಜ್ಗೆ ಆರೆಂಜ್ ಕ್ಯಾಪ್:
ಇದೇ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಜೋಡಿಗಳಾದ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಇಬ್ಬರೂ ಕೂಡ ಆರೆಂಜ್ ಕ್ಯಾಪ್ ರೇಸ್ನಲ್ಲಿ ಕೆಎಲ್ ರಾಹುಲ್ ಅವರನ್ನ ಹಿಂದಿಕ್ಕಿದರು. ಅಂತಿಮವಾಗಿ ಈ ರೇಸ್ನಲ್ಲಿ ವಿಜೇತರಾಗಿದ್ದು ಗಾಯಕ್ವಡ್. ಮನಮೋಹಕ ಹೊಡೆತಗಳನ್ನ ಭಾರಿಸಿದ ಸೌಥ್ ಆಫ್ರಿಕಾದ ಡುಪ್ಲೆಸಿ ಅವರು ಮೂರು ರನ್ಗಳಿಂದ ಆರೆಂಜ್ ಕ್ಯಾಪ್ ವಂಚಿತರಾದರು. ಕೊನೆಯ ಎಸೆತದಲ್ಲಿ ಅವರು ಸಿಕ್ಸರ್ಗೆ ಹೊಡೆದ ಚೆಂಡು ಕ್ಯಾಚ್ ಆಯಿತು. ಅದು ಸಿಕ್ಸರ್ ಹೋಗಿದ್ದರೆ ಆರೆಂಜ್ ಕ್ಯಾಪ್ ಡುಪ್ಲೆಸಿ ಪಾಲಾಗುತ್ತಿತ್ತು. ಈಗ ಋತುರಾಜ್ ಗಾಯಕ್ವಡ್ ಅವರು ಆರೆಂಕ್ ಕ್ಯಾಪ್ ಗೌರವ ಪಡೆದಿದ್ದಾರೆ.
ORANGE CAP:
ಕೆಕೆಆರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮೂರು ವಿಕೆಟ್ ಮತ್ತು ಸ್ಟಂಪಿಂಗ್ಗಳನ್ನ ಕೈಚೆಲ್ಲಿದ್ದು ತಂಡದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಋತುರಾಜ್ ಗಾಯಕ್ವಡ್ ಅವರು ಆರಂಭದಲ್ಲೇ ನೀಡಿದ ಸುಲಭ ಕ್ಯಾಚನ್ನ ಹಿಡಿಯಲು ಕಾರ್ತಿಕ್ ವಿಫಲರಾದರು.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಗೆದ್ದ ವರ್ಷ: 2010, 2011, 2018, 2021
ಯಾವ್ಯಾವ ತಂಡಗಳು ಎಷ್ಟು ಬಾರಿ ಐಪಿಎಲ್ ಗೆದ್ದಿವೆ?
1) ಮುಂಬೈ ಇಂಡಿಯನ್ಸ್: 5
2) ಚೆನ್ನೈ ಸೂಪರ್ ಕಿಂಗ್ಸ್: 4
3) ಕೋಲ್ಕತಾ ನೈಟ್ ರೈಡರ್ಸ್: 2
4) ಸನ್ರೈಸರ್ಸ್ ಹೈದರಾಬಾದ್: 1
5) ಡೆಕ್ಕನ್ ಚಾರ್ಜರ್ಸ್: 1
6) ರಾಜಸ್ಥಾನ್ ರಾಯಲ್ಸ್: 1
ಇನ್ನೂ ಐಪಿಎಲ್ ಗೆದ್ದಿಲ್ಲದ ತಂಡಗಳು:
1) ರಾಯಲ್ ಚಾಲೆಂಜರ್ಸ್ ಬೆಂಗಳೂರು
2) ಡೆಲ್ಲಿ ಕ್ಯಾಪಿಟಲ್ಸ್
3) ಪಂಜಾಬ್ ಕಿಂಗ್ಸ್
4) ರೈಸಿಂಗ್ ಪುಣೆ ಸೂಪರ್ ಜೈಂಟ್
ಇದನ್ನೂ ಓದಿ: Orange Cap- ಕೆಎಲ್ ರಾಹುಲ್ ಹಿಂದಿಕ್ಕಿದ ಇಬ್ಬರು ಬ್ಯಾಟರ್ಸ್; ಋತುರಾಜ್ಗೆ ಆರೆಂಜ್ ಕ್ಯಾಪ್
ತಂಡಗಳು:
ಕೋಲ್ಕತಾ ನೈಟ್ ರೈಡರ್ಸ್ ತಂಡ: ವೆಂಕಟೇಶ್ ಅಯ್ಯರ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಶಿವಮ್ ಮಾವಿ, ವರುಣ್ ಚಕ್ರವರ್ತಿ, ಲಾಕೀ ಫರ್ಗ್ಯೂಸನ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಋತುರಾಜ್ ಗಾಯಕ್ವಾಡ್, ಫ್ಯಾಫ್ ಡುಪ್ಲೆಸಿ, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್ವುಡ್.
ಸ್ಕೋರು ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 192/3
(ಫ್ಯಾಫ್ ಡುಪ್ಲೆಸಿ 86, ಋತುರಾಜ್ ಗಾಯಕ್ವಾಡ್ 32, ರಾಬಿನ್ ಉತ್ತಪ್ಪ 31, ಮೊಯೀನ್ ಅಲಿ ಅಜೇಯ 37 ರನ್ – ಸುನೀಲ್ ನರೈನ್ 26/2)
ಕೋಲ್ಕತಾ ನೈಟ್ ರೈಡರ್ಸ್ 20 ಓವರ್ 165/9
(ಶುಬ್ಮನ್ ಗಿಲ್ 51, ವೆಂಕಟೇಶ್ ಅಯ್ಯರ್ 50, ಶಿವಮ್ ಮಾವಿ 20, ಲಾಕೀ ಫರ್ಗೂಸನ್ ಅಜೇಯ 18 ರನ್ – ಶಾರ್ದೂಲ್ ಠಾಕೂರ್ 38/3, ಜೋಷ್ ಹೇಜಲ್ವುಡ್ 29/2, ರವೀಂದ್ರ ಜಡೇಜಾ 37/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ