CSK vs KKR- ಸಿಎಸ್​ಕೆ ಮತ್ತು ಕೆಕೆಆರ್ ತಂಡಗಳ ಪ್ರಮುಖ ಬಲ ಮತ್ತು ದೌರ್ಬಲ್ಯಗಳು

IPL 2021, Final Match at Dubai- KKR vs CSK: ಒಂಬತ್ತನೇ ಬಾರಿ ಫೈನಲ್​ಗೆ ಲಗ್ಗೆ ಇಟ್ಟು ನಾಲ್ಕನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಹಾಗೂ ಮೂರನೇ ಬಾರಿ ಫೈನಲ್ ಪ್ರವೇಶಿಸಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲಲು ಯತ್ನಿಸಿರುವ ಕೋಲ್ಕತಾ ನಡುವಿನ ಬಿಗ್ ಫೈನಲ್ ಇಂದು.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡ

 • Share this:
  ದುಬೈ: ಈ ಬಾರಿ ಎರಡು ವಿಭಿನ್ನ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಸೀಸನ್​ನ ಕೆಟ್ಟ ಪ್ರದರ್ಶನವನ್ನ ಬದಿಗೊತ್ತಿ ಫೀನಿಕ್ಸ್​ನಂತೆ ಈ ವರ್ಷ ಮೇಲೆದ್ದು 9ನೇ ಬಾರಿ ಫೈನಲ್ ತಲುಪಿದೆ. ಇನ್ನೊಂದೆಡೆ, ಈ ವರ್ಷ ಮೊದಲ ಲೆಗ್​ನಲ್ಲಿ ಹೀನಾಯ ಪ್ರದರ್ಶನ ತೋರಿ, ಯುಎಇಯಲ್ಲಿನ ಎರಡನೇ ಲೆಗ್​ನಲ್ಲಿ ಫೀನಿಕ್ಸ್​ನಂತೆ ಮೇಲೆದ್ದು 3ನೇ ಬಾರಿ ಫೈನಲ್ ತಲುಪಿರುವ ಕೆಕೆಆರ್ ತಂಡ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ 8 ಎಂಟು ಫೈನಲ್​ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಇವತ್ತು ಗೆದ್ದರೆ ನಾಲ್ಕನೇ ಪ್ರಶಸ್ತಿ ಸಂದಂತಾಗುತ್ತದೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಹಿಂದೆ ಫೈನಲ್ ತಲುಪಿದ ಎರಡೂ ಬಾರಿಯೂ ಪ್ರಶಸ್ತಿ ಗೆದ್ದಿದೆ. ಅಂದರೆ, ಫೈನಲ್​ನಲ್ಲಿ ಕೆಕೆಆರ್​ದು ಕ್ಲೀನ್ ಸ್ಲೇಟ್.

  ಇವತ್ತಿನ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲುತ್ತಾರೆ ಎಂಬುದು ಅತಿ ಹೆಚ್ಚು ಕುತೂಹಲ ಉಳ್ಳದ್ದು. ಹಾಗೆಯೇ, ಆರೆಂಜ್ ಕ್ಯಾಪ್ ರೇಸ್​ನಲ್ಲಿರುವ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಅವರು ಕೆಎಲ್ ರಾಹುಲ್ ಅವರನ್ನ ಹಿಂದಿಕ್ಕುತ್ತಾರಾ ಎಂಬ ಕುತೂಹಲವೂ ಇದೆ. ಈಗ ಫೈನಲ್​ಗೆ ಮುನ್ನ ಎರಡೂ ತಂಡಗಳಿಗೆ ವಿನ್ನಿಂಗ್ ಕಾಂಬಿನೇಶನ್ ಸಿಕ್ಕಿದಂತಿದೆ. ಬಹುಶಃ ಎರಡೂ ತಂಡಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.

  ಚೆನ್ನೈ ತಂಡದ ಚೇಸಿಂಗ್ ವರ್ಸಸ್ ಕೋಲ್ಕತಾ ತಂಡದ ಬೌಲಿಂಗ್ ಶಕ್ತಿ:

  ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಕೆಕೆಆರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗೆಲ್ಲಾ ಬಹುತೇಕ ಪ್ರತಿಸ್ಪರ್ಧಿ ತಂಡವನ್ನ 140 ರನ್ ಮೊತ್ತದೊಳಗೇ ನಿಯಂತ್ರಿಸಿದೆ. ಇನ್ನೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್​ನಲ್ಲಿ ಪಂಟರ್ ಎನಿಸಿದೆ. ಈ ಸೀಸನ್​ನಲ್ಲಿ ಸಿಎಸ್​ಕೆ ಚೇಸಿಂಗ್ ಮಾಡಿದ ಎಲ್ಲಾ ಆರು ಪಂದ್ಯಗಳನ್ನ ಗೆದ್ದಿದೆ. ಇಂಥದ್ದೊಂದು ಚೇಸಿಂಗ್ ದಾಖಲೆ ಮಾಡಿದ ಗರಿಮೆ ಹೊಂದಿರುವ ಇನ್ನೊಂದು ತಂಡ ಎಂದರೆ ಅದು ಮುಂಬೈ ಇಂಡಿಯನ್ಸ್. ಅದು ಕಳೆದ ವರ್ಷದ ಐಪಿಎಲ್​ನಲ್ಲಿ ಒಮ್ಮೆಯೂ ಚೇಸಿಂಗ್​ನಲ್ಲಿ ಸೋತಿರಲಿಲ್ಲ.

  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲ:

  * ಆರಂಭಿಕ ಬ್ಯಾಟರ್ಸ್ ಋತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿ ಇಡೀ ಸೀಸನ್​ನಲ್ಲಿ ಚೆನ್ನೈ ತಂಡಕ್ಕೆ ಅದ್ಭುತ ಓಪನಿಂಗ್ ಕೊಡುತ್ತಾ ಬರುತ್ತಿದ್ದಾರೆ. ಸಿಎಸ್​ಕೆಯ ಬ್ಯಾಟಿಂಗ್ ಬೆನ್ನೆಲುಬು ಎಂದಾದರೆ ಇವರಿಬ್ಬರೇ.

  * ಮೊಯೀನ್ ಅಲಿ ಮ್ಯಾಚ್ ವಿನಿಂಗ್ ಪ್ರದರ್ಶನ ತೋರಿಲ್ಲವಾದರೂ ತಂಡಕ್ಕೆ ಅಮೂಲ್ಯ ಎನಿಸುವಷ್ಟು ರನ್​ಗಳನ್ನ ಕಲೆಹಾಕುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ಧಾರೆ.

  * ರಾಬಿನ್ ಉತ್ತಪ್ಪ ಮತ್ತು ಎಂಎಸ್ ಧೋನಿ ಇಬ್ಬರೂ ಸರಿಯಾದ ಸಮಯಕ್ಕೆ ಒಳ್ಳೆಯ ಲಯದಲ್ಲಿದ್ಧಾರೆ. ಕಳೆದ ಪಂದ್ಯದಲ್ಲಿ ಇಬ್ಬರೂ ಮಿಂಚಿದ್ದರು. ಧೋನಿ ತಾನಿನ್ನೂ ಒಳ್ಳೆಯ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಇದು ಫೈನಲ್​ನಲ್ಲಿ ಸಿಎಸ್​ಕೆಯ ಬಲವನ್ನ ಇಮ್ಮಡಿಗೊಳಿಸಿದೆ.

  * ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಸ್ಫೋಟಕ ಬ್ಯಾಟಿಂಗ್ ಆಡಿ ಪಂದ್ಯಕ್ಕೆ ದಿಢೀರ್ ತಿರುವು ಕೊಡಲು ಸಮರ್ಥರಿದ್ದಾರೆ.

  * ಶಾರ್ದೂಲ್ ಠಾಕೂರ್, ಜೋಷ್ ಹೇಜಲ್​ವುಡ್, ದೀಪಕ್ ಚಾಹರ್, ಡ್ವೇನ್ ಬ್ರಾವೋ ಅವರಿರುವ ಚೆನ್ನೈ ತಂಡದ ಬೌಲಿಂಗ್ ಶಕ್ತಿ ಪ್ರಬಲವಾಗಿದೆ. ರವೀಂದ್ರ ಜಡೇಜಾ ಕೂಡ ಬಹಳ ಡೇಂಜರಸ್ ಬೌಲರ್. ಮೊಯೀನ್ ಅಲಿ ಈ ಐಪಿಎಲ್​ನಲ್ಲಿ ಬೆಸ್ಟ್ ಎಕಮಾನಿಕಲ್ ಬೌಲಿಂಗ್ ರೇಟ್ ಹೊಂದಿರುವ ಸ್ಪಿನ್ನರ್.

  * ಚೆನ್ನೈ ತಂಡ ಈ ಸೀಸನ್​ನಲ್ಲಿ ಚೇಸಿಂಗ್ ಮಾಡಿದ ಆರೂ ಪಂದ್ಯಗಳನ್ನ ಗೆದ್ದಿದೆ. ಇದು ತಂಡಕ್ಕೆ ಪ್ಲಸ್ ಪಾಯಿಂಟ್.

  * ಎಂಎಸ್ ಧೋನಿ ನಾಯಕತ್ವ ಚೆನ್ನೈ ತಂಡದ ದೊಡ್ಡ ಪಾಸಿಟಿವ್ ಅಂಶ. ಜೊತೆಗೆ ಈಗ ಅವರು ಹಿಂದಿನ ಫಿನಿಶರ್ ಧೋನಿಯ ತುಣಕನ್ನ ಮತ್ತೆ ತೋರಿಸಿದ್ದಾರೆ.

  ಇದನ್ನೂ ಓದಿ: Beautiful Girls in IPL- ಐಪಿಎಲ್​ನಲ್ಲಿ ಪ್ರೇಕ್ಷಕರ ಕಣ್ ಸೆಳೆದ ಚಂದುಳ್ಳಿ ಚೆಲುವೆಯರು ಇವರು

  ಕೆಕೆಆರ್ ತಂಡದ ಬಲ:

  * ಸಿಎಸ್​ಕೆಯಂತೆ ಚೆನ್ನೈ ತಂಡದ ಓಪನಿಂಗ್ ಬ್ಯಾಟ್ಸ್​ಮನ್ ಕೆಕೆಆರ್​ನ ಪ್ರಮುಖ ಶಕ್ತಿಯಾಗಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ಶುಬ್ಮನ್ ಗಿಲ್ ಆರಂಭಿಕ ಬ್ಯಾಟರ್ಸ್ ಆಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

  * ಈ ಸೀಸನ್​ನ ಐಪಿಎಲ್ ತಂಡಗಳ ಪೈಕಿ ಅತ್ಯಂತ ಪ್ರಬಲ ಬೌಲಿಂಗ್ ಪಡೆ ಹೊಂದಿರುವ ತಂಡಗಳಲ್ಲಿ ಕೆಕೆಆರ್ ಪ್ರಮುಖವಾದುದು. ಲಾಕೀ ಫರ್ಗ್ಯೂಸನ್, ವರುಣ್ ಚಕ್ರವರ್ತಿ, ಶಿವಮ್ ಮಾವಿ, ಸುನೀಲ್ ನರೈನ್ ಮತ್ತು ಶಾಕಿಬ್ ಅಲ್ ಹಸನ್ ಅವರು ಎದುರಾಳಿ ಬ್ಯಾಟುಗಾರರನ್ನ ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಕೆಕೆಆರ್ ತಂಡದ ದೌರ್ಬಲ್ಯ:

  * ಆರಂಭಿಕ ಬ್ಯಾಟುಗಾರರನ್ನ ಹೊರತುಪಡಿಸಿದರೆ ಕೆಕೆಆರ್​ನ ಉಳಿದ ಬ್ಯಾಟರ್ಸ್ ಹೇಳಿಕೊಳ್ಳುವಂಥ ಇಂಪ್ಯಾಕ್ಟ್ ಕೊಟ್ಟಿಲ್ಲ. ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ ಅವರು ಆತ್ಮವಿಶ್ವಾಸದಿಂದ ಆಡುತ್ತಿದ್ಧಾರಾದರೂ ನಿರೀಕ್ಷಿಸಿದಷ್ಟು ರನ್ ಕೊಡುಗೆ ನೀಡುತ್ತಿಲ್ಲ.

  * ನಾಯಕ ಇಯಾನ್ ಮಾರ್ಗನ್ ಒಬ್ಬ ಬ್ಯಾಟ್ಸ್​ಮನ್ ಆಗಿ ಸತತವಾಗಿ ವಿಫಲರಾಗುತ್ತಿದ್ಧಾರೆ. ಅಗತ್ಯ ಎನಿಸಿದ ದೊಡ್ಡ ಸಂದರ್ಭದಲ್ಲೂ ಅವರು ಮೈಕೊಡವಿ ನಿಂತು ಆಡಲು ಆಗುತ್ತಿಲ್ಲ. ಚೆನ್ನೈ ತಂಡದ ನಾಯಕ ಧೋನಿ ಕಳೆದ ಪಂದ್ಯದಲ್ಲಿ ಮ್ಯಾಚ್ ವಿನಿಂಗ್ ಪ್ರದರ್ಶನ ನೀಡಿ ಛಾಪು ಮೂಡಿಸಿದ್ದರು. ಇವತ್ತು ಇಯಾನ್ ಮಾರ್ಗನ್ ಅಂಥದ್ದೇ ಇನ್ನಿಂಗ್ಸ್ ಕಟ್ಟುತ್ತಾರಾ ಕಾದು ನೋಡಬೇಕು.

  * ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಕೆಕೆಆರ್ ತಂಡದ ಬ್ಯಾಟಿಂಗ್ ದೌರ್ಬಲ್ಯ ಬಹಳ ಸ್ಪಷ್ಟವಾಗಿ ಅನಾವರಣಗೊಂಡಿತ್ತು. ಬಹಳ ಸುಲಭ ಗೆಲುವಿನತ್ತ ಸಾಗುತ್ತಿದ್ದ ಕೆಕೆಆರ್ ತಂಡ ಕೆಲವೇ ರನ್ ಅಂತರದಲ್ಲಿ ಐದಾರು ವಿಕೆಟ್ ಕಳೆದುಕೊಂಡು ಇದ್ದಕ್ಕಿದ್ದಂತೆ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಕೊನೆಯ ಓವರ್​ನ ಐದನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಭಾರಿಸದೇ ಹೋಗಿದ್ದರೆ ಕೆಕೆಆರ್​ಗೆ ಫೈನಲ್ ತಲುಪಲು ಸಾಧ್ಯವಾಗುತ್ತಿರಲಿಲ್ಲ.

  ತಂಡಗಳು:

  ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ವೆಂಕಟೇಶ್ ಅಯ್ಯರ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಶಾಕಿಬ್ ಅಲ್ ಹಸನ್, ಸುನೀಲ್ ನರೈನ್, ಶಿವಮ್ ಮಾವಿ, ವರುಣ್ ಚಕ್ರವರ್ತಿ, ಲಾಕೀ ಫರ್ಗ್ಯೂಸನ್.

  ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಫ್ಯಾಫ್ ಡುಪ್ಲೆಸಿ, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್​ವುಡ್.
  Published by:Vijayasarthy SN
  First published: